ಏರುತ್ತಿರುವ ನೆರೆ : ಉತ್ತರ ಕನ್ನಡ ಜಿಲ್ಲೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿರುಸಿನ ಪ್ರವಾಸ

ಸತತವಾಗಿ ಸುರಿಯುತ್ತಿರುವ ಮಳೆಯಿಂದ ವ್ಯಾಪಕವಾಗಿ ನೆರೆ ಏರುತ್ತಿರುವ ಹಿನ್ನೆಲೆಯಲ್ಲಿ ಕದ್ರಾ ಡ್ಯಾಂ ತುಂಬಿದ್ದು , ನೀರನ್ನು ಹೊರಬಿಡುವ ಹಿನ್ನೆಲೆಯಲ್ಲಿ ಮತ್ತು ವಿವಿಧೆಡೆ ಸುರಿಯುತ್ತಿರುವ ಭಾರೀ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಹ ಪರಿಸ್ಥಿತಿ ಉದ್ಭವಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಟ್ಕಳ, ಕುಮಟಾ ,ಹೊನ್ನಾವರ ಸೇರಿದಂತೆ ಜಿಲ್ಲೆಯಾದ್ಯಂತ ಬಿರುಸಿನ ಪ್ರವಾಸ ಕೈಗೊಂಡು ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು.

ಭಟ್ಕಳದ ಮಿನಿ ವಿಧಾನಸೌಧದಲ್ಲಿ ಹಾಗೂ ಕುಮಟಾ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಶಾಸಕ ಸುನಿಲ್ ನಾಯ್ಕ್ ಮತ್ತು ದಿನಕರ ಶೆಟ್ಟಿಯವರ ಜೊತೆಗೆ ಸುದೀರ್ಘವಾಗಿ ಚರ್ಚಿಸಿದ ಸಚಿವ ಕೋಟ ಪ್ರತೀ ಗ್ರಾಮ ಪಂಚಾಯತ್ ನೋಡಲ್ ಅಧಿಕಾರಿಗಳೊಂದಿಗೆ ಇನ್ನು ಮುಂದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಕೂಡಾ ಜಂಟಿಯಾಗಿ ನೋಡಲ್ ಅಧಿಕಾರಿಗಳಾಗಿ ಆದೇಶ ಹೊರಡಿಸಿ ಎಂದು ಸೂಚನೆ ನೀಡಿದರು.

ಎಂತಹ ಪರಿಸ್ಥಿತಿಯಲ್ಲೂ ಕೂಡಾ ಜನರು ಕಾಳಜಿ ಕೇಂದ್ರಕ್ಕೆ ಬಂದರೆ ಉತ್ತಮ ಗುಣಮಟ್ಟದ ಊಟ, ಉಪಾಹಾರ, ವಸತಿ ಸೇರಿದಂತೆ ಸಂತ್ರಸ್ತ ಕುಟುಂಬಕ್ಕೆ ಅಗತ್ಯವಾದ ಆಹಾರ ವಸ್ತುಗಳನ್ನು ಸರಬರಾಜು ಮಾಡಲು ನಿರ್ದೇಶಿಸಿದರು. ಪ್ರತೀ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಿದ್ದಿರುವ ಮನೆಗಳು, ನೀರು ನುಗ್ಗಿರುವ ವಸತಿ ವ್ಯವಸ್ಥೆಗಳು, ಶಾಲಾ – ಕಾಲೇಜು, ಅಂಗನವಾಡಿ ಮುಂತಾದವುಗಳಿಗೆ ನುಗ್ಗಿದ ನೀರಿನ ಪ್ರಮಾಣ ಇವುಗಳ ಬಗ್ಗೆ ಗ್ರಾಮ ಪಂಚಾಯತಿವಾರು ಸಮಗ್ರ ಮಾಹಿತಿ ಪಡೆದ ಸಚಿವ ಕೋಟ ಎಲ್ಲಾ ಅಧಿಕಾರಿಗಳು ಸ್ಥಳದಲ್ಲೇ ಇದ್ದು, ದಿನದ 24 ಗಂಟೆ ದೂರವಾಣಿ ಕರೆಗಳನ್ನು ಸ್ವೀಕರಿಸಿ ಸಾರ್ವಜನಿಕರ ನೆರವಿಗೆ ಧಾವಿಸಿ ತಮ್ಮ ತಮ್ಮ ಜವಾಬ್ದಾರಿ ನಿರ್ವಹಿಸುವಂತೆ ಸೂಚನೆ ನೀಡಿದರು.

ಸ್ವತಃ ಸಚಿವ ಕೋಟ ಶಾಸಕರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಉತ್ತರ ಕನ್ನಡ ಜಿಲ್ಲೆಯ ನೆರೆಪೀಡಿತ ಗ್ರಾಮಗಳಾದ ಕಡಗೇರಿ, ನಾತಾಗೇರಿ, ಚಿಕ್ಕನಕೋಡು, ಮುಟ್ಟ, ಹಾಡಗೇರಿ, ಗುಂಡಿಬೈಲ್, ಹಡಿನಬಾಳ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಜಿಲ್ಲೆಯಾದ್ಯಂತ ಏರುತ್ತಿರುವ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು ಸಾರ್ವಜನಿಕರಿಗೆ ಯಾವುದೇ ಆತಂಕ ಬೇಡ ಎಂದು ಸಚಿವ ಕೋಟ ಸ್ಪಷ್ಟಪಡಿಸಿದರು.

 
 
 
 
 
 
 
 
 
 
 

Leave a Reply