ಕುಂಜೂರು ಶ್ರೀ ದುರ್ಗಾ ದೇವಸ್ಥಾನ~ ಕೆ.ಎಲ್.ಕುಂಡಂತಾಯ

​​ಪುರಾತನ ಸತ್ಯ ,ಮಣ್ಣಿನ ಮಹತ್ವಿಕೆ, ಗಾಢವಾದ ನಂಬಿಕೆ – ನಡವಳಿಕೆಗಳಿಗೆ ಆಶ್ರಯಸ್ಥಾನವಾಗಿರುವ ಶ್ರದ್ಧಾ ಸ್ಥಾನಗಳಲ್ಲಿ‌ ದುರ್ಗಾ ಸನ್ನಿಧಾನಗಳು ಪ್ರಧಾನವಾಗಿವೆ. ನಮ್ಮ ಜಿಲ್ಲೆಯ ಪ್ರಸಿದ್ಧ ಶಕ್ತಿ ಉಪಾಸನಾ ದೇವಾಯತನ ಗಳಲ್ಲಿ ಎಲ್ಲೂರು ಗ್ರಾಮದ  ಕುಂಜೂರು ಶ್ರೀ ದುರ್ಗಾ ದೇವಸ್ಥಾನ ಒಂದು. ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನದ ವತಿಯಲ್ಲಿ 1919 (ಇವತ್ತಿಗೆ ನೂರೊಂದು ವರ್ಷ ಹಿಂದೆ) ರಲ್ಲಿ ಪ್ರಕಟವಾದ “ಎಲ್ಲೂರು ಮಹಾತ್ಮ್ಯಂ” ಸಂಸ್ಕೃತ ಶ್ಲೋಕಗಳ ಸಣ್ಣ ಪುಸ್ತಕದ ಮೂಲ  ಸ್ಕಾಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿದೆ ಎಂಬ ಮಾಹಿತಿಯನ್ನು ನೀಡುತ್ತದೆ .ಈ ಎಲ್ಲೂರು ಮಹಾತ್ಮ್ಯೆಯಲ್ಲಿ  ಕುಂಜಪುರ (ಕುಂಜೂರು) ಕ್ಷೇತ್ರದ ಕಲ್ಪನೆ ಪರಮಾದ್ಭುತವಾದುದು ಎಂದೆನ್ನಲಾಗಿದೆ .

ಭಾರ್ಗವ ಋಷಿಯು ಒತ್ತೊತ್ತಾಗಿ ಮರಗಳು ಬೆಳೆದಿರುವ ಕುಂಜ ಹಾಗೂ ಬದಿಯಲ್ಲಿ ಬಹಳ ಅಗಲಕ್ಕೆ ಹರಿಯುತ್ತಿದ್ದ   ವಾರುಣೀ ಎಂಬ ನದಿಯನ್ನು ಲಕ್ಷ್ಯವಾಗಿರಿಸಿಕೊಂಡು ನದಿಯನ್ನು ಮುಚ್ಚಿ ಮಹಾಯಾಗವನ್ನು  ಮಾಡಿ ಭೂಮಿಯನ್ನು ಪವಿತ್ರೀಕರಿಸಿ ದುರ್ಗಾ ಶಕ್ತಿಯನ್ನು ಸಂಕಲ್ಪಸಿದನೆಂಬ ಉಲ್ಲೇಖವಿದೆ. ಇದು ಕುಂಜೂರು ದುರ್ಗಾ ದೇವಸ್ಥಾನ ಕ್ಕಿರುವ ಪೌರಾಣಿಕ ಹಿನ್ನೆಲೆ .

ಸುಂದರ ದುರ್ಗಾ ಮೂರ್ತಿ: ಸುಮಾರು ಒಂದು ಸಾವಿರದ ಇನ್ನೂರು ವರ್ಷ ( 9 ನೇ ಶತಮಾನದ ನಿರ್ಮಿತಿ ) ಪ್ರಾಚೀನ ವಾದ ದೇವಾಲಯದ ಮೂಲಸ್ಥಾನ ದುರ್ಗಾ ಮೂರ್ತಿ ಸುಂದರ, ಚಿತ್ತಾಕರ್ಷಕ. ಮಿತಾಲಂಕಾರದ ಕುಸುರಿ ಗಳುಳ್ಳ ಕರಿಶಿಲೆಯ ಮೂರ್ತಿ ಸ್ಕಂದ ಭಂಗದಲ್ಲಿದೆ. ಮುಖವುವೃತ್ತಾಕಾರವಾಗಿದ್ದು, ಶಂಕುವಿನಾಕಾರದ ಕಿರೀಟವಿದೆ .ಮಹಿಷನ ತಲೆಯ ಮೇಲೆ ಕಾಲನ್ನಿಟ್ಟು ನಿಂತ ನಿರ್ದೇಶವಿದೆ .ಮಹಿಷಾಸುರನ ವಧಾನಂತರದಲ್ಲಿ‌ ಸಾವಧಾನ‌ಳಾಗಿ ನಿಂತ ನಿಲುವು ಮೋಹಕ ಎಂದು ಖ್ಯಾತ ಇತಿಹಾಸ ತಜ್ಞ ಡಾ.ಗುರುರಾಜ ಭಟ್ಟರು ನಿರೂಪಿಸಿದ್ದಾರೆ.

ನಾಲ್ಕು ಕೈಗಳುಳ್ಳ ಈ ದುರ್ಗಾ ಬಿಂಬದ ಮೇಲಿನ ಬಲಕೈಯಲ್ಲಿ ಪ್ರಯೋಗಚಕ್ರ, ಮೇಲಿನ ಎಡ ಕೈಯಲ್ಲಿ ಶಂಖ, ಕೆಳಗಿನ ಎಡ ಕೈಯಲ್ಲಿ ಯಾವ ಆಯುಧವೂ ಇಲ್ಲ (ಏನೋ ಹಿಡಿದಂತಿದೆ). ಕೆಳಗಿನ ಬಲಕೈಯಲ್ಲಿ ತ್ರಿಶೂಲವನ್ನು ಹಿಡಿದಂತಿದೆ .ಈ ಶಿಲಾಪ್ರತಿಮೆಯ ನಿರ್ಮಾಣ ಶೈಲಿಯನ್ನು ವಿಶೇಷವಾಗಿ ಗುರುತಿಸಿರುವ ಇತಿಹಾಸಕಾರ ಗುರುರಾಜ ಭಟ್ಟರು ಉಡುಪಿ ಜಿಲ್ಲೆಯ ಐತಿಹಾಸಿಕ ಮಹತ್ವದ ಹಾಗೂ ಅಪೂರ್ವವೆಂದು ಗುರುತಿಸಬಹುದಾದ ಕೆಲವೇ ಪ್ರತಿಮೆಗಳಲ್ಲಿ ಇದು ಒಂದು ಎಂದು ವಿವರಿಸಿದ್ದರು.
ಪಂಚಲೋಹದ ಸುಮಾರು 10 ಇಂಚು ಎತ್ತರದ ಉತ್ಸವಮೂರ್ತಿಯೂ ಚತುರ್ಬಾಹುವಾಗಿದ್ದು ಕ್ರಿ.ಶ.14-15 ನೇ ಶತಮಾನದ ನಿರ್ಮಿತಿ ಎನ್ನಲಾಗಿದೆ. ಉಪಸ್ಥಾನ ಬಲಮುರಿ ಗಣಪತಿ ಪ್ರಾಚೀನತೆಯ ದೃಷ್ಟಿಯಲ್ಲಿ ಕ್ರಿ.ಶ. 9-10 ಶತಮಾನದಷ್ಟು ಪ್ರಾಚೀನವಾದುದು. ಅಲಂಕಾರ ರಹಿತವಾದ ಕುಬ್ಜ ಗಣಪತಿ  ಕುಳಿತ ಭಂಗಿಯಲ್ಲಿದೆ. ಒಂದು ಅಡಿ ಎತ್ತರ ವಿದೆ. ತಾಯಿ ಮತ್ತು ಮಗ ಇಬ್ಬರ ದಿವ್ಯ ಸನ್ನಿಧಿಗಳಿರುವುದು ಒಂದು ವಿಶೇಷವಾದರೆ ಗಣಪ ಬಲಮುರಿಯಾಗಿದ್ದು ಪ್ರಭಾವ ಶಾಲಿ ಶಕ್ತಿಯುತನು – ಅನುಗ್ರಹಕಾರಕನು ಎಂದು ನಂಬಲಾಗಿದೆ.
ಸಂತಾನ ,ವಿವಾಹ ಪ್ರತಿಬಂಧಕಗಳನ್ನು ನಿವಾರಿಸುವ ಸನ್ಮಂಗಳಗಳನ್ನು ಅನುಗ್ರಹಿಸುವ ದುರ್ಗಾ ಮಾತೆ  ಶರಣಾಗಿ ಬಂದವರ ದುರ್ಗಮ ದುರಿತಗಳನ್ನು ನಿವಾರಿಸುವ ಕುಂಜೂರಮ್ಮ ಎಂಬುದು ನಂಬಿಕೆ ,ಅದರಂತೆ ಭಕ್ತರು ನಡೆದು ಕೊಳ್ಳುತ್ತಾರೆ. ದುರ್ಗಾನಮಸ್ಕಾರ, ಹೂವಿನಪೂಜ, ಕುಂಕುಮಾರ್ಚನೆ, ಚಂಡಿಕಾಹೋಮ ಸಹಿತ ವಿವಿಧ ದುರ್ಗಾ ಸಂಬಂಧಿಯಾಗಗಳು ಸೇವಾರೂಪದಲ್ಲಿ ನಿರಂತರ ನಡೆಯುತ್ತಿದೆ. ಗಣಪತಿಗೆ ರಂಗಪೂಜೆ, ಕಡುಬುಸೇವೆ, ದುರ್ಗೆಗೆ ಮಧುರಪಾಯಸ ವಿಶೇಷ ಸೇವೆಗಳು.
2004 ರಲ್ಲಿ ಜೀರ್ಣೋದ್ಧಾರ ನೆರವೇರುತ್ತದೆ. ಬಳಿಕ ದೇವಾಲಯ ಮತ್ತಷ್ಟು ಜನಪ್ರಿಯವಾಗಿದೆ. ವಿಜೃಂಭಣೆಯ ವಾರ್ಷಿಕ ನಡಾವಳಿ ,ನವರಾತ್ರಿ ಆಚರಣೆಗಳೆಲ್ಲ ವೈಭವದಿಂದ ನಡೆಯುತ್ತವೆ. ಇಲ್ಲಿಯ ವ್ಯವಸ್ಥಿತ ಅನ್ನಸಂತರ್ಪಣೆ ಜನಪ್ರಿಯ ವಾಗಿದೆ. ಆದರೆ ಈ ವರ್ಷ ಸರಕಾರದ ಸೂಚನೆಯಂತೆ ಅನ್ನಸಂತರ್ಪಣೆಗಳಿಲ್ಲ. ಸರಳ ನವರಾತ್ರಿ ಪೂಜೆ ಹೋಮ ಗಳೊಂದಿಗೆ ಮಾತ್ರ ನಡೆಯುತ್ತಿದೆ.
ಕುಂಜೂರು: ಎಲ್ಲೂರು ಗ್ರಾಮ, ಕಾಪುತಾಲೂಕು, ಉಡುಪಿ ಜಿಲ್ಲೆಯಲ್ಲಿದೆ. ಉಡುಪಿ – ಮಂಗಳೂರು ಹೆದ್ದಾರಿಯಲ್ಲಿ ಉಚ್ಚಿಲದಲ್ಲಿ ಇಳಿದು ಪೂರ್ವಾಭಿಮುಖವಾಗಿ ಎರಡು ಕಿ.ಮೀ. ಬಂದು ರೈಲ್ವೇ ಸೇತುವೆಯ ಬಳಿಕ ಬಲಕ್ಕೆ ತಿರುಗಿದರೆ ನೇರವಾಗಿ ಒಂದು ಕಿ.ಮೀ.ಕ್ರಮಿಸಿ ದೇವಸ್ಥಾನ ತಲುಪಬಹುದು.

 
 
 
 
 
 
 
 
 
 
 

Leave a Reply