ನಿಧಾನಗತಿಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು ದ್ವಿತೀಯ!!

ಶ್ರೀಮಂತ ಇತಿಹಾಸ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಐಟಿ ಉದ್ಯಮಗಳ
ಕಾರಣದಿಂದ ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯುತ್ತಾರೆ. ಆದರೆ,
ದುರಾದೃಷ್ಟವಶಾತ್ ಇದೇ ಬೆಂಗಳೂರು ಟ್ರಾಫಿಕ್ ಜಾಮ್ ಕುಖ್ಯಾತಿಯನ್ನು ಹೊಂದಿದೆ. ಸಾವಿಲ್ಲದ ಮನೆಯಿಲ್ಲ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಅನುಭವಿಸದ ವ್ಯಕ್ತಿಯಿಲ್ಲ ಎಂಬ ಪರಿಸ್ಥಿತಿ ನಮ್ಮ ಬೆಂದಕಾಳೂರದ್ದು. ಬಹುತೇಕ ಎಲ್ಲರು ಟ್ರಾಫಿಕ್ ಕಿರಿಕಿರಿಯನ್ನು ಅನುಭವಿಸಿದ್ದಾರೆ.

ಇತ್ತೀಚೆಗೆ ಜಿಯೋಲೊಕೇಶನ್ ತಂತ್ರಜ್ಞಾನ ಸಂಸ್ಥೆ ಟಾಮ್ ಟಾಮ್, ನಡೆಸಿದ ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ನಿಧಾನಗತಿಯ ನಗರಗಳಲ್ಲಿ ಬೆಂಗಳೂರು ಕೂಡ ಒಂದೆನಿಸಿಕೊಂಡಿದೆ. ಟ್ರಾಫಿಕ್ ಸಮಯದಲ್ಲಿ ಕೇವಲ 10 ಕಿ.ಮೀ ಪ್ರಯಾಣಿಸಲು ಸರಾಸರಿ ಅರ್ಧ ಗಂಟೆಗೂ ಅಧಿಕ ಸಮಯ ತೆಗೆದುಕೊಳ್ಳುತ್ತದೆ ಎಂದು ಸಮೀಕ್ಷೆ ತಿಳಿಸಿದೆ. ಈ ಪಟ್ಟಿಯಲ್ಲಿ ಲಂಡನ್ ಮೊದಲ ಸ್ಥಾನದಲ್ಲಿದೆ. ಚಾಲನಾ ವೆಚ್ಚ, ಟ್ರಾಫಿಕ್‌ನಲ್ಲಿ ಕಳೆಯುವ ಸಮಯ ಮತ್ತು ಸುದೀರ್ಘ ಟ್ರಾಫಿಕ್ ಜಾಮ್‌ಗಳಿಂದ ಇಂಗಾಲದ ಹೊರಸೂಸುವಿಕೆ ಮುಂತಾದ ಅಂಶಗಳನ್ನು ಟಾಮ್‌ಟಾಮ್ ನಡೆಸಿದ ಅಧ್ಯಯನದಲ್ಲಿ
ಪರಿಗಣಿಸಲಾಗಿದೆ.

ನಿಧಾನಗತಿಯ ನಗರಗಳ ಪಟ್ಟಿಯಲ್ಲಿ ಯುನೈಟೆಡ್ ಕಿಂಗ್ಡಮ್ ಲಂಡನ್ ಮೊದಲ ಸ್ಥಾನದಲ್ಲಿದ್ದರೆ, ಭಾರತ ಹಾಗೂ ಕರ್ನಾಟಕದ ರಾಜಧಾನಿ ಬೆಂಗಳೂರು ಎರಡನೇ ಸ್ಥಾನ ಕಾಯ್ದುಕೊಂಡಿದೆ. ಮೂರನೇ ಸ್ಥಾನದಲ್ಲಿ ಐರ್ಲೆಂಡ್‌ನ ಡಬ್ಲಿನ್, ನಾಲ್ಕನೇ ಸ್ಥಾನದಲ್ಲಿ ಜಪಾನ್‌ನ ಸಾಪೊರೋ ಹಾಗೂ ಐದನೇ ಸ್ಥಾನದಲ್ಲಿ ಇಟಲಿಯ ಮಿಲಾನ್ ಇದೆ.
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಪ್ರತಿ ಮನುಷ್ಯ 2022ರಲ್ಲಿ 129 ಕ್ಕೂ ಹೆಚ್ಚು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಕಳೆದಿದ್ದಾನೆ. ಹೆಚ್ಚುವರಿಯಾಗಿ 2022ರಲ್ಲಿ ಅತಿ ಹೆಚ್ಚು ಇಂಗಾಲದ ಹೊರಸೂಸುವಿಕೆ ನಗರಗಳ ಸಾಲಿನಲ್ಲಿ ಬೆಂಗಳೂರು ಐದನೇ ಸ್ಥಾನದಲ್ಲಿದೆ. ವಿಪರೀತ ಟ್ರಾಫಿಕ್ ಸಮಯದಲ್ಲಿ ಪೆಟ್ರೋಲ್ ಕಾರುಗಳ ಮೂಲಕ 974 ಕೆಜಿ ಇಂಗಾಲವನ್ನು ಹೊರಸೂಸಿವೆ. ಆದಾಗ್ಯೂ, ಈ ಅಧ್ಯಯನವು ಡೀಸೆಲ್ ಕಾರುಗಳಿಂದ ಹೊರಸೂಸುವಿಕೆಯ ಡೇಟಾವನ್ನು ಒದಗಿಸಿಲ್ಲ.

ಡ್ಯಾಶ್ ಕಾರ್ ನ್ಯಾವಿಗೇಷನ್, ಸ್ಮಾರ್ಟ್ ಫೋನ್‌ಗಳು, ವೈಯಕ್ತಿಕ ನ್ಯಾವಿಗೇಷನ್ ಸಾಧನಗಳು ಮತ್ತು ಟೆಲಿಮ್ಯಾಟಿಕ್ಸ್ ಸಿಸ್ಟಮ್‌ಗಳು ಸೇರಿದಂತೆ 600 ಮಿಲಿಯನ್‌ಗಿಂತಲೂ ಹೆಚ್ಚು ಸಾಧನಗಳನ್ನು ವಿಶ್ಲೇಷಿಸುವ ಮೂಲಕ ಟಾಮ್‌ಟಾಮ್ ಡೇಟಾವನ್ನು ಸಂಗ್ರಹಿಸಿದೆ. 2019ಕ್ಕೆ ಹೋಲಿಸಿದರೆ ಈ ಬಾರಿ ಟ್ರಾಫಿಕ್ ಸಮಸ್ಯೆ ಕೊಂಚ ಇಳಿದಿದೆ. ಕಳೆದ ಬಾರಿ ಬೆಂಗಳೂರು ನಂ.1 ಸ್ಥಾನದಲ್ಲಿತ್ತು. ಇದೀಗ ಎರಡನೇ ಸ್ಥಾನಕ್ಕೆ ಕುಸಿದಿದೆ.

 
 
 
 
 
 
 
 
 
 
 

Leave a Reply