ಕೊರೋನ ಸಂದಿಗ್ದತೆಯಲ್ಲಿ ಜನ ಬ್ರ್ಯಾಂಡ್ ಗಳನ್ನೇ ಮರೆತರೇ!?

ಅದೊಂದು ಕಾಲವಿತ್ತು ಆ ಕಾಲದಲ್ಲಿ ವಿವಿಧ ಬ್ರ್ಯಾಂಡ್ ಗಳು ಜನತೆಯನ್ನು ಉತ್ಪ್ರೇಕ್ಷಿಸುತ್ತಿದ್ದವು, ನಮ್ಮ ಆ ಕಾಲದ ಲೈಫ್ ಹೇಗಿತ್ತು ಅಂದ್ರೆ ಬೆಳಿಗ್ಗೆಯಿಂದ ಸಂಜೆಯ ವರೆಗೂ ಉಪಯೋಗಿಸುವ ಸರಿಸುಮಾರು ಎಲ್ಲಾ ವಸ್ತುಗಳೂ ಸಾಧಾರಣವಾಗಿ ಒಳ್ಳೆಯ ಬ್ರ್ಯಾಂಡ್ ನೇ ಆಯ್ಕೆ ಮಾಡಿ, ಉಪಯೋಗಿಸುತ್ತಿದ್ದೆವು. 
ಇಲ್ಲಿ ಗಮನಿಸಿ ಅಂದಿನ ಕಾಲ ಅಂದರೆ ಯಾವುದೋ ಗತಕಾಲ ಅಲ್ಲ ಸ್ವಾಮಿ, ಸರಿಯಾಗಿ ಹೇಳೋದಾದ್ರೆ ಈ ವರ್ಷದ ಮಾರ್ಚ್ ತಿಂಗಳ ದ್ವಿತೀಯಾರ್ಧದವರೆಗೆ, ಆಮೇಲೆ ನಡೆದದ್ದು, ಪ್ರಸ್ತುತ ನಡೆಯುತ್ತಿರುವುದು ನಿಮಗೆ-ನಮಗೆ ಅರಿವಿಗೆ ಬಂದಿದೆ ಏನಂತೀರಾ?! ಹೀಗೆ ಕೆಲವೇ ಕೆಲವು ಬ್ರ್ಯಾಂಡ್ ಗಳ ಬಗ್ಗೆ ಹೇಳುತ್ತೇನೆ ಮತ್ತು ಅದು ಹೇಗೆ ಈ ಕೊರೋನ ಕಾಲದಲ್ಲಿ ಜನತೆ ಬೇರೆ ವಸ್ತುಗಳನ್ನೂ ಒಪ್ಪಿಕೊಂಡರು ಎಂದು ವಿವರಿಸಲು ಬಯಸುತ್ತೇನೆ, ಕೆಲವೊಂದು ಮಾತ್ರ, ಇನ್ನೂ ಇದ್ದರೆ ಅದು ನೀವೇ ಕಲ್ಪಿಸಿಕೊಳ್ಳಿ.

ಮೊದಲಿಗೆ ಪೇಟೆ ಬಿಟ್ಟು ಹಳ್ಳಿಯ ತಮ್ಮ ಹುಟ್ಟೂರಿಗೆ ಬಂದವರ ಪಾಡು ನಾನೇ ಕಣ್ಣಾರೆ ಕಂಡಿದ್ದು, ಒಂದು ಅಂಗಡಿಗೆ ಬಂದ ಒಬ್ಬ ವ್ಯಕ್ತಿ ತನ್ನ ಮಗಳು ಕಳುಹಿಸಿದ ಚೀಟಿಯನ್ನು ದಿನಸಿ ಅಂಗಡಿಯಲ್ಲಿ ನೀಡಿದ ಆದರೆ ಒಂದು ವಿಪರ್ಯಾಸವೆಂದರೆ ಆ ಚೀಟಿಯಲ್ಲಿ ಇರೋ ಸಾಕಷ್ಟು ಪದಾ ರ್ಥಗಳು ಬೆಂಗಳೂರಿನ ಭಾಗದಲ್ಲಿ ಬಳಸೋ ಬ್ರ್ಯಾಂಡೆಂಡ್ ಪದಾರ್ಥಗಳಾದ್ದರಿಂದ ಪಾಪ ಅದಕ್ಕೆ ತಕ್ಕನಾದ ವಸ್ತುಗಳು ಇಲ್ಲ, ಅದೇ ತರದ ಬೇರೆ ವಸ್ತುಗಳಿವೆ ಎಂದರು ಅಂಗಡಿಯವರು, ಆಗ ಆ ವ್ಯಕ್ತಿ ಮಗಳಿಗೆ ಫೋನ್ ಮಾಡಿ ಮಗಾ ಈಗ ನೀ ಕೊಟ್ಟ ಚೀಟಿಲಿ ಇರೋ ಎಷ್ಟೋ ವಸ್ತುಗಳ ತರದ್ದೇ ವಸ್ತುಗಳಿವೆ ಆದರೆ ಅದೇ ಅಲ್ಲ ಎಂದಾಗ ಆ ಹುಡುಗಿ ಉತ್ತರಿಸಿದ್ದು ನೋಡಿಯೇ ಎಲ್ಲರೂ ಒಮ್ಮೆ ದಂಗಾದರು, ಥೂ ಇದೆಂತಾ ಊರು, ಏನೂ ಸಿಗೋಲ್ಲ, ಅದು ಇದು ಅಂತ, ಆಗ ಅಪ್ಪ ಉತ್ತರಿಸಿದ ರೀತಿ ‘ ಮಗಳೇ ನೀನು ಇದೇ ಪದಾರ್ಥಗಳನ್ನು ತಿಂದು ಇರೋದಾದ್ರೆ ಮನೆಲಿ ಇರು, ಇಲ್ಲವಾದರೆ ಇವತ್ತೇ ಬೆಂಗಳೂರಿಗೆ ಹೊರಡಬಹುದು, ಈ ಕಷ್ಟ ಕಾಲದಲ್ಲಿ ಇಷ್ಟು ಸಿಕ್ಕಿರೋದೇ ಪಂಚಾಮೃತ ಎಂದು ತಿಳಿ” ಎಂದರು. ಮತ್ತೆ ಅವರು ದಿನಸಿ ಖರೀದಿಸಿ ಹೊರಟರು.

ಹೀಗೆ ಜನ ಮಾಲ್ ಲೇ ತೆಗೋಬೇಕು, ಸೀಝನ್ ಫ್ರೆಶ್ ಲೇ ಕೊಳ್ಳಬೇಕು, ಡೆಟಾಲ್ ಲೇ ಹಾಕಿ ಕೈ ತೊಳೆಯಬೇಕು, ಹೀಗೆ ಅದು ಇದು ಎನ್ನೋರು ಎಂದು ಲಾಕ್ಡೌನ್ ಸಡಿಲ ಆಗುತ್ತೋ ಆಗ ಎಂದೂ ಒಮ್ಮೆಯೂ ಮುಖ ಮಾಡಿರದ ಅಂಗಡಿಯಾಗಿದ್ದರೂ ಅದಕ್ಕೆ ನುಗ್ಗಿ ಸಿಕ್ಕಿದ್ದೇ ನಮ್ಮ ಪುಣ್ಯ ಎಂಬಂತೆ ಇರೋದೆಲ್ಲಾ ಖರೀದಿಮಾಡಿ, ರಸ್ತೆ ಬದಿ ಯಾದರೂ, ಗೂಡ್ಸ್ ಗಾಡಿಯಾದರೂ ಪರವಾಗಿಲ್ಲ ಎಂದು ತರಕಾರಿ ಖರೀದಿ ಮಾಡಿ, ಸಿಕ್ಕ ಸಿಕ್ಕ ಕಡೆ ಯಾವ್ಯಾದೋ ಬ್ರ್ಯಾಂಡಿನ ಸ್ಯಾನಿಟೈಸರ್, ಸೋಪ್ ವಾಶ್ ಗೆ ಕೈ ಒಡ್ಡುತ್ತಾ ‘ಬದುಕಿದೆಯಾ ಬಡ(ಬಂಡ) ಜೀವವೇ’ ಎಂದು ಹೇಳೋ ತರದ ಬದುಕನ್ನು ಬದುಕಿ, ಡಾರ್ವಿನ್ ನ ಸಿದ್ದಾಂತದಂತೆ ‘ಉಳುವಿಗಾಗಿ ಹೋರಾಟ’ ಮಾಡಿಕೊಳ್ಳುವ ಬದುಕಿನ ಈ ಜಂಜಾಟದಲ್ಲಿ ಮಾಸ್ಕ್, ಸ್ಯಾನಿಟೈಸರ್, ಸೋಪು, ಅಗತ್ಯ ವಸ್ತುಗಳ ಖರೀದಿಯಲ್ಲಿ ಜನತೆ ಬ್ರ್ಯಾಂಡ್ ಮರೆತು, ಸಿಕ್ಕರೇ ಸಾಕು ಎಂಬೋ ಮನೋಭಾವದಿಂದ ಜೀವನ ಸಾಗಿಸುವಂತಾಗಿದೆ.

ಹೀಗೆ ಅಳಿವು-ಉಳಿವಿನ ನಡುವೆ ಬದುಕೋದೇ ಜೀವನ..

Leave a Reply