ಕಾಂತಾರ ಎಂಬ ಚಮತ್ಕಾರ​ ~ ​ಎ. ಎಸ್. ಎನ್. ಹೆಬ್ಬಾರ್​

ಕಾಂತಾರ ಒಂದು ಮಾಮೂಲಿ ಚಿತ್ರವಲ್ಲವೇ ಅಲ್ಲ. ರಿಷಭ್ ಶೆಟ್ಟಿ ಹ್ರೃನ್ಮನಗಳನ್ನು ಹಾಕಿ ನಿರ್ಮಿಸಿದ ಅಪೂರ್ವ ಚಿತ್ರ. ಚಿತ್ರದುದ್ದಕ್ಕೂ ನಮ್ಮನ್ನು ಆವರಿಸಿಕೊಂಡ ಶಿವನ ಪಾತ್ರವನ್ನು ರಿಷಭ್ ನಿರ್ವಹಿಸಿದ ನಮೂನೆ, ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೊಯ್ಯುತ್ತದೆ ಮಾತ್ರವಲ್ಲ ರಿಷಭ್ ಕನ್ನಡ ಚಿತ್ರರಂಗದ “ಬಾಹುಬಲಿ” ಎಂಬಂತೆ ಮೂಡಿ ಬಂದಿದ್ದಾರೆ. ಕಾಂತಾರ ಚಿತ್ರ ತಮಿಳು, ತೆಲುಗುಗಳ ಬಾಹುಬಲಿ, ಪುಷ್ಪಗಳನ್ನೂ ಮೀರಿಸುತ್ತದೆ. ಕೋಟೇಶ್ವರದಲ್ಲಿ ಭಾರತ್ ಸಿನಿಮಾದ ಮೂರು ಮಂದಿರಗಳಲ್ಲಿ ಇದೇ ಚಿತ್ರವಿದ್ದರೂ ಎಲ್ಲವೂ “ಹೌಸ್ ಫುಲ್” ಆಗಿರುವುದೇ ಇದಕ್ಕೆ ನಿದರ್ಶನ.

ನಾವಿಬ್ಬರೂ ಚಿತ್ರದುದ್ದಕ್ಕೂ ಹಾಸ್ಯದ ಮಾತುಗಳಿಗೆ ನಗಾಡಿದ್ದು ಬಿಟ್ಟರೆ ಉಳಿದೆಲ್ಲ ಕಡೆ ಒಂದೂ ಮಾತಾಡದೇ ಉಸಿರು ಬಿಗಿ ಹಿಡಿದು ಕೂತುಕೊಳ್ಳುವಂತೆ ಮಾಡಿತ್ತು ಕಾಂತಾರ. ಕೆಲವೆಡೆ ಯಂತೂ ಭಯಮಿಶ್ರಿತ ರೋಮಾಂಚನ! (ಮಂಗಳೂರಲ್ಲಿ ಪ್ರೇಕ್ಷಕಿಯೊಬ್ಬರ ಮೈ ಮೇಲೆ ದೈವ ಆವಾಹನೆ ಆದಂತೆ ಆಯಿತಂತೆ. ಖಂಡಿತ ಅದು ಉತ್ಪ್ರೇಕ್ಷೆಯಲ್ಲ. ದೈವದ ಆರ್ಭಟ ಕಾಣುವಾಗ ಎಲ್ಲಿ ನನ್ನ ಮೈಮೇಲೆ ಬರುತ್ತದೋ ಎಂತ ತುಸು ಭಯ, ತುಸು ಭಕ್ತಿ ಮೂಡಿ ಸೀಟು ಗಟ್ಟಿ ಹಿಡಕೊಂಡಿದ್ದೆ!)


ಕಂಬಳದಲ್ಲಿ, ಜಗಳದಲ್ಲಿ , ಪಂಜುರ್ಲಿಯ ಬಂಟ ಗುಳಿಗ ಆವಾಹನೆಯಲ್ಲಿ ರಿಷಭ್ ಅಭಿನಯ ಅತ್ಯದ್ಭುತ – ಅಸದ್ರೃಶ! ಬೇರೆ ಮಾತೇ ಇಲ್ಲ!​ ಚಿತ್ರದಲ್ಲಿ ಕತೆಯೇ ಇಲ್ಲವೆಂತಿಲ್ಲ. ಆಸೆ ದುರಾಸೆಗಳ, ನಂಬಿಕೆ ಅಪನಂಬಿಕೆಗಳ ಸಂಘರ್ಷ ವೇ ಚಿತ್ರಕ್ಕೆ ಮೆರುಗು ತಂದಿದೆ. ನಂಬಿಕೆ ಇಲ್ಲದವರಿಗೂ, ಚಿತ್ರ ಮುಗಿದಾಗ ನಂಬಿಕೆ ಬರುವಂತೆ ಗಂಭೀರವಾಗಿ ದೈವದ ಕತೆ ರೂಪಿಸ ಲಾಗಿದೆ. ಮನಸೆಳೆಯುವ ದ್ರಶ್ಯಗಳು, ಹಿತಮಿತ ಸಂಗೀತ, ಹಾಡುಗಳು, ಪಾಡ್ದನಗಳು, ಶ್ಲೋಕಗಳು ಕತೆಯೊಂದಿಗೆ ಮಿಳಿತವಾಗಿವೆ.

ಸಂಭಾಷಣೆಗಳಂತೂ ಚಿತ್ರದ ಜೀವಾಳವೆಂಬಂತೆ ಓಡಿಸಿಕೊಂಡು ಹೋಗುತ್ತವೆ. ಪ್ರತೀ ಸನ್ನಿವೇಶ – ಅದು ಗಂಭೀರವಾಗಿರಲಿ, ಲಘುವಾಗಿರಲಿ – ಹಾಸ್ಯದ ಚಟಾಕಿಗಳಿಂದ ಪ್ರೀತಿ ಹುಟ್ಟಿಸುತ್ತದೆ.​ ಆದರೆ, ಕುಂದಾಪುರ ಬದಿಯ ಆಚಾರ, ನಂಬಿಕೆಗಳ ಈ ಚಿತ್ರದಲ್ಲಿ ಕುಂದಗನ್ನಡದ ಬಳಕೆ ತೀರಾ ಕಮ್ಮಿಯೇ! ಮಾತುಗಳೆಲ್ಲ ಉಡುಪಿ ಮಂಗಳೂರು ಕಡೆಯ ಕನ್ನಡದಲ್ಲೇ ಹೆಚ್ಚು ಇದ್ದು ಕುಂದ ಗನ್ನಡಿಗರಿಗೆ ಪರಕೀಯವಾಗಿ ಕಾಣುವಂತಿದೆ. ಬಹುಶಃ ಇಡೀ ಕರ್ನಾಟಕವನ್ನು ದ್ರೃಷ್ಟಿಯಲ್ಲಿಟ್ಟು ಕೊಂಡು ಈ ರೀತಿಯ ಭಾಷಾಬಳಕೆ ಮಾಡಿರಬಹುದಾದರೂ ಕುಂದಗನ್ನಡಿಗರಿಗೆ ತುಸು ನಿರಾಶೆ ಆಗುವುದು ಸಹಜ. ದೈವದ ಬಾಯಲ್ಲಿ, ಯಜಮಾನರ ಬಾಯಲ್ಲಿ, ದರ್ಶನದ ಸಂದರ್ಭ ತುಳು ಭಾಷೆ ಬಂದದ್ದು ಅಚ್ಚರಿ ಆಗುವುದಿಲ್ಲ – ಸಹಜವೇ ಅನ್ನಿಸುತ್ತದೆ.

ಚಿತ್ರ ಕ್ಲೈಮಾಕ್ಸ್ ಮುಟ್ಟುವಾಗಂತೂ ರಿಷಭ್ ತನ್ನ ಅಭಿನಯ, ನಿರ್ದೇಶನಗಳ ಕ್ಲೈಮಾಕ್ಸ್ ತಲುಪಿದಂತೆ ಭಾಸವಾಗಿತ್ತು. ಅಂತೂ ಅಭಿನಂದನೀಯ ನಿರ್ಮಾಣ ಈ ಕಾಂತಾರ.
ಕರಾವಳಿ ಜಿಲ್ಲೆಗಳವರಿಗೆ ಚಿತ್ರ ಖಂಡಿತ ಇಷ್ಟವಾಗುತ್ತದಾದರೂ, ಘಟ್ಟದ ಮೇಲಿನವರಿಗೆ ಹೇಗೆ ಹಿಡಿಸುತ್ತದೋ ಹೇಳಬರುವಂತಿಲ್ಲ. ಯಾಕೆಂದರೆ ಅಲ್ಲಿನ ಜನ ಈ ದೈವ, ಭೂತ ಅಂದರೇ ದೂರ ಇರುವವರಂತೆ. 
 
ಹಲವಾರು ವರ್ಷಗಳ ಹಿಂದೆ ಮಣಿಪಾಲದಲ್ಲೊಂದು ರೋಟರಿ ಜಿಲ್ಲಾ ಸಮ್ಮೇಳನ ಜರಗಿದಾಗ ಬಂದ ಸಾವಿರಕ್ಕೂ ಮಿಕ್ಕಿ ಪ್ರತಿನಿಧಿಗಳಿಗೆ ಯಕ್ಷಗಾನದ ಪುರುಷ ವೇಷದ ಮುಖವರ್ಣಿಕೆಯ ಸ್ಮರಣಿಕೆ ನೀಡಿದಾಗ, ಕರಾವಳಿಯವರು ಸಂತೋಷದಿಂದ ಕೊಂಡೊಯ್ದರೆ, ಈ ಭೂತದ ಸ್ಮರಣಿಕೆ ಯಾಕಾದರೂ ಕೊಟ್ಟರೋ ಎಂತಲೂ, ನಾವು ಮನೆಯಲ್ಲಿ ಇಂತದ್ದನ್ನೆಲ್ಲ ಇಟ್ಟು ಕೊಳ್ಳುವುದಿಲ್ಲ ಎಂತಲೂ ಘಟ್ಟದ ಮೇಲಿನ ಹಲವು ಪ್ರತಿನಿಧಿಗಳು (ವಿದ್ಯಾವಂತರು) ಹೇಳಿ ಅವನ್ನು ತ್ಯಜಿಸಿದ್ದು ಕಂಡವ  ನಾನು.

ಈಗೆಲ್ಲ ಮನಸ್ಥಿತಿ ಬದಲಾಗಿದೆಯೇನೋ. ಯಾವುದೇ ಪೂರ್ವಾಗ್ರಹವಿಲ್ಲದೇ ಅವರೆಲ್ಲ ಈ ಅಮೋಘ ಚಿತ್ರ ಕಾಣುವಂತಾಗಲಿ ಎಂದು ಹಾರೈಸಿ ರಿಷಭ್ ಮತ್ತು ತಂಡದವರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸುವೆ.​ ಸಿನೆಮಾ ಕಂಡು ಬರುವಾಗ ನನ್ನಾಕೆ ಸುಧಾ ‘ಇನ್ನೊಂದ್ಸಲ ಇದನ್ನ ಕಾಣಬೇಕು ಮಾರಾಯ್ರೇ’ ಎಂದದ್ದೇ ಚಿತ್ರದ ಯಶಸ್ಸಿಗೆ ಸರ್ಟಿಫಿಕೇಟ್ ಕೊಟ್ಟಂತೆ ಅನ್ನಿಸಿತು.

~ ಎ. ಎಸ್. ಎನ್. ಹೆಬ್ಬಾರ್, ವಕೀಲರು, ಕುಂದಾಪುರ.
 
 
 
 
 
 
 
 
 
 
 

Leave a Reply