ಆತ್ಮದ ಅಳಲು~ಭಾಗ್ಯಶ್ರೀ ಕಂಬಳಕಟ್ಟ

ಸುತ್ತಮುತ್ತಲೂ ನೀರವ ಮೌನ. ನನ್ನ ಮೇಲೆ ಹಾಕಿದ್ದ ಹೂಗಳೆಲ್ಲ ಅಲ್ಲಲ್ಲಿ ಚದುರಿ ಬಿದ್ದಿತ್ತು. ನನ್ನನ್ನು ಮಣ್ಣು ಮಾಡಲು ಬಂದಿದ್ದ ಜನರೆಲ್ಲಾ ತೆರಳಿದ್ದರು. ಇಹದ ವ್ಯಾಮೋಹ ಕಳೆಯದ ನನ್ನ ಆತ್ಮವೊಂದೇ ಅಲ್ಲಿ ಗೊತ್ತು ಗುರಿಯಿಲ್ಲದೆ ತಿರುಗಾಡುತ್ತಿತ್ತು.

ಆತ್ಮ ನನ್ನ ದೇಹದಲ್ಲಿದ್ದಾಗ ಎಷ್ಟೋ ಸಲ ಅನ್ನಿಸುತ್ತಿತ್ತು. ದೇವರು ಯಾವಾಗ ತನ್ನ ಬಳಿ ಕರೆಸಿಕೊಳ್ಳುವನೋ ಎಂದು. ಅದಕ್ಕೆ ಅಶ್ವಿನಿ ದೇವತೆಗಳು ಅಸ್ತು ಅಂದರೇನೋ… ಇಂದು ನನ್ನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಕೊರೋನಾ ಕಾರಣದಿಂದ ಅಂತಿಮ ದರ್ಶನಕ್ಕೆ ಬಂದಿದ್ದು ಬೆರಳೆಣಿಕೆಯಷ್ಟು ಜನ!

ಎಲ್ಲರತ್ತ ಒಂದು ಕಿರುನೋಟ ಹರಿಸಿದ್ದೆ. ಕೆಲವು ಆತ್ಮೀಯರು ನಿಜವಾಗಿಯೂ ದುಃಖದಿಂದ ಕಣ್ಣೀರು ಸುರಿಸುತ್ತಿದ್ದರೆ. ಇನ್ನು ಒಂದಷ್ಟು ಜನರ ಮೊಗದಲ್ಲಿ ತೋರಿಕೆಯ ಕಣ್ಣೀರು ಕಾಣಿಸುತ್ತಿತ್ತು.

ಎಷ್ಟು ಜನರನ್ನು ನಾನು ನನ್ನ ಹಿತೈಷಿಗಳು ಎಂದು ನಂಬಿದ್ದೆ… ಅವರಾರೂ ಎಲ್ಲೂ ಕಾಣಲಿಲ್ಲ . ಬದುಕಿದ್ದಾಗ ನನ್ನ ಕೈಯಿಂದ ಎಲ್ಲಾ ನೆರವುಗಳನ್ನು ಪಡೆದು ನನ್ನ ಜೊತೆ ಒಳ್ಳೆಯವರಂತೆ ನಟಿಸುತ್ತಿದ್ದವರ ನಿಜ ಬಣ್ಣ ಈಗ ಬಯಲಾದಾಗ ನನಗೆ ನಿಜಕ್ಕೂ ಆಘಾತವಾಗಿತ್ತು. ಇಂತಹ ಗೋಮುಖ ವ್ಯಾಘ್ರಗಳನ್ನು ನನ್ನ ಗೆಳೆಯರನ್ನಾಗಿ ಪಡೆದದ್ದಕ್ಕೆ ಖೇದವೆನಿಸಿದ್ದು ಸುಳ್ಳಲ್ಲ.

ನನ್ನ ದೇಹವಿನ್ನೂ ಚಾವಡಿಯಲ್ಲಿ ಮಲಗಿದ್ದಂತೆಯೇ.. ನಾನು ಗಿಣಿಯಂತೆ ಸಾಕಿದ ನನ್ನ ರಕ್ತ, ಮಾಂಸ ಹಂಚಿಕೊಂಡು ಹುಟ್ಟಿದ ಮಕ್ಕಳು ನನ್ನ ಆಸ್ತಿಯ ಕಾಗದ ಪತ್ರಗಳಿಗಾಗಿ ಒಳಗೊಳಗೆ ಹೊಂಚು ಹಾಕುತ್ತಾ, ಬೀರುವನ್ನು ತಡಕಾಡುತ್ತಾ ಗಿಡುಗಗಳಂತೆ ವರ್ತಿಸುವುದನ್ನು ಕಂಡಾಗ ಬೇಕಿತ್ತೇ ನನಗೆ ಮಕ್ಕಳ ಭಾಗ್ಯ ಎಂಬ ಭಾವ .

ನನ್ನ ಹೆಂಡತಿಗೂ ನಾನು ಕಣ್ಮರೆಯಾದದ್ದಕ್ಕಿಂತಲೂ, ಅವಳ ಮುಂದಿನ ಭವಿಷ್ಯದ ಬಗೆಗೆ ಯೋಚನೆಯೇ ಹೆಚ್ಚಾಗಿರುವಂತೆ ಭಾಸವಾಗುತ್ತಿತ್ತು. ನೆರೆಹೊರೆಯ ಕೆಲವು ಮಂದಿ, ‘ಒಳ್ಳೆಯ ಉದ್ಯೋಗದಲ್ಲಿದ್ದೇನೆ ಎಂದು ಮೆರೆಯುತ್ತಿದ್ದ… ಸರಿಯಾಗಿ ಆಯಿತು’ ಎಂದು ಒಳಗೊಳಗೆ ಅಂದುಕೊಳ್ಳುವುದು ನನಗೆ ಅರ್ಥವಾಗುತ್ತಿತ್ತು.

ನನಗಾಗಿ ಸ್ವಚ್ಛ ಹೃದಯದಿಂದ ಕಣ್ಣೀರಿಡುವ ಒಂದು ಮನವೂ ಕಾಣಸಿಗಲಿಲ್ಲ. ಕೆಲವರಿಗೆ ಮುಂದಿನ ಕೆಲಸಗಳನ್ನು ಬಹುಬೇಗ ಮುಗಿಸಿ ತಮ್ಮ ತಮ್ಮ ಮನೆಗಳನ್ನು ಸೇರಿಕೊಳ್ಳುವ ಧಾವಂತ. ಹಾಗಾಗಿ ಹೆಚ್ಚು ವಿಳಂಬವಿಲ್ಲದೆ ಕೊಂಚ ಸಮಯದಲ್ಲೇ ಸ್ಮಶಾನ ಸೇರಿದ್ದೆ.

ಮಾನವ ಶವವಾದರೆ ಎಲ್ಲರಿಗೂ ಭಾರ. ಕೊಳೆತು ನಾರುವ ಮೊದಲೇ ನನ್ನನ್ನು ಮಣ್ಣು ಮಾಡಿದ್ದರು. ಬಂದಷ್ಟೇ ವೇಗವಾಗಿ ಜನರೆಲ್ಲ ಅಲ್ಲಿಂದ ಖಾಲಿಯಾಗಿದ್ದರು. ಮಣ್ಣಿಗೆ ಸೇರಿದ ಮೇಲೆ ನನ್ನ ಅವಸ್ಥೆ ಹೇಳತೀರದು. ಸುತ್ತಲೂ ರುದ್ರ ಗಂಭೀರ ಮೌನ ಮನೆಮಾಡಿತ್ತು.

ಬದುಕಿದ್ದಾಗ ಸಮಸ್ಯೆಗಳಿಗೆ ಹೆದರಿ… ಆತ್ಮಹತ್ಯೆಯ ಆಲೋಚನೆ ಮಾಡಿದೆ. ಸತ್ತಮೇಲೂ ಆ ಸಮಸ್ಯೆಗಳಿಗೆ ಪರಿಹಾರ ದೊರೆಯಲೇ ಇಲ್ಲ. ಈಗ ಅನ್ನಿಸುತ್ತಿದೆ… ಎದುರಾದ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ, ಒಂದಿಷ್ಟು ಜಾಗರೂಕತೆಯಿಂದ ಇರುತ್ತಿದ್ದರೆ… ಕಷ್ಟವಾದರೂ ಇನ್ನಷ್ಟು ದಿನ ಬದುಕಬಹುದಿತ್ತೇನೋ…

ಇಹಲೋಕದಲ್ಲಿದ್ದಾಗ ಪರಲೋಕ ಸೇರಲು ಪರಮಾತ್ಮನ ಬಳಿ ಬೇಡಿಕೊಂಡೆ. ಈಗ ಮರಳಿ ಬದುಕಿಸು ಎಂದು ದೇವರಲ್ಲಿ ಬೇಡಿಕೊಂಡರೆ ಅದು ಸಾಧ್ಯವೇ…? ಇಹದ ಬಂಧನ ಮುಗಿಯುವವರೆಗೆ ನನಗೆ ಈ ಅಲೆದಾಟ ತಪ್ಪಿದ್ದಲ್ಲ. ಆದಷ್ಟು ಬೇಗ ನನ್ನ ಅಲೆದಾಟಕ್ಕೆ ಮುಕ್ತಿ ನೀಡಿ, ಆತ್ಮಕ್ಕೆ ಮೋಕ್ಷ ದೊರಕಿಸಿಕೊಡು ಎಂದು ದೇವರಲ್ಲಿ ಬೇಡಿಕೊಳ್ಳುವುದು ಬಿಟ್ಟರೆ ನನಗೆ ಬೇರೆ ಮಾರ್ಗ ಉಳಿದಿರಲಿಲ್ಲ.

 

 
 
 
 
 
 
 
 
 
 
 

Leave a Reply