ಅಷ್ಟಮಠದ ಯತಿದ್ವಯರಿಂದ ರೇಡಿಯೋ ಸ್ಟೇಷನ್ ~ಪಿ.ಲಾತವ್ಯ ಆಚಾರ್ಯ ಉಡುಪಿ.

ಜಪ, ತಪ, ಪೂಜೆ ಪುರಸ್ಕಾರ ವೃತಾನುಷ್ಟಾನಗಳೊಂದಿಗೆ ಧಾರ್ಮಿಕತೆ, ಕಲೆ ಹಾಗೂ ಸಮಾಜಕ್ಕೆ ಅಪೂರ್ವ ಕೊಡುಗೆಗಳನ್ನು ನೀಡಿದ ಅಪರೂಪದ ಗುರುಗಳು ಶ್ರೀಕೃಷ್ಣಾಪುರಮಠದ 33ನೇ ಯತಿಗಳಾದ ಶ್ರೀವಿದ್ಯಾರತ್ನ ತೀರ್ಥರು. ಇವರು ಶ್ರೀಮಧ್ವಾಚಾರ್ಯರ ತತ್ವವಾದದ ಪ್ರಚಾರಕ್ಕಾಗಿ ಸ್ವತಂತ್ರ ರೇಡಿಯೋ ಸ್ಟೇಷನ್ ನಿರ್ಮಿಸ ಬೇಕೆಂದು ಹಂಬಲಿಸಿ ತತ್ಸಂಬಂದ ರೂಪು ರೇಷೆಗಳನ್ನೆಲ್ಲಾ ಸಿದ್ದಪಡಿಸಿದ್ದರು..!

ಆಶ್ರಮಪೂರ್ವದಲ್ಲೇ ಹಿಂದಿ,ಇಂಗ್ಲೀಷ ಭಾಷೆಗಳನ್ನು ಅಧ್ಯಯನ ನಡೆಸಿ ದೇಶದ ಸಮಗ್ರ ತೀರ್ಥಕ್ಷೇತ್ರಗಳ ಸಂದರ್ಶನವನ್ನು ಪೂರೈಸಿದ್ದರು. ಕೃಷ್ಣಾಪುರಮಠದ 32ನೇ ಯತಿಗಳಾದ ಶ್ರೀವಿದ್ಯಾಪೂರ್ಣತೀರ್ಥರಲ್ಲಿ ಶ್ರೀಮನ್ಯಾಯಸುಧಾ ಹಾಗೂ ಇನ್ನಿತರ ಶಾಸ್ತ್ರಗ್ರಂಥಗಳ ಅಧ್ಯಯನ ನಡೆಯಿತು. ನಂತರ ಶ್ರೀಪುತ್ತಿಗೆಮಠದ ಶ್ರೀಸುಧೀಂದ್ರತೀರ್ಥರಿಂದ ಆಶ್ರಮದೀಕ್ಷೆ ಸ್ವೀಕರಿಸಿ ಕಾಶಿಯಲ್ಲಿ ಹಲವಾರು ವರ್ಷಗಳಕಾಲ ಕಠಿಣವಾದ ವಿಧ್ಯಾಭ್ಯಾಸ ನಡೆಸಿ ಬದರೀಯಾತ್ರೆ ಮುಗಿಸಿ ಉಡುಪಿಗೆ ಆಗಮಿಸಿದರು.

ಶ್ರೇಷ್ಠ ವಿದ್ವಾಂಸರೂ ಹಾಗೂ ಚಿಂತಕರಾಗಿದ್ದ ಇವರು 1950 ರ ದಶಕದಲ್ಲಿ ತಮ್ಮ ಮಠದ ವತಿಯಿಂದ “ಶ್ರೀಕೃಷ್ಣಪರ್ಯಾಯಪ್ರಕಾಶಿನೀ” ಎಂಬ ಮಾಸಪತ್ರಿಕೆಯನ್ನು ಆರಂಭಿಸಿದರು. ಶ್ರೀಪಾದರ ಸಂಪಾದಕತ್ವದಲ್ಲಿ ಶುಭಾರಂಭಗೊಂಡ ಈ ಪತ್ರಿಕೆಯು ಆದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿತ್ತು. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಜಾಗೃತಿಯ ಅಪೂರ್ವಬರಹಗಳೊಂದಿಗೆ ಮೂಡಿಬರುತ್ತಿದ್ದ ಈ ಪತ್ರಿಕೆಯು ಶ್ರೀಪಾದರ ಜೀವನದ ಅಂತಿಮ ಕ್ಷಣದವರೆಗೂ ಪ್ರಕಟವಾಗುತ್ತಿತ್ತು.

ಕೃಷ್ಣ ಭಕ್ತಿ ಮತ್ತು ಮಧ್ವಸಿದ್ದಾಂತದ ವ್ಯಾಪಕ ಪ್ರಚಾರವೇ ಈ ಪತ್ರಿಕೆಯ ಮೂಲ ಉದ್ದೇಶವಾಗಿತ್ತು.ಆದರೆ ಕೇವಲ ಪತ್ರಿಕೆಯಿಂದ ತಮ್ಮ ಉದ್ದೇಶ ಸಫಲವಾಗದು ಎಂಬುದು ಶ್ರೀಪಾದರಿಗೆ ಅರಿವಾಯಿತು. ಶ್ರೀವಿದ್ಯಾರತ್ನತೀರ್ಥರು ಭಾರತದ ತೀರ್ಥಕ್ಷೇತ್ರಗಳ ಸಂದರ್ಶನ ನಡೆಸಿದ್ದ ಸಂದರ್ಭದಲ್ಲೂ ಕೂಡಾ ದ್ವೈತಸಿದ್ಧಾಂತ ಹಾಗೂ ಶ್ರೀಮಧ್ವಾಚಾರ್ಯರ ಕುರಿತಾಗಿ ವಿಶೇಷ ಧರ್ಮಪ್ರಚಾರದ ಅವಶ್ಯಕತೆ ಇರುವುದನ್ನು ಮನಗಂಡಿದ್ದರು.

ಆ ಹೊತ್ತಿಗಾಗಲೇ ದೇಶದ ವಿವಿಧ ತತ್ವಸಿದ್ದಾಂತಗಳಿಗೆ ಸಂಬಂಧಿಸಿದ ಅನೇಕ ಕೃತಿಗಳು ಜಗತ್ತಿನ ಪ್ರಮುಖ ಭಾಷೆಗಳಲ್ಲಿ ಪ್ರಕಟವಾಗಿ ಜಾಗತಿಕವಾಗಿ ಪ್ರಸಾರವಾಗುತ್ತಿತ್ತು. ದೇಶದ ಅನೇಕ ಪ್ರಮುಖ ನಗರಗಳಲ್ಲಿ,ಧರ್ಮ ಕ್ಷೇತ್ರಗಳಲ್ಲಿ ವಿವಿಧ ಮತಗಳ ಕೇಂದ್ರಗಳು ವಿದ್ಯಾಲಯಗಳು ಪೂರ್ಣಪ್ರಮಾಣದಲ್ಲಿ ಕಾರ್ಯಾಚರಿಸುತ್ತಿದ್ದವು. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ ಶ್ರೀವಿದ್ಯಾರತ್ನ ತೀರ್ಥರು ರಾಷ್ಟ್ರಮಟ್ಟದಲ್ಲಿ ಮಧ್ವಸಿದ್ದಾಂತದ ವ್ಯಾಪಕತೆ ಗಾಗಿ ಏನಾದರೊಂದು ಹೊಸ ಯೋಜನೆಯನ್ನು ರೂಪಿಸಬೇಕೆಂದು ನಿರ್ಧರಿಸಿದರು. ತಡಮಾಡಲಿಲ್ಲ.
ದಾಪುಗಾಲಿಟ್ಟರು.

ತಮ್ಮ ಆತ್ಮೀಯ ಶಿಷ್ಯರೂ, ಕವಿಗಳೂ ಹಾಗೂ ವೈಜ್ಞಾನಿಕಚಿಂತನೆ ಹೊಂದಿದ್ದ ಶ್ರೀಶಿರೂರು ಮಠದ ಶ್ರೀಲಕ್ಷ್ಮೀ ಮನೋಜ್ಞತೀರ್ಥರ ಜೊತೆಸೇರಿ ಹೊಸಯೋಜನೆಗೆ ಕಾರ್ಯಪ್ರವೃತ್ತರಾದರು. ಶ್ರೀವಿದ್ಯಾರತ್ನತೀರ್ಥರಿಗಿಂತ ವಯಸ್ಸು ಹಾಗೂ ಆಶ್ರಮದಲ್ಲಿ ಶ್ರೀಲಕ್ಷ್ಮೀಮನೋಜ್ಞರು ಬಹಳ ಕಿರಿಯರಾಗಿದ್ದರೂ ಕೂಡಾ ಶ್ರೀಲಕ್ಷ್ಮೀ ಮನೋಜ್ಞ ತೀರ್ಥರ ಬಗ್ಗೆ ಶ್ರೀವಿದ್ಯಾರತ್ನತೀರ್ಥರಿಗೆ ಅಪಾರ ಪ್ರೀತಿ ಗೌರವ. ಪರಸ್ಪರರು ಅತ್ಯಂತ ಆತ್ಮೀಯರಾಗಿದ್ದರು. ಹೀಗಾಗಿ ಯತಿದ್ವಯರು ಜೊತೆಯಾಗಿ ಸೇರಿ ಮಧ್ವ ಸಿದ್ದಾಂತದ ಪ್ರಸಾರದ ಬಗ್ಗೆ ವಿನೂತನ ಯೋಜನೆಗೆ ಮುಂದಾದರು.

ಶ್ರೀಮಧ್ವಾಚಾರ್ಯರ ತತ್ವವಾದದ ಪ್ರಚಾರಕ್ಕಾಗಿ ಉಡುಪಿಯಲ್ಲಿ ಆಚಾರ್ಯ ಮಧ್ವರ ಹೆಸರಿನಲ್ಲಿ ಸ್ವತಂತ್ರ ರೇಡಿಯೋ ಸ್ಟೇಷನ್ ನಿರ್ಮಾಣ ಮಾಡಬೇಕೆಂದು ಸಂಕಲ್ಪಿಸಿದರು. ಪ್ರಾರಂಭಿಕ ಹಂತದ ಅನೇಕ ಕೆಲಸಗಳು ಗೌಪ್ಯವಾಗಿಆರಂಭವಾದವು. ಅಂದಿನ ಉಡುಪಿಯ ಲೋಕಸಭಾ ಸದಸ್ಯರಾಗಿದ್ದ ಮಾನ್ಯ ರಂಗನಾಥ ಶೆಣೈಯವರು, ಶ್ರೀಟಿ.ಎ.ಪೈ ಸೇರಿದಂತೆ ಸಮಾನಮನಸ್ಕರ ಜೊತೆ ಸಮಾಲೋಚನೆ ನಡೆಸಿ ಸಮಿತಿಯ ರಚನೆಯೂ ಪೂರ್ಣವಾಗಿತ್ತು.

ಸಂಬಂಧಿತ ಇಲಾಖೆಯ ಪ್ರಮುಖರನ್ನು ಸ್ವತಃ ಶ್ರೀಲಕ್ಷ್ಮೀಮನೋಜ್ಞ ತೀರ್ಥರೇ ಬೇಟಿಮಾಡಿ ಮಾತುಕತೆ ನಡೆಸಿದರು.ಕೇಂದ್ರ ಸಚಿವರೊಬ್ಬರ ಜೊತೆ ಮೊದಲಸುತ್ತಿನಮಾತುಕತೆಯೂ ಜರಗಿತು. ಪ್ರಾರಂಭಿಕ ಹಂತದ ನಿರೀಕ್ಷಿತ ಖರ್ಚುವೆಚ್ಚ ಲೆಕ್ಕಪತ್ರಗಳ ತಯಾರಿಯ ಜವಾಬ್ದಾರಿಯನ್ನು ಬೆಂಗಳೂರು ಆಕಾಶವಾಣಿಯ ನಿವೃತ್ತ ಅಧಿಕಾರಿಯೊಬ್ಬರು ಹೊತ್ತಿದ್ದರು. ಶ್ರೀರಂಗನಾಥಶೆಣೈಯವರು ಈನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದರು.
ಸೂಕ್ತಸ್ಥಳದ ಆಯ್ಕೆಯೂ ನಿರ್ಧಾರವಾಗಿತ್ತು.ಆದರೆ..

ವಿಧಿಯಆಟ ಬಲ್ಲವರಾರು. 1971ನೇ ಇಸವಿ, ಏಪ್ರಿಲ್ 15ರ ವಿರೋಧಿಕೃತ್ ಸಂರ!!ದ ಚೈತ್ರ ಕೃಷ್ಣ ಪಂಚಮಿ ಯಂದು ಶ್ರೀವಿದ್ಯಾರತ್ನತೀರ್ಥರು ಅನಿರೀಕ್ಷಿತವಾಗಿ ವಿಷ್ಣುಪಾದ ಸೇರಿದರು. ಜನಾನುರಾಗಿಯಾಗಿದ್ದ ಶ್ರೀಪಾದರ ಅಕಾಲ ಅಗಲುವಿಕೆಯಿಂದ ಉಡುಪಿಯು ತಲ್ಲಣಗೊಂಡಿತ್ತು. ಅನೇಕ ದಿನಗಳ ಕಾಲ ಉಡುಪಿಯು ಶೋಕಸಾಗರ ದಲ್ಲಿ ಮುಳುಗಿತ್ತು..

ಅಂದಿನ ವೈಭವಗಳನ್ನು ಕಣ್ಣಾರೆ ಕಂಡಿದ್ದ ಉಡುಪಿಯ ನಿವಾಸಿಯಾಗಿರುವ 85ರ ಹರೆಯದ ಹಿರಿಯರೊಬ್ಬರು ಗತಕಾಲದ ಘಟನೆಗಳನ್ನು ರೇಡಿಯೋ ಸ್ಟೇಷನ್ ವಿಚಾರವನ್ನು ಭಾವುಕರಾಗಿ ಮೆಲುಕು ಹಾಕುತ್ತಿದ್ದರು.
ಅಲ್ಲದೇ ಶ್ರೀಪಾದರ ಆಪ್ತರಾಗಿದ್ದ ಶ್ರೀ.ಪಿ.ರಾಜಗೋಪಾಲ ಆಚಾರ್ಯರೂ ಕೂಡಾ ಈ ಎಲ್ಲಾ ಸಂಗತಿಗಳನ್ನು ಅಗಾಗ್ಗೆ ಸ್ಮರಿಸುತ್ತಿದ್ದರು.

ಮಧ್ವಸಿದ್ದಾಂತ,ಕೃಷ್ಣಭಕ್ತಿಯ ಪ್ರಸಾರಕ್ಕಾಗಿ ಐದು ದಶಕಗಳ ಪೂರ್ವದಲ್ಲೇ ಯತಿದ್ವಯರು ಹೊಂದಿದ್ದ ದೂರ ದರ್ಶಿತ್ವ, ಕಾಳಜಿ, ಸತ್ಚಿಂತನೆಗಳಿಗೆ ನಮೋನ್ನಮಃ. ಪರಮಪೂಜ್ಯರ ಆಶೀರ್ವಾದ, ರಕ್ಷೆ ಸದಾ ನಮ್ಮೆಲ್ಲರಿಗೂ ಇರಲಿ ಎಂದು ಈ ಪರ್ವಕಾಲದಲ್ಲಿ ಪ್ರಾರ್ಥಿಸುತ್ತಾ ಈ ಪುಟ್ಟ ಬರಹವನ್ನು ಪೂಜ್ಯಶ್ರೀಪಾದದ್ವಯರ ಪಾದಕಮಲ ಗಳಿಗೆ ಭಕ್ತಿಪೂರ್ವಕವಾಗಿ ಅರ್ಪಿಸುತ್ತಿದ್ದೇನೆ.

 
 
 
 
 
 
 
 
 

Leave a Reply