ಸಿನಿಮೀಯ ರೀತಿಯಲ್ಲಿ 15 ಕಿ.ಮೀ. ಬೆನ್ನಟ್ಟಿ ಭ್ರಷ್ಟ ಅಧಿಕಾರಿಯ ಸೆರೆ!

ಪರವಾನಿಗೆ ನೀಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳ ಮೇಲೆಯೇ ಕಾರು ಹತ್ತಿಸಿ ಪರಾರಿಯಾಗಲು ಯತ್ನಿಸಿದ ಆಹಾರ ಇಲಾಖೆಯ ನಿರೀಕ್ಷಕನೊಬ್ಬನನ್ನು ಲೋಕಾಯುಕ್ತ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ಉತ್ತರ ವಿಭಾಗದ ತಹಶೀಲ್ದಾರ್‌ ಕಚೇರಿಯಲ್ಲಿ ಆಹಾರ ನಿರೀಕ್ಷಕ ಆಗಿರುವ ಮಹಾಂತೇಗೌಡ ಬಿ. ಕಡಬಾಳು ಬಂಧಿತ ಅಧಿಕಾರಿ. ಆರೋಪಿ ವಿರುದ್ಧ ರಂಗಧಾಮಯ್ಯ ಎಂಬವರು ದೂರು ನೀಡಿದ್ದರು.

ರಂಗಧಾಮಯ್ಯ ಅವರಿಗೆ ಉದ್ದಿಮೆ ಪರವಾನಿಗೆ ನೀಡಲು ಮಹಾಂತೇ ಗೌಡ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಯಿಟ್ಟಿದ್ದ. ಈ ಪೈಕಿ 12 ಸಾವಿರ ರೂ. ಗಳನ್ನು ಮುಂಗಡವಾಗಿ ಪಡೆದು ಕೊಂಡಿದ್ದ. ಬಾಕಿ ಹಣ ಶುಕ್ರವಾರ ಕೊಡುವಂತೆ ಸೂಚಿಸಿದ್ದ. ಆದರೆ ಲಂಚ ನೀಡಲು ಇಷ್ಟವಿಲ್ಲದ ರಂಗಧಾಮಯ್ಯ ಅವರು ಈ ಕುರಿತು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾ ಯುಕ್ತ ಅಧಿಕಾರಿಗಳು ಶುಕ್ರವಾರ ರಾತ್ರಿ ದಾಳಿ ನಡೆಸಿದ್ದರು.

ಶುಕ್ರವಾರ ರಾತ್ರಿ ನಗರದ ಸ್ಥಳ ವೊಂದರಲ್ಲಿ ರಂಗಧಾಮಯ್ಯ ಅವ ರಿಂದ ಆರೋಪಿ ಮಹಾಂತೇಗೌಡ 43 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ. ಕಾದು ಕುಳಿತಿದ್ದ ಲೋಕಾಯುಕ್ತ ಅಧಿ ಕಾರಿಗಳು ಏಕಾಏಕಿ ದಾಳಿ ನಡೆಸಿದರು. ಇದು ಅರಿವಿಗೆ ಬರುತ್ತಲೇ ಆರೋಪಿ ಮಹಾಂತೇಗೌಡ ಲೋಕಾಯುಕ್ತ ಅಧಿಕಾರಿಗಳನ್ನು ತಳ್ಳಿ ತನ್ನ ಕಾರಿನಲ್ಲಿ ಪರಾರಿಯಾದ. ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಸುಮಾರು 15 ಕಿ.ಮೀ. ದೂರ ಬೆನ್ನಟ್ಟಿದರು. ಕೊನೆಗೆ ನೆಲಮಂಗಲದ ಸೊಂಡೇಕೊಪ್ಪ ರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿದರು.

ಆಗ ಆರೋಪಿ ಮಹಾಂತೇಗೌಡ ಲೋಕಾಯುಕ್ತ ಪೊಲೀಸರು ಮತ್ತು ಸಾಕ್ಷಿಗಳಾಗಿ ಬಂದಿದ್ದ ಪಂಚರ ಮೇಲೆ ಕಾರು ಹತ್ತಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ. ಅಷ್ಟರಲ್ಲಿ ಪೊಲೀಸರು ಆತನ ಕಾರಿನ ಸುತ್ತ ಇಲಾಖೆಯ ಕಾರುಗಳನ್ನು ಅಡ್ಡಗಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

43 ಸಾವಿರ ರೂ. ಲಂಚ ಸಮೇತ ಮಹಾಂತೇಗೌಡನನ್ನು ಬಂಧಿಸಲಾಗಿದೆ. ಲಂಚ ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ದೂರು ದಾಖಲಿಸಲಾಗಿದೆ. ಜತೆಗೆ ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಮತ್ತು ವಾಹನ ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಆರೋಪದಡಿ ನೆಲಮಂಗಲ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದರು.

 
 
 
 
 
 
 
 
 
 
 

Leave a Reply