ಮುಖ್ಯಮಂತ್ರಿಯಿಂದ  ಕೆ.ಎಸ್.ಎಫ್.ಸಿ. ಕಿರುಹೊತ್ತಿಗೆ ಬಿಡುಗಡೆ

ಉಡುಪಿ: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆ.ಎಸ್.ಎಫ್.ಸಿ) ಯು ದೇಶದಲ್ಲೇ ರಾಜ್ಯ ಹಣಕಾಸು ಸಂಸ್ಥೆಗಳಲ್ಲಿ ಮುಂಚೂಣಿ ಹಣಕಾಸು ಸಂಸ್ಥೆಯಾಗಿದೆ. ರಾಜ್ಯದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ದೀರ್ಘ ಕಾಲೀನ ಮತ್ತು ಅಲ್ಪಾವಧಿಯ ಆರ್ಥಿಕ ಅಗತ್ಯಗಳನ್ನು ಪೂರೈಸಲು 1959 ರಲ್ಲಿ ಕೆ.ಎಸ್.ಎಫ್.ಸಿ ಯು ಅಸ್ತಿತ್ವಕ್ಕೆ ಬಂದಿದ್ದು, ಸಂಸ್ಥೆಯು ರಾಜ್ಯದಲ್ಲಿ ಸಾಮಾಜಿಕ-ಆರ್ಥಿಕ ಬದಲಾವಣೆಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದೆ.
ರಾಜ್ಯದ ಸುಸ್ಥಿರ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಗೆ ಸೂಕ್ಷ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸ್ಥಾಪನೆಗೆ ಮತ್ತು ಅಭಿವೃದ್ಧಿಗೆ ಸಹಾಯ ಮಾಡುತ್ತಿದ್ದು, ಇಂದು 2208 ಕೋಟಿ ರೂ. ಆಸ್ತಿ ಹೊಂದಿ, ದೇಶದ ಪ್ರಮುಖ ರಾಜ್ಯ ಹಣಕಾಸು ನಿಗಮಗಳಲ್ಲಿ ಒಂದಾಗಿದೆ.
ಕೆ.ಎಸ್.ಎಫ್.ಸಿ ಯು ತನ್ನ ಸ್ಥಾಪಿತ ಅವಧಿಯಲ್ಲಿ 11 ಘಟಕಗಳಿಗೆ 28 ಲಕ್ಷ ರೂ. ಸಾಲ ಮಂಜೂರು ಮಾಡಿದ್ದು, ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಶಾಖೆಗಳ ಮೂಲಕ 1,75,000 ಕ್ಕೂ ಹೆಚ್ಚು ಘಟಕಗಳಿಗೆ 18,000 ಕೋಟಿ ರೂ.ಗೂ ಹೆಚ್ಚು ಸಂಚಿತ ಸಾಲ ಮಂಜೂರು ಮಾಡಿದೆ. ಇದರಲ್ಲಿ ಶೇ. 50 ಕ್ಕಿಂತ ಹೆಚ್ಚು ಸಾಲಗಳನ್ನು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ನೀಡಿದ್ದು, ಸಂಸ್ಥೆಯು ರಾಜ್ಯದ ಕೈಗಾರಿಕಾ ಅಭಿವೃದ್ಧಿಯಲ್ಲಿಯೂ ಸಹ ಪ್ರಮುಖ ಪಾತ್ರ ವಹಿಸುತ್ತದೆ.
ಸಂಸ್ಥೆಯು 2019-20 ರ ಆರ್ಥಿಕ ವರ್ಷದಲ್ಲಿ 44.92 ಕೋಟಿ ರೂ. ಗಳ ನಿರ್ವಹಣಾ ಲಾಭವನ್ನೂ ಸಹ ಗಳಿಸಿರುತ್ತದೆ. ಕೆ.ಎಸ್.ಎಫ್.ಸಿ ಯು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿಯಲ್ಲಿ ಮುಂಚೂಣಿ ಯಲ್ಲಿದ್ದು, ಸಂಸ್ಥೆಯಿಂದ  ಹಣಕಾಸು ನೆರವು ಪಡೆದು ಯಶಸ್ವಿಯಾದ ಕೆಲವು ಉದ್ಯಮಿಗಳ ಯಶೋ ಗಾಥೆಯನ್ನು ಒಳಗೊಂಡ, ಕೇಂದ್ರ ಹಾಗೂ ರಾಜ್ಯ ಸಾರ್ವಜನಿಕ ಉದ್ಯಮಗಳ ಸಹಾಯದಿಂದ ಕಿರುಹೊತ್ತಿಗೆಯನ್ನು  ಕೆ.ಎಸ್. ಎಫ್.ಸಿ ಯ 60 ನೇ ವರ್ಷದ ವಜ್ರಮಹೋತ್ಸವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜನವರಿ 30 ರಂದು ವಿಧಾನ ಸೌಧದ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಡಿಸಿಎಂ ಅಶ್ವಥ ನಾರಾಯಣ, ಶಿಕ್ಷಣ ಸಚಿವ ಸುರೇಶ್ ಕುಮಾರ್, ಕೆ.ಎಸ್.ಎಫ್.ಸಿ ವ್ಯವಸ್ಥಾಪಕ ನಿರ್ದೇಶಕ ಏಕ್‌ರೂಪ್ ಕೌರ್, ಕೆ.ಎಸ್.ಎಫ್.ಸಿ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಸಿ. ಶಿವಪ್ರಕಾಶ್ ಮತ್ತು ಜಿ.ವಿ ಚಂದ್ರಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply