ಕಣ್ಣೀರನ್ನು ಒರೆಸುವ ಆತ್ಮ ಇದರ ನಿಜವಾದ ಹೆಸರೇ ಅಪ್ಪ~ಡಾ. ರವಿ ಶೆಟ್ಟಿ ಬೈಂದೂರು

​​ಹೆರಿಗೆಗೆಂದು ಆಪರೇಷನ್ ರೂಮಿನೊಳಗೆ ಕೊಂಡೊಯ್ಯುತ್ತಿರುವ ತನ್ನ ಪತ್ನಿಯನ್ನು ಕೊನೆಯ ದಾಗಿ ನಿನಗೇನೂ ಆಗಲ್ಲ ಚಿನ್ನೂ, ನೀನು ಹೆದರ ಬೇಡ  ಅಂತ ಒಳಗೊಳಗೆ ಅಳುತ್ತಿದ್ದರೂ, ತೋರ್ಪಡಿಸದೆ ಆಕೆಯ ಕೂದಲ ಮೇಲೆ ಪ್ರೀತಿಯಿಂದ ಸವರುತ್ತಾ, ಆಕೆಯ ಹಣೆಗೆ ಮುತ್ತಿಕ್ಕಿ ಸಾಂತ್ವನ ಹೇಳುತ್ತಾ ಕಳುಹಿಸಿಕೊಡುವಾಗ – “ಓ ದೇವರೇ ತಾಯಿ ಮಗುವನ್ನು ನೀನೇ ಕಾಪಾಡು ” ಎಂಬ ಪ್ರಾರ್ಥನೆಯಾಗಿರುತ್ತದೆ ಗಂಡನಾದವನ ಮನಸಲ್ಲಿ.

ನಿಮ್ಮ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ತಾಯಿ ಮಗು ಚೆನ್ನಾಗಿದ್ದಾರೆ. ಅಂತ ಡೋರ್ ತೆರೆದು ಬಂದ ನರ್ಸ್ ಹೇಳುವಾಗ ಎದೆ ಮೇಲೆ ಇಟ್ಟುಕೊಂಡಿದ್ದ ಭಾರ ತನಗರಿವಿಲ್ಲದಂತೆ ಆತನ ಕಣ್ಣುಗಳಲ್ಲಿ ಆತಂಕ ಮತ್ತು ಮನದೊಳಗೆ ಸಂತೋಷವೂ ಕಾಣಿಸುತ್ತದೆ ಆ ತಂದೆಯಲ್ಲಿ.

ಮಗುವನ್ನು ಎತ್ತಿ ಮುದ್ದಾಡಿ. ದಿನಪೂರ್ತಿ ಅದರ ಜೊತೆ ಕಳೆಯ  ಬೇಕೆನ್ನುವ ಬಯಕೆ ಮನದಲ್ಲಿ ಇದ್ದರೂ., ತಾಯಿ ಮಕ್ಕಳನ್ನು ಸಾಕುವ ಸಲುವಾಗಿ ಜವಾಬ್ದಾರಿಯ ಹೊರೆಯನ್ನು ಹೊತ್ತು ಪ್ರೀತಿಯನ್ನು ಹೃದಯದಲ್ಲಿ ಹುದುಗಿಕೊಂಡು ಕೆಲಸಕ್ಕೆ ತೆರಳುವ ತಂದೆ ಆತನ ಹೃದಯ ನೋಡುಗರ ಕಣ್ಣಿಗೆ ಬಂಡೆಗಲ್ಲಿನಂತೆ.

ಪ್ರತಿದಿನ ನನ್ನ ಮಗಳು ಎಲ್ಲಿ ಬಿದ್ದಳು, ಎಲ್ಲಿದ್ದಳು ಯಾರು ಏನೆಂದರೂ, ನೋವಲ್ಲಿ ಇರುವಳೋ,  ಊಟ ಮಾಡಿದಳೋ, ತಿಂಡಿ ತಿಂದಳೋ ಎಂಬ ದುಗುಡದಲ್ಲಿ ಇರುವ ತಂದೆ,  ಮಗಳನ್ನು ಪ್ರೀತಿ ವಾತ್ಸಲ್ಯದಿಂದ ಸಾಕಿ ಸಲುಹಿ, ಸಂತೋಷದಲ್ಲಿ ದಿನಗಳುರುಳುತ್ತಿದ್ದಂತೆ ಒಂದು ದಿನ ಆಕೆ ಋತುಮತಿಯಾದಾಗ, ಮೊದಲು ಆ ತಂದೆಯ ಮನಸೊಮ್ಮೆ ಮರುಗಿತಾದರೂ, ಈ ಕ್ರಿಯೆಯು ಯಾವತ್ತಾದರೂ ಹೆಣ್ಣೊಬ್ಬಳಿಗೆ ಆಗಲೇ ಬೇಕಲ್ಲವೇ ಅಂತ ತನ್ನನ್ನು ತಾನೇ ಸಂತೈಸುವ ಮನ ಆ ತಂದೆಯದ್ದು.

ವರ್ಷಗಳು ಕಳೆದಂತೆ ವಯಸ್ಸಿಗೆ ಬಂದ ಮಗಳ ಶರೀರ ಭಾಗಗಳಲ್ಲಿ ಬೆಳವಣಿಗೆಯ ಬದಲಾವಣೆಯಾದಾಗ ಆ ತಂದೆಯ ಮನಸಲ್ಲಿ ಭಯವೆಂಬ ಕಪ್ಪು ಛಾಯೆ ನೆಲೆಯೂರುತ್ತದೆ. ನಂತರದ ದಿನಗಳಲ್ಲಿ ಮಗಳ ಪ್ರಯಾಣ ಮತ್ತು ವಸ್ತ್ರಧಾರಣೆಯು ತಂದೆ ಹೇಳುವ ಪ್ರಕಾರವೇ ಆಗಿರುತ್ತದೆ. ಕಾರಣವೊಂದೇ ಎಲ್ಲಿ ನನ್ನ ಮಗಳ ಮೇಲೆ ಕೆಟ್ಟ ದೃಷ್ಟಿ ಬೀಳುತ್ತದೆಯೋ.

ನನ್ನ ಮಗಳಿಗೆ ಅದು ಮಾರಕವಾಗುತ್ತದೆಯೋ. ಎಂದು ಹಗಲಿರುಳು ಯೋಚಿಸುವುದೇ ತಂದೆಯ ಕಾಯಕವಾಗಿ ಬಿಟ್ಟಿರುತ್ತದೆ. ಇದರಿಂದ ಸಾಕಷ್ಟು ಬಾರಿ ಮಗಳು ಮತ್ತು ಹೆಂಡತಿ ಕಣ್ಣಿಗೆ ಮಹಿಷಾಸುರನ ತರದಲ್ಲಿ ಕಾಣಿಸುತ್ತಾನೆ ಜವಾಬ್ದರಿಗೆ ಹೆಗಲು ಕೊಟ್ಟ ತಂದೆ. 

ದಿನನಿತ್ಯ ಮನೆಗೆ ಬೇಕಾದ ಸಾಮಾನುಗಳನ್ನು ಖರೀದಿಸುವಾಗ ಖರ್ಚುಗಳನ್ನು ಕಡಿಮೆ ಮಾಡಿಯೂ, ಸಾಮಾನುಗಳ ಬೆಲೆಯನ್ನು ಚರ್ಚೆ ಮಾಡಿಯೂ, ಕಾರಿನಲ್ಲಿ ಹೋಗುವ ಸ್ಥಳಕ್ಕೆ ಬೈಕಿನಲ್ಲಿ, ಬೈಕಿನಲ್ಲಿ ಹೋಗುವ ಸ್ಥಳಕ್ಕೆ ಬಸ್ಸಿನಲ್ಲೂ, ಬಸ್ಸಿನಲ್ಲಿ ಹೋಗುವ ಸ್ಥಳಕ್ಕೆ ನಡೆದುಕೊಂಡು ಹೋಗಿಯೂ ಮಗಳ ಮದುವೆ ಖರ್ಚಿಗಾಗಿ ಒಂದೊಂದು ರುಪಾಯಿಗಳನ್ನು ಒಟ್ಟುಗೂಡಿಸುತ್ತಿರುತ್ತಾರೆ ಆ ತಂದೆ….

ತಡ ರಾತ್ರಿಯವರೆಗೂ ಮಗಳ ಕೋಣೆಯಲ್ಲಿ ಲೈಟ್ ಆನ್ ಮತ್ತು ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತಾ ಕುಳಿತಿರುವ ಮಗಳನ್ನು ನೋಡುವಾಗ ಆ ತಂದೆಯ ಮನಸಿನಲ್ಲಿ ಒಂದೇ ಪ್ರಾರ್ಥನೆಯಾಗಿರುತ್ತದೆ – “ದೇವರೇ ಮಗಳು ದಾರಿತಪ್ಪದಿರಲಿ. ಮಗಳ ನಡೆ ಒಂದು ಅವಗಡಕ್ಕೆ ಕಾರಣವಾಗದಿರಲಿ.

ಮಗಳನ್ನು ಕಾಣಲು ಬಂದ ವರನ ಮುಂದೆ ಮಗಳನ್ನು ಕರೆತಂದು ನಿಲ್ಲಿಸುವಾಗ ಆ ತಂದೆಯ ಮುಖದಲ್ಲಿ ಮುಗುಳ್ನಗುವಿದ್ದರೂ, ಆ ಮನಸಲ್ಲಿ ಒಂದು ನಡುಕ ಉಂಟಾಗುವುದು. ತನ್ನ ಮುದ್ದು ಮಗಳನ್ನು ಅಪರಿಚಿತನೊಬ್ಬನ ಮನೆಗೆ ಕಳುಹಿಸಿಕೊಡುವುದನ್ನು ನೆನೆದು ಉಂಟಾದ ನಡುಕ.

ಮದುವೆ ನಿಶ್ಚಯವಾದರೆ ದಿನಗಳು ಬೇಗಬೇಗ ಉರುಳುತ್ತಿರುವಂತೆ ಅನಿಸುತ್ತದೆ ಆ ತಂದೆಗೆ. ಮನೆಯಲ್ಲಿ ಒಂದು ಕಪ್ ಟೀಯನ್ನು ಕೂಡಾ ನೆಮ್ಮದಿಯಿಂದ ಕುಡಿಯಲು ಸಾಧ್ಯವಾಗದಷ್ಟು ಅಲ್ಲೋಲ ಕಲ್ಲೋಲವಾಗಿರುತ್ತದೆ ಆ ತಂದೆಯ ಮನಸ್ಸಿಗೆ.  

ಮದುವೆ ದಿನದಂದು ಆ ಅಪರಿಚಿತನ ಕೈಗೆ ತನ್ನ ಮಗಳ ಕೈಯನ್ನು ಜೋಡಿಸಿ ಹಿಡಿಯುವಾಗ ಆ ತಂದೆಯ ತುಂಬಿದ ಕಣ್ಣುಗಳು ಮತ್ತು ದುಃಖ ತಡೆಯಲಾಗದೆ ನಡುಗುತ್ತಿರುವ ತುಟಿಗಳು ಕಾಣುವುದು. ಮನೆಯ ಮೆಟ್ಟಿಲುಗಳನ್ನು ಇಳಿದು ಹೋಗುವಾಗ ತನ್ನ ಎದೆಯ ಮೇಲೆ ಮಲಗಿದ ಮುದ್ದು ಮಗಳ ಬಾಲ್ಯದ ನೆನಪುಗಳಾಗಿರುತ್ತದೆ ಆ ತಂದೆಯ ಮನಸಲ್ಲಿ.  ಆದರೂ ಅಳುವಂತಿಲ್ಲ ಯಾರಲ್ಲೂ ಹೇಳುವಂತಿಲ್ಲ ಏಕೆಂದರೆ ಅವನೊಬ್ಬ ತಂದೆ. 

ಮದುವೆಯ ಕಾರ್ಯಕ್ರಮವೆಲ್ಲಾ ಮುಗಿದ ನಂತರದ ದಿನಗಳಲ್ಲಿ ಮದುವೆಯ ಖರ್ಚು ವೆಚ್ಚಗಳ ಲೆಕ್ಕಾಚಾರ ಮತ್ತು ಮದುವೆಗಾಗಿ ಮಾಡಿದ ಸಾಲವನ್ನು ತೀರಿಸಲು ಆ ತಂದೆಯು ಕಷ್ಟಪಡುವ ದಿನರಾತ್ರಿಗಳಾಗಿರುತ್ತದೆ. ತಂದೆಯ ತ್ಯಾಗಮಯವಾದ ಜವಾಬ್ದಾರಿಕೆಗೆ ಬೆಲೆಕಟ್ಟಲಾಗದು.

ತಾಯಿ ಮಕ್ಕಳನ್ನು ಕಣ್ಣು ರೆಪ್ಪೆಯಂತೆ ನೋಡುತ್ತಾಳೆ. ತಂದೆ ಹೆಂಡತಿ ಮತ್ತು ಮಕ್ಕಳನ್ನು ತನ್ನ ಹೃದಯ  ಕವಚದಲ್ಲಿ ಬಚ್ಚಿಟ್ಟು ರಕ್ಷಿಸುತ್ತಾನೆ. ತಂದೆಯ ಒಡಲಲ್ಲಿ ದುಃಖ ಇರುತ್ತದೆ, ಎಂದು ಹೇಳಿಕೊಳ್ಳುವುದಿಲ್ಲ.

ಬೆಟ್ಟದಷ್ಟು ಪ್ರೀತಿ ಇರುತ್ತದೆ ಎಂದು ತೋರಿಸಲು ಸಾಧ್ಯವಾಗುವುದಿಲ್ಲ. ಅವನು ಸಾಯುವಾಗಲೂ ಹೆಂಡತಿ ಮಕ್ಕಳ ಪಾಲಿಗೆ ಶತ್ರುವಾಗಿಯೇ ಸಾಯುತ್ತಾನೆ. ಏಕೆಂದರೆ ಹೆಂಡತಿ-ಮಕ್ಕಳ ಒಳಿತನ್ನೇ ಬಯಸುವ ಇವನಿಗೆ ನೋವೊಂದು ಕೊನೆಯಲ್ಲಿ ಸಿಗುವುದು…

ಹೆಣ್ಣು ಮಕ್ಕಳೇ ಇಂತಹ ಶಾಶ್ವತ ಪ್ರೀತಿಯಿಂದ ವಂಚಿತರಾಗಿ ಭವ್ಯವಾದ ಬಾಳನ್ನು ಕಳೆದುಕೊಳ್ಳದಿರಿ. ಹರೆಯದ ಬಯಕೆಗೆ ಕಡಿವಾಣವಿರಲಿ. ಹಿರಿಯರ ಪ್ರೀತಿಗೆ ಬೆಲೆ ಇರಲಿ ಆಧುನಿಕ ಪೀಳಿಗೆಯಲ್ಲಿ ನನ್ನ ವಿನಮ್ರ ಪ್ರಾಥ೯ನೆ. ಓದಿರಿ ಅಥೈ೯ಸಿಕೊಳ್ಳಿರಿ ಇದೋ ನಿಮಗಾಗಿ…

ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!!
ಹೆರುವವರೆಗೂ ಹೊರುವ ಅಮ್ಮ, ಹರೆಯದವರೆಗೂ  ಹೊರುವ ಅಪ್ಪ, ಇಬ್ಬರ ಪ್ರೀತಿ ಸಮಾನಾದರೂ, ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!! ಕುಟುಂಬಕ್ಕಾಗಿ ಸಂಬಳವಿಲ್ಲದೇ ದುಡಿಯುವ ಅಮ್ಮ, ದುಡಿದ ಸಂಬಳವೆಲ್ಲ ಕುಟುಂಬಕ್ಕೆ ನೀಡುವ ಅಪ್ಪ, ಇಬ್ಬರ ಶ್ರಮ ಸಮಾನಾದರೂ ಅಪ್ಪ ಏಕೋ ಹಿಂದೆಯೇ ಉಳಿದು ಬಿಟ್ಟ!!! 

ಕೇಳಿದ್ದನ್ನು  ಮಾಡಿ ಉಣಿಸುವ ಅಮ್ಮ, ಕೇಳಿದ್ದನ್ನು ಇಲ್ಲ ಅನ್ನದೆ ಕೊಡಿಸುವ ಅಪ್ಪ, ಇಬ್ಬರ ಪ್ರೀತಿ ಒಂದೇ ಆದರೂ ಅಪ್ಪ ಏಕೋ ತುಂಬಾ ಹಿಂದೆಯೇ ಉಳಿದು ಬಿಟ್ಟ!!! 
ಎಡವಿ ಬಿದ್ದಾಗ ಬರುವ ಕೂಗು ಅಮ್ಮ, ಅವಶ್ಯಕತೆ ಇದ್ದಾಗ ಮಾತ್ರ ನೆನಪಾಗುವ ಅಪ್ಪ,  ಇಬ್ಬರ ಪ್ರೀತಿ ಒಂದೇ  ಆದರೂ ಮಕ್ಕಳ ಪ್ರೀತಿ ಪಡೆಯಲು  ಅಪ್ಪ ತುಂಬಾ ಹಿಂದೆಯೇ ಉಳಿದು ಬಿಟ್ಟ!!!  
ಕಪಾಟಿನ ತುಂಬಾ ಅಮ್ಮ, ಮಕ್ಕಳ  ಬಣ್ಣದ ಬಟ್ಟೆಗಳು,  ಅಪ್ಪನ ನಾಲ್ಕಾರು ಬಟ್ಟೆಗಳಿಗೆ ಮೂಲೆಯಲ್ಲಿ ಒಂದಿಷ್ಟು ಜಾಗ, ತನ್ನ ಬಗ್ಗೆ ತಾನೆಂದೂ ಯೋಚಿಸದ ಅಪ್ಪ, ನಮ್ಮ ಯೋಚನೆಗೆ ಸಿಗದಷ್ಟು ಹಿಂದೆಯೇ ಉಳಿದು ಬಿಟ್ಟ!!! ಅಮ್ಮನ ನೋವು ಕಣ್ಣೀರಾಗಿ ಹರಿಯಿತು, ಅಪ್ಪನ ನೋವು ಮನದಲ್ಲೇ ಹುದುಗಿತು. ಅಮ್ಮನ ನೋವು ಕಂಡ ನಮಗೆ ಅಪ್ಪನ ನೋವು ಕಾಣಲೇ ಇಲ್ಲ. ಇಬ್ಬರ ನೋವು ಒಂದೇ ಆದರೂ ಅಪ್ಪ ದುಃಖ ನುಂಗಿ ತುಂಬಾ ಹಿಂದೆಯೇ ಉಳಿದು ಬಿಟ್ಟ!!!

ಅಮ್ಮನಿಗೆ ಒಂದಿಷ್ಟು  ಬಂಗಾರದ ಒಡವೆ. ಅಪ್ಪನಿಗೆ ಒಂದು  ಬಂಗಾರದಂಚಿನ ಪಂಚೆ. ಕುಟುಂಬಕ್ಕೆ ಎಷ್ಟೇ ಮಾಡಿದರೂ ಅವರ ಮೆಚ್ಚುಗೆ ಪಡೆಯುವಲ್ಲಿ ಅಪ್ಪ ತುಂಬಾ ಹಿಂದೆಯೇ ಉಳಿದು ಬಿಟ್ಟ!!!

ಮುಪ್ಪಿನಲ್ಲಿ ಮನೆ ಕೆಲಸಗಳಿಗೆ ನೆರವಾಗುವ ಅಮ್ಮ, ಮಾತುಗಳಿಗೆ ಬೆಲೆಯೇ ಇಲ್ಲದಿದ್ದರೂ ಬೆಲೆಯುಳ್ಳ ಮಾತು ಹೇಳುವ ಅಪ್ಪ, ಇಬ್ಬರೂ ಕಾಳಜಿ ಮಾಡಿದರೂ, ಪ್ರೀತಿ ಪಡೆಯುವಲ್ಲಿ ಅಪ್ಪ ತುಂಬಾ ಹಿಂದೆಯೇ ಉಳಿದು ಬಿಟ್ಟ!!! 

ಅಪ್ಪ ಹೀಗೆ ಹಿಂದೆ ಉಳಿಯಲು ಕಾರಣ ಅವರೇ ನಮ್ಮೆಲ್ಲರ ಬೆನ್ನೆಲುಬು. ಬೆನ್ನೆಲುಬು ಹಿಂದಿರುವುದರಿಂದಲೇ ನಾವೆಲ್ಲರೂ ಬೆಟ್ಟದ ಹಾಗೆ ನಿಂತಿರುವುದು. ಅದರಿಂದಲೇ ಏಕೋ  ಅಪ್ಪ ಹಿಂದೆಯೇ ಉಳಿದುಬಿಟ್ಟ!!! 

ತಂದೆಯ ಪ್ರೀತಿ ಕಾಣದ ಮಗನಿಂದ ತಂದೆಯ ಬಗ್ಗೆ ಒಂದು ಸಣ್ಣ ಲೇಖನ. ಅಪ್ಪ ಎಂದರೆ ಸ್ವರ್ಗಕ್ಕಿಂತ ಮೀಗಿಲು.. ತಂದೆ ಎಂದರೇನು ಅಂದರೆ ಅದು ಕರುಣೆಯ ಕಣ್ಣಿರು ಒರಿಸುವ ಆತ್ಮ. ದಾರಿ ತಪ್ಪುವ ಮೊದಲು ಒಮ್ಮೆ ಯೋಚಿಸಿ ಸರಿ ದಾರಿಯಲ್ಲಿ ನಡೆಯೋಣ… 

 
 
 
 
 
 
 
 
 
 
 

Leave a Reply