ಬೆಂಗಳೂರು ಗಲಭೆ ಪೂರ್ವ ನಿಯೋಜಿತ- ಸಚಿವ ಬೊಮ್ಮಾಯಿ

ಉಡುಪಿ: ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಅದು ಹಿಂಸಾರೂಪಕ್ಕೆ ತಿರುಗಿ ಗಲಭೆ ಸೃಷ್ಟಿಸಿದ ಘಟನೆ ಸಂಪೂರ್ಣ ಪೂರ್ವ ಯೋಜಿತವಾಗಿದ್ದು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ಪ್ರಯತ್ನವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಬುಧವಾರ ಉಡುಪಿಯ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಕೆಲವೊಂದು ಸಮಾಜ ಘಾತುಕ ಶಕ್ತಿಗಳು ಪುಂಡಾಟದ ಮೂಲಕ ಸಮಾಜ ಹದಗೆಡಿಸಲು ಹಲವು ಪ್ರಯತ್ನ ಮಾಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕಿಡಿಗೇಡಿಗಳು ಮನಸೋಇಚ್ಛೆ ವರ್ತಿಸಿದಾಗ ಕೊನೆಯ ಅಸ್ತ್ರವಾಗಿ ಗೋಲಿಬಾರ್ ಮಾಡಲಾಗಿದೆ.

ಗೋಲಿಬಾರ್ ನಿಂದಾಗಿ ಮೂರು ಜನ ಅಸುನೀಗಿದ್ದು ಪೊಲೀಸರ ಮೇಲೂ ಕಲ್ಲು  ತೂರಾಟವಾಗಿ ಒರ್ವ ಪೊಲೀಸ್ ಅಧಿಕಾರಿ ತಲೆಗೆ ಗಂಭೀರ್ ಗಾಯಗಳಾಗಿವೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, ಪ್ರಕರಣ ಸಂಬಂಧ ಈಗಾಗಲೇ 110 ಜನ ಬಂಧನವಾಗಿದೆ ಎಂದರು.

ಪ್ರಸ್ತುತ ಎರಡು ಪ್ರದೇಶಗಳೂ ಸಂಪೂರ್ಣ ಪೊಲೀಸರ ಹತೋಟಿಯಲ್ಲಿದ್ದು, ಇನ್ನಷ್ಟು ಆರೋಪಿಗಳ ಬಂಧನ ಆಗೋದು ಬಾಕಿ ಇದೆ. ಘಟನೆ ನಡೆಸಿದ ಪುಂಡರ ಹಿಂದೆ ಯಾರಿದ್ದಾರೆ ಅನ್ನೋದನ್ನ ತನಿಖೆ ಮಾಡುತ್ತೇವೆ. ಘಟನೆಯ ಕುರಿತು ಸಿಎಂ ಜೊತೆ ಬೆಳಿಗ್ಗೆ ಈ ಬಗ್ಗೆ ಚರ್ಚೆ ಮಾಡಿದ್ದು, ಮಧ್ಯಾಹ್ನ ಸಿಎಂ ಮತ್ತು ಹಿರಿಯ ಅಧಿಕಾರಿ ಜೊತೆ ಮತ್ತೊಂದು ಸುತ್ತಿನ ಚರ್ಚೆ ನಡೆಸಲಿದ್ದೇವೆ.

ಘಟನೆಯ ಕುರಿತು ಸಿಸಿ ಕ್ಯಾಮರ ದಾಖಲೆ  ಸಂಗ್ರಹಿಸಲಾಗುವುದು. ಇದರಿಂದ ಪುಂಡಾಟಿಕೆಯಲ್ಲಿ ಮುಂಚೂಣಿಯಲ್ಲಿದ್ದವರ ಮಾಹಿತಿ ಸಂಗ್ರಹವಾಗುತ್ತಿದೆ. ಇದೊಂದು ಪೂರ್ವ ನಿಯೋಜಿತ ಷ್ಯಡ್ಯಂತ್ರ ವಾಗಿದ್ದು ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಡಿಸಲು ಪ್ರಯತ್ನಮಾಡಿದ್ದಾರೆ. ಈ ವರೆಗೆ ರಾಜ್ಯ ಶಾಂತವಾಗಿತ್ತು ಇದನ್ನು ಸಹಿಸದ ಸಮಾಜಘಾತಕ ಶಕ್ತಿಗಳು ಸಂದರ್ಭದ ಉಪಯೋಗ ಮಾಡಿದ್ದಾರೆ ಎಂದರು.

 
 
 
 
 
 
 
 
 
 
 

Leave a Reply