ದಕ್ಷಿಣಾಯಣ_ಪುಣ್ಯಕಾಲ (ಕಟಕ ಸಂಕ್ರಮಣ)

ಆರು ತಿಂಗಳಿಂದ ಉತ್ತರ ದಿಕ್ಕಿನತ್ತ ಸಾಗಿದ್ದ ಸೂರ್ಯ,‌ಇಂದಿನಿಂದ ತನ್ನ ಪಥವನ್ನು ಬದಲಿಸಿ ದಕ್ಷಿಣದತ್ತ ಸಾಗುತ್ತಾನೆ. ಹಾಗಾಗಿ ಈ ದಿನದಿಂದ ದಕ್ಷಿಣಾಯನ ಕಾಲ ಆರಂಭವಾಗುತ್ತದೆ.

ಸ್ವಾಭಾವಿಕವಾಗಿ ಸೂರ್ಯ ಪ್ರತಿ ತಿಂಗಳು ಒಂದೊಂದು ರಾಶಿಯಲ್ಲಿ ಸಂಚರಿಸುತ್ತಾನೆ. ಚಾಂದ್ರಮಾನದ ಪ್ರಕಾರ ಚೈತ್ರ, ವೈಶಾಖ ಮುಂತಾಗಿ ಪರಿಗಣಿಸಲಾಗುತ್ತದೆ. ಹಾಗೆಯೇ ಸೌರಮಾನದ ಪ್ರಕಾರ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನಸ್ಸು, ಮಕರ, ಕುಂಭ ಹಾಗೂ ಮೀನ ರಾಶಿಯಲ್ಲಿ ಸಂಚರಿಸುತ್ತಾನೆ.

ಆರು ತಿಂಗಳಿಗೊಮ್ಮೆ ಪಥ ಬದಲಿಸುವ ಸೂರ್ಯ ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದನ್ನು ಮಕರ ಸಂಕ್ರಮಣ ವೆಂತಲೂ. ಮಿಥುನರಾಶಿಯಿಂದ ಕಟಕ ರಾಶಿಗೆ ಪ್ರವೇಶಿಸುವುದನ್ನು ಕಟಕ ಸಂಕ್ರಮಣ ವೆಂತಲೂ ಕರೆಯುತ್ತಾರೆ. ಮಕರ ಸಂಕ್ರಮಣದ ನಂತರ ಸೂರ್ಯ ಉತ್ತರಕ್ಕೆ ಸಾಗುವುದನ್ನು ಉತ್ತರಾಯಣ ಎಂದು, ಕಟಕ ಸಂಕ್ರಮಣದ ನಂತರ ದಕ್ಷಿಣಾಯನ ಎಂದು ಕರೆಯುತ್ತೇವೆ.

ಸೂರ್ಯ ನಾಳೆ 10-58 ಗಂಟೆಗೆ ಕಟಕರಾಶಿ ಪ್ರವೇಶಿಸುತ್ತಾನೆ. ಸಂಕ್ರಮಣಕ್ಕೆ ಮೊದಲು 30 ಗಳಿಗೆ ಸಂಕ್ರಮಣ ಪುಣ್ಯಕಾಲ ಇರುವುದರಿಂದ ಸೂರ್ಯೋದಯದ ನಂತರ 10-58 ರವರೆಗೆ ದಕ್ಷಿಣಾಯಣ ಪುಣ್ಯಕಾಲವಿರಲಿದೆ.

ಧಾರ್ಮಿಕವಾಗಿ ಈ ದಿನದಿಂದ ದೇವತೆಗಳಿಗೆ ರಾತ್ರಿ ಕಾಲ ಆರಂಭ. ಮಾನವರಿಗೆ ಒಂದು ವರ್ಷವಾದರೆ, ಅದು ದೇವತೆಗಳಿಗೆ ಒಂದು ದಿನಕ್ಕೆ ಸಮ. ಉತ್ತರಾಯಣ ಹಗಲಾದರೆ, ದಕ್ಷಿಣಾಯಣ ರಾತ್ರಿ.

ಸಾಮಾನ್ಯವಾಗಿ ಜನವರಿ 14‌ ಅಥವಾ 15 ರಂದು ಉತ್ತರಾಯಣ ಸಂಭವಿಸುತ್ತದೆ. ಅಂದು ಸಂಕ್ರಾಂತಿ ಹಬ್ಬ ಎಂದು ಆಚರಿಸುತ್ತೇವೆ.

ಹಾಗೆಯೇ ದಕ್ಷಿಣಾಯನ ಪುಣ್ಯಕಾಲ ಸಾಮಾನ್ಯವಾಗಿ ಜುಲೈ 15, 16 ಅಥವಾ 17ರಂದು ಸಂಭವಿಸುತ್ತದೆ. ಈ ವರ್ಷ ಜುಲೈ 17 ರಂದು ಸಂಕ್ರಮಣ ನಡೆಯುತ್ತಿದೆ. ಸಾಮಾನ್ಯವಾಗಿ ಈ ದಕ್ಷಿಣಾಯನ ಪುಣ್ಯಕಾಲವನ್ನು ಸಂಪ್ರದಾಯವಾದಿಗಳು ಮಾತ್ರ ಆಚರಿಸುತ್ತಾರೆ, ಹೆಚ್ಚಾಗಿ ಸಾಮಾನ್ಯ ಜನರು ಆಚರಿಸುವುದಿಲ್ಲ.

ಈ ದಿನ ಪರ್ವಕಾಲದ ವೇಳೆ ಅಂದರೆ ಸೂರ್ಯೋದಯದ ನಂತರ ಬೆಳಗ್ಗೆ 10-58ರೊಳಗೆ ವಿಶೇಷವಾಗಿ ಸ್ನಾನ ಮಾಡಿ ಇಷ್ಟದೇವರ ಜಪ ತಪಾದಿಗಳನ್ನು ನಡೆಸಬಹುದು. ಅಧಿಕಾರವುಳ್ಳವರು( ತಂದೆಯಿಲ್ಲದವರು) ಪರ್ವಕಾಲದ ಅಂಗವಾಗಿ ತಿಲತರ್ಪಣ ನೀಡಬೇಕು. ಇದು ಸಾಧ್ಯವಿಲ್ಲದವರು ಅರ್ಹರಿಗೆ ದಾನ ನೀಡಬಹುದು. ಶ್ರೀಹರಿಯನ್ನು ಮನಸಾ ಸ್ಮರಿಸಿ ಗತಿಸಿದ ಪಿತೃಗಳಿಗೆ ಸದ್ಗತಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸಬಹುದು.

ಉತ್ತರಾಯಣದಲ್ಲಿ ವಿಶೇಷವಾಗಿ ಮದುವೆ, ಗೃಹ ನಿರ್ಮಾಣ, ಗೃಹಪ್ರವೇಶ, ಉಪನಯನ ಇತ್ಯಾದಿ ಶುಭಕಾರ್ಯಗಳನ್ನು ನಡೆಸುತ್ತೇವೆ. ಆದರೆ ದಕ್ಷಿಣಾಯನ ಪುಣ್ಯ ಸಂಚಯನಕಾಲ ಎನ್ನುತ್ತೇವೆ. ಈ ಕಾಲದಲ್ಲಿ ವ್ರತಗಳ ಆಚರಣೆ ಹೆಚ್ಚು. ಚಾತುರ್ಮಾಸ್ಯ ಆಚರಣೆಯ ಜತೆ ಹಬ್ಬ ಹರಿದಿನಗಳ ಸಡಗರವೂ ಜೋರು.

ಪುಣ್ಯ ಸಂಚಯದ ಜತೆ, ವೈಜ್ಞಾನಿಕ ಕಾರಣವೂ ಇದೆ. ದಕ್ಷಿಣಾಯನ ಬಹುತೇಕ ಮಳೆಗಾಲ. ಜೋರು ಮಳೆ, ಜಿಟಿಪಿಟಿ ಮಳೆ, ಸೋನೆಮಳೆ ಸದಾ ಒಂದಿಲ್ಲೊಂದು ಸಮಯದಲ್ಲಿ ಸುರಿಯುತ್ತದೆ. ಆಹ್ಲಾದಕರ ವಾತಾವರಣವಿದ್ದರೂ, ಚಳಿ ಹೆಚ್ಚು. ಮಳೆಯಲ್ಲಿ ನೆನೆಯುವ ಹಾಗೂ ಚಳಿಯಲ್ಲಿ ನಡಗುವ ವ್ಯಕ್ತಿಗೆ ಬಿಸಿ ಬಿಸಿ ಆಹಾರ ಬೇಕು. ಸೂರ್ಯನ ಶಾಖದ ತಾಪವೂ ಕಡಿಮೆಯಿರುವುದರಿಂದ, ಬಿಸಿಯಾದ, ಸತ್ವಭರಿತ ಆಹಾರ ಸೇವನೆ ಚಳಿಯ ತಾಡನದಿಂದ ನಮ್ಮನ್ನು ಸಂರಕ್ಷಿಸುತ್ತದೆ. ಹಾಗಾಗಿ ಹಿರಿಯರು ಹಲವಾರು ವ್ರತಗಳನ್ನು ಕಡ್ಡಾಯವಾಗಿ ಆಚರಿಸುವಂತೆ ನಿಯೋಜಿಸಿದ್ದಾರೆ.

ಬೇಸಿಗೆಯಲ್ಲಿ ನಮ್ಮ ಮೈ ಚರ್ಮವನ್ನು ಸಂರಕ್ಷಿಸಿಕೊಳ್ಳಲು ಮಕರಸಂಕ್ರಾಂತಿ ವೇಳೆ ಎಳ್ಳು ತಿನ್ನುತ್ತೇವೆ. ಹಾಗೆಯೇ ಮಳೆಗಾಲದಲ್ಲಿ ದೇಹದ ಕಾಂತಿ ಕಾಪಿಡಲು ಎಳ್ಳಿನ ಬಳಕೆಯಿದೆ. ನಾಗರ ಪಂಚಮಿ, ಗಣಪನ ಹಬ್ಬ ಹೀಗೆ ಎಳ್ಳಿನ ಬಳಕೆ ಉಂಟು. ಆಯಾ ವ್ರತಗಳಂದು ವಿಶೇಷ ಭಕ್ಯಗಳನ್ನು ಭುಂಜಿಸುವುದು ವಾಡಿಕೆ. ಒಂದೊಂದು ವ್ರತ (ಹಬ್ಬ) ಕ್ಕೆ ಒಂದೊಂದು ರೀತಿಯ ಅಡುಗೆ, ಇದು ನಮ್ಮ ಆರೋಗ್ಯ ಕಾಪಾಡುತ್ತದೆ.

ವೈಜ್ಞಾನಿಕ ಹಿನ್ನೆಲೆಯನ್ನು ಧಾರ್ಮಿಕ ನೆಲೆಗಟ್ಟಲ್ಲಿ ನಮಗೆ ಬಳುವಳಿಯಾಗಿ ನೀಡಿದ ಋಷಿ ಮುನಿಗಳಿಗೆ ನಮೋ ಎನ್ನೋಣ..

ಶ್ರೀಸೂರ್ಯಾಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀನೃಸಿಂಹ ದೇವರು ಎಲ್ಲರನ್ನೂ ಸಲಹಲಿ.

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.

 
 
 
 
 
 
 
 
 
 
 

Leave a Reply