ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲಾ ಹರಿಯೇ.. ಡಾ. ಶಶಿಕಿರಣ್ ಶೆಟ್ಟಿ

(ಈ ಕಥೆ ಯಾವುದೇ ವ್ಯಕ್ತಿ ಹಾಗು ವಸ್ತುವಿಗೆ ಸಂಬಂಧ ಪಟ್ಟಿಲ್ಲ.. ಹಾಗೇನಾದರೂ ಸಂಬಂಧ ಪಟ್ಟಲ್ಲಿ ಅದು ಕೇವಲ ಕಾಕತಾಳಿಯ ಮಾತ್ರ…..)

ಪತ್ರಿಕೆ ಯಲ್ಲೊಂದು ಪುಟ ನನ್ನನ್ನು ಆಕರ್ಷಸಿತು.. ಪೂರ್ತಿ ಒಂದು ಪುಟದಲ್ಲಿ ಹೀರೋ ತರ ಒಬ್ಬ ಸುಂದರಾಂಗನ ಫೋಟೋ ಇತ್ತು. ಕೆಳಗೆ ಒಂದಿಷ್ಟು ಬರೆದಿತ್ತು ನೀನೊಬ್ಬ ಅಮೂಲ್ಯ ರತ್ನ, ನಮ್ಮ ಪಾಲಿನ ಹೀರೋ, ನಮಗೆ ಬದುಕಲು ಕಲಿಸಿದ ಗುರು.. ಓದುವಾಗಲೇ ಬೇಸರವೆನಿಸಿತ್ತು, ಆ ತಂದೆಯ ಬಗ್ಗೆ ಅದು ಶ್ರದ್ದಾಂಜಲಿ ಗೆ ಬರೆದಿದ್ದ ವಾಕ್ಯಗಳಾಗಿದ್ದವು.

ಆ ಇಡೀ ಪುಟಕ್ಕೆ 5 ಲಕ್ಷ ಖರ್ಚು ಮಾಡಿದ್ದರು ಅವರು. ಜನ ಇಂದು ಓದಿ ನಾಳೆ ಕಸದ ರಾಶಿಗೆ ಹಾಕುವ ಪತ್ರಿಕೆ ಯಲ್ಲಿ ಜಾಹೀರಾತಿಗೆ ಈ ರೀತಿ 5 ಲಕ್ಷ ಖರ್ಚು ಮಾಡುವ ಬದಲು ತಲಾ 50,000 ದಂತೆ ಒಂದಿಷ್ಟು ಬಡ ರೋಗಿಗಳಿಗೆ ಚಿಕಿತ್ಸೆಗೋ,ಒಂದಿಷ್ಟು ಬಡ ಹೆಣ್ಣುಮಕ್ಕಳ ಮದುವೇಗೋ,ಒಂದಿಷ್ಟು ಬಡವನ ಮನೆನಿರ್ಮಾಣಕ್ಕೋ ಮಗನ ಹೆಸರಲ್ಲಿ ಅದೇ ಹಣ ಖರ್ಚು ಮಾಡಿದ್ದಿದ್ದರೆ ಇನ್ನೊಂದಷ್ಟು ವರ್ಷ ಆ 10 ಮಂದಿ ಯ ದೇವರ ಮನೆಯಲ್ಲಿ ನಿತ್ಯ ಕೈ ಮುಗಿಯಲ್ಪಡುತಿದ್ದ ಆತ.

ಸಂಜೆ ತನಕ ಅದೇ ವಿಷಯ ತಲೆ ಕೊರೆಯುತಿತ್ತು ಆ ತಂದೆ ತಾಯಿಯರ ಬಗ್ಗೆ ಇದ್ದ ಅನುಕಂಪ ಸಂಜೆ ಹೊರಟು ಹೋಗಿತ್ತು. ನನ್ನ ಗೆಳೆಯನೊಬ್ಬ ತಿಳಿಸಿದ್ದ ಆ ತಂದೆ ತಾಯಿ ಇಬ್ಬರೂ ಆ ವ್ಯಕ್ತಿಗೆ ದಿನ ಬೆಳಗಾದರೆ ಬಯ್ಯುತ್ತಿದ್ದರಂತೆ, ನೀನೊಬ್ಬ ದಂಡ ಪಿಂಡ, ಕೆಲಸ ಇಲ್ಲ ಸುಮ್ಮನೆ ಕೂತು ತಿನ್ನಲು ಹುಟ್ಟಿದ್ದೀಯ, ನಮ್ಮ ಕುಲಕ್ಕೆ ಕಳಂಕ, ಸಾಯ ಬಾರದಿತ್ತಾ, ಮೊದಲೇ ಗೊತ್ತಿದ್ದರೆ ಹೊಟ್ಟೆಯಲ್ಲಿ ರುವಾಗಲೇ ತೆಗೆಸಿ ಬಿಡುತ್ತಿದ್ದೆವು ಹಾಗೇ ಹೀಗೆ ಎಂದು ನಿತ್ಯ ಬಯ್ಯುತ್ತಿದ್ದರಂತೆ.

 

ಕೆಲಸ ವಿಲ್ಲದೆ ಒದ್ದಾಡುತಿದ್ದ ಈತ ಇವರ ಕರಕರಿ ತಾಳಲಾರದೇ ಅಂದು ನೇಣಿಗೆ ಶರಣಾಗಿದ್ದನಂತೆ. ಆ ಪತ್ರಿಕೆಯಲ್ಲಿ ಹೊಗಳಿದ ಅಷ್ಟು ಪದ ಗಳಲ್ಲಿ ಒಂದನ್ನಾದರೂ ವ್ಯಕ್ತಿ ಬದುಕಿದ್ದಾಗಲೇ ಹೇಳಿದ್ದಿದ್ದರೆ, ಅಥವ ಕನಿಷ್ಠ ಪಕ್ಷ ನಿತ್ಯ ಬಯ್ಗಳ ವನ್ನಾ ದರೂ ಕಮ್ಮಿ ಮಾಡಿದ್ದಿದ್ದರೆ ವ್ಯಕ್ತಿ ಖುಷಿ ಯಿಂದ ಬದುಕುತಿದ್ದನೋ ಏನೋ ಎನ್ನಿಸಿತ್ತು ನನಗೆ.

ವ್ಯಕ್ತಿ ಇಲ್ಲದಾಗ ಅವನನ್ನು ಹೊಗಳುವ, ಅವನ ಹೆಸರಲ್ಲಿ ದುಂದುವೆಚ್ಚ ಮಾಡುವ ನಾವುಗಳು ಅವ ಬದುಕಿದ್ದಾಗ ಅವನನ್ನು ಹೋಗಳುವುದು ಬಿಡಿ ಒಂದೆರಡು ಒಳ್ಳೆಯ ಮಾತಾನ್ನಾಡಲು ಕೂಡಾ ಹಿಂಜರಿಯುತ್ತೇವೆ ಹಾಗೇ ಸತ್ತಾಗ ಅನವಶ್ಯಕ ವಾಗಿ ಲಕ್ಷಗಟ್ಟಲೆ ದುಂದು ವೆಚ್ಚ ಮಾಡಿ ತಮ್ಮ ದೊಡ್ಡಸ್ತಿಕೆ ಯನ್ನು ಸಮಾಜಕ್ಕೆ ತೋರಿಸುವುದು ಹಾಸ್ಯಸ್ಪದ ಅಲ್ಲವೇ?? .

ಅದಕ್ಕೇ ದಾಸರು ಹೇಳಿರುವುದು…. ಯಾರಿಗೆ ಯಾರುಂಟು ಎರವಿನ ಸಂಸಾರ, ನೀರ ಮೇಲಣ ಗುಳ್ಳೆ ನಿಜವಲ್ಲಾ ಹರಿಯೇ..  ಅಲ್ಲವೇ???

 
 
 
 
 
 
 
 
 
 
 

Leave a Reply