ಧರ್ಮಸ್ಥಳದಿಂದ ಅಯೋಧ್ಯೆಗೆ ಬೆಳ್ಳಿಯ ಪೂಜಾ ಸಾಮಾಗ್ರಿಗಳ ಸಮರ್ಪಣೆ

ಉಡುಪಿ: ಅಯೋಧ್ಯೆ ಶ್ರೀರಾಮ ಲಲ್ಲಾನ ನಿತ್ಯಪೂಜೆಗೆ ಬಳಕೆಯಾಗುವ ವಿವಿಧ ಬೆಳ್ಳಿಯ ಪರಿಕರಗಳನ್ನು ಧರ್ಮಸ್ಥಳ ಶ್ರೀಕ್ಷೇತ್ರದ ವತಿಯಿಂದ ನೀಡಲಾಗುತ್ತಿದ್ದು, ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು ಕಳಿಸಿಕೊಟ್ಟ ಪೂಜಾ ಪರಿಕರಗಳನ್ನು ಹೆಗ್ಗಡೆ ಅವರ ಸಹೋದರ ಹರ್ಷೇಂದ್ರಕುಮಾರ್ ಸೋಮವಾರ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಿದರು.
ಶ್ರೀರಾಮನ ನಿತ್ಯಪೂಜೆಗೆ ಬಳಕೆಯಾಗುವ ಬೆಳ್ಳಿ ಬಿಂದಿಗೆ (ಕಲಶ), ಅಭಿಷೇಕ ಶಂಖ, ತಟ್ಟೆ, ಲೋಟಗಳು, ವಿವಿಧ ಬಗೆಯ ಆರತಿಗಳು, ಬೀಸಣಿಗೆಗಳು, ಗಂಟೆ, ಅಭಿಷೇಕ ತೀರ್ಥಪಾತ್ರೆ ಇತ್ಯಾದಿ ಒಳಗೊಂಡಿದೆ.
ಪೂಜಾ ಪರಿಕರಗಳನ್ನು ಸ್ವೀಕರಿಸಿದ ಪೇಜಾವರ ಶ್ರೀಪಾದರು, ಶ್ರೀರಾಮ ಮತ್ತು ಶಿವನ ಅನ್ಯೋನ್ಯತೆ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ವಿಷ್ಣು ಸಹಸ್ರನಾಮಕ್ಕೆ ಸಮನಾದ ಶ್ರೀರಾಮ ನಾಮವನ್ನು ಸ್ವತಃ ಪರಶಿವನೇ ಸತಿ ಪಾರ್ವತಿಗೆ ಉಪದೇಶಿಸಿದ. ಈ ಹಿನ್ನೆಲೆಯಲ್ಲಿ ಪ್ರಸಿದ್ಧ ಶಿವಕ್ಷೇತ್ರವಾದ ಧರ್ಮಸ್ಥಳದ ಮಂಜುನಾಥನ ಕ್ಷೇತ್ರಕ್ಕೂ ಅಯೋಧ್ಯೆ ಶ್ರೀರಾಮ ಸನ್ನಿಧಿಗೂ ಅವಿನಾಭಾವ ಸಂಬಂಧ ವೃದ್ಧಿಯಾಗಲಿ, ಇನ್ನಷ್ಟು ಬೆಳಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಪ್ರಧಾನ ಅರ್ಚಕ ರಾಮಕೃಷ್ಣ ಕಲ್ಲೂರಾಯ, ಮಣೆಗಾರ ವಸಂತ ಮುಂಜಿತ್ತಾಯ, ಪರೀಕ ಸೌಖ್ಯವನ ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ವ್ಯವಸ್ಥಾಪಕ ಪ್ರವೀಣಕುಮಾರ್, ಪ್ರದೀಪ ಕುಮಾರ್ ಕಲ್ಕೂರ, ಯಕ್ಷಗಾನ ಕಲಾರಂಗ ಮಾಜಿ ಅಧ್ಯಕ್ಷ ಗಣೇಶ ರಾವ್, ಪೇಜಾವರ ಮಠ ವ್ಯವ ಸ್ಥಾಪಕ ಸುಬ್ರಹ್ಮಣ್ಯ ಭಟ್, ವಾಸುದೇವ ಭಟ್ ಮೊದಲಾದವರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಸ್ಥಳ ಹರ್ಷೇಂದ್ರಕುಮಾರ್, ಅಯೋಧ್ಯೆಗೆ ಶ್ರೀಕ್ಷೇತ್ರ ಧರ್ಮಸ್ಥಳ ದಿಂದ ಸಮರ್ಪಿಸಲಾದ ಪರಿಕರಗಳಿಗೆ ಬೆಲೆ ಕಟ್ಟಲಾಗದು. ಇದು ಭಕ್ತಿ ಶ್ರದ್ಧೆಯ ಪ್ರತೀಕ ಮತ್ತು ಡಾl ಹೆಗ್ಗಡೆಯವರ ಆಶಯ ಎಂದರು
 
 
 
 
 
 
 
 
 
 
 

Leave a Reply