ಕಡಿದಾಳ್ ಪ್ರಕಾಶರು ಕಂಡoತೆ ತೇಜಸ್ವಿ~• ಡಾ.ಶ್ರೀಕಾಂತ್ ಸಿದ್ದಾಪುರ.

ಕಡಿದಾಳ್ ಪ್ರಕಾಶ್ ಅವರು ಕಡಿದಾಳ್ ಶಾಮಣ್ಣನ ಸಹೋದರರು. ಪೂರ್ಣಚಂದ್ರ ತೇಜಸ್ವಿಯವರ ದೀರ್ಘಕಾಲದ ಒಡನಾಡಿಗಳು. ಅವರ ನಡುವಿನ ಸಲುಗೆ ಹಾಗೂ ಆತ್ಮೀಯತೆಯನ್ನು ನಿರೂಪಿಸುವ ಕಡಿದಾಳರ ಕೃತಿ “ನಾ ಕಂಡ0ತೆ ತೇಜಸ್ವಿ ಹಾಗೂ ಶಾಮಣ್ಣ.” ಈ ಕೃತಿಯಲ್ಲಿ ತೇಜಸ್ವಿಯವರನ್ನು ಅವರು ಪರಿಚಯಿಸುವ ರೀತಿ ವಿಶಿಷ್ಟವಾದುದು. ಅವರ ಒಡನಾಟದಲ್ಲಿ ಕಂಡುಕೊAಡ ಅನೇಕ ಸಂಗತಿಗಳನ್ನು ಈ ಕೃತಿಯಲ್ಲಿ ನಿರೂಪಿಸಿದ್ದಾರೆ. ಇದರಲ್ಲಿ ತಮಾಷೆ ಇದೆ. ಸಲುಗೆಯ ಮಾತಿದೆ. ಕೆಲವು ಸಂದರ್ಭದಲ್ಲಿ ಆತ್ಮೀಯತೆಯಿಂದ ತೇಜಸ್ವಿಯವರಿಂದ ಬೈಸಿಕೊಂಡ ಪ್ರಸಂಗವೂ ಇದೆ. ಇತರರು ಕಾಣದ ಕುತೂಹಲಕಾರಿ ಸಂಗತಿಗಳು ತೇಜಸ್ವಿಯವರನ್ನು ನಮಗೆ ತೀರಾ ಆಪ್ತರನ್ನಾಗಿರಿಸುತ್ತವೆ.

ಒಳ್ಳೆ ನಿನ್ನ ಸುಮ್ನೆ ಆಯ್ತು: ಚಿಕ್ಕಮಗಳೂರಿನಲ್ಲೊಂದು ಮದುವೆ. ಮದುವೆ ಮುಗಿಸಿ ಮರಳುವ ಸಂದರ್ಭ. ನಡುವೆ ಮೂಡಿಗೆರೆಯಲ್ಲಿ ತೇಜಸ್ವಿಯವರನ್ನು ಭೇಟಿಯಾಗಿ ಹೋಗಬೇಕೆಂಬ ಬಯಕೆ ಕೆಲವರಿಗಾಯಿತು. ಅವರೆಲ್ಲರೂ ಈ ಕೆಲಸಕ್ಕೆ ಪ್ರಕಾಶ್ ಅವರನ್ನು ವಿನಂತಿಸಿಕೊAಡರು. ಅಂತೂ ಪ್ರಕಾಶರೊಂದಿಗೆ ಅಭಿಮಾನಿಗಳು ತೇಜಸ್ವಿಯವರ ಮನೆಗೆ ತಲುಪಿದರು. ತೇಜಸ್ವಿಯವರು ಮಹಡಿಯಲ್ಲಿ ಗಣಕ ಯಂತ್ರದ ಮುಂದೆ ತಲ್ಲೀನರಾಗಿದ್ದರು.

ವಿಷಯ ತಿಳಿದು ಮಹಡಿಯಿಂದ ಇಳಿದು ಬಂದರು. ಬಂದವರೇ ಸ್ನೇಹಿತ ಪ್ರಕಾಶರನ್ನು ಉದ್ದೇಶಿಸಿ ಏನಾಗಬೇಕು? ಕೇಳಿದರು. ಸುಮ್ಮನೆ ಬಂದೆವು ಎಂದು ಪ್ರಕಾಶ್ ಉತ್ತರಿಸಿದರು. ನೀವು ಮದುವೆ, ಮುಂಜಿಗೆ ಸುತ್ತಾಡಿ ನಮ್ಮ ಮನೆಗೆ ಬಂದರೆ ನಮ್ಮ ಮುಂಡಾ ಮುಚ್ಚಿ ಹೋಗುತ್ತದೆ. ನೀವು ಮದುವೆಗೆ ಓಡಾಡಿ ನಿಮ್ಮ ಸಮಯವನ್ನು ಹಾಳು ಮಾಡಿಕೊಳ್ಳುವುದಲ್ಲದೆ ನಮ್ಮ ಸಮಯವನ್ನೂ ಹಾಳು ಮಾಡುತ್ತೀರಿ. ಮತ್ತೆ ಏನಾದರೂ ಕೆಲಸ ನನ್ನಿಂದಾಗಬೇಕೇ? ಕೇಳಿದರು. ಹಾಗೇನಿಲ್ಲ, ಸುಮ್ಮನೆ ಬಂದೆವು ಎಂದರು. ಹಾಗಾದರೆ ರಾಜೇಶ್ವರಿ ಕಾಫಿ ಮಾಡಿಕೊಡುತ್ತಾಳೆ.

ಸುಮ್ಮನೆ ಕುಡಿದುಕೊಂಡು ಹೋಗಿ. ನನಗೆ ಬಹಳ ಕೆಲಸವಿದೆ ಎನ್ನುತ್ತಾ ಮಹಡಿಯನ್ನೇರಿದರು. ಇದಾದ ಕೆಲವು ದಿನಗಳ ಬಳಿಕ ತೇಜಸ್ವಿಯವರಿಗೆ ಏನನ್ನಿಸಿತೋ ಏನೋ? ಪ್ರಕಾಶರಿಗೆ ಫೋನ್ ಮಾಡಿ ಮೊನ್ನೆ ಬಂದಾಗ ಏನಾದರೂ ಕೆಲಸವಿತ್ತೇ? ಎಂದು ಮತ್ತೆ ಕೇಳಿದರು. ಏನೂ ಇಲ್ಲ, ಸುಮ್ಮನೆ ಬಂದಿದ್ದೇವಷ್ಟೆ ಎಂದು ಹಿಂದಿನ ದಾಟಿಯಲ್ಲೇ ಪ್ರಕಾಶರು ಉತ್ತರಿಸಿದರು. ಕೂಡಲೇ ತೇಜಸ್ವಿಯವರು ಒಳ್ಳೆ ನಿನ್ನ ಸುಮ್ನೆ ಆಯ್ತು ಎನ್ನುತ್ತಾ ಫೋನ್ ಕೆಳಗೆ ಇಟ್ಟರು.

ಪ್ರಶಸ್ತಿಗಿಂತ ಪರಿಸರ ಪ್ರೀತಿ: ತೇಜಸ್ವಿಯವರ ಇನ್ನೊಂದು ವಿಶಿಷ್ಟ ಗುಣ ಪ್ರಶಸ್ತಿ, ಸಾಹಿತ್ಯ ಸಮ್ಮೇಳನಗಳಿಂದ ಸಾಕಷ್ಟು ಅಂತರ ಕಾಯ್ದು ಕೊಳ್ಳುತ್ತಿದ್ದರು. ಕೆಲವೊಮ್ಮೆ ಪ್ರಶಸ್ತಿ ಸ್ವೀಕರಿಸಲೂ ಹೋಗುತ್ತಿರಲಿಲ್ಲ. ಒಮ್ಮೆ ಅವರಿಗೆ ಪಂಪಪ್ರಶಸ್ತಿ ಒಲಿದು ಬಂತು. ಬನವಾಸಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ. ತೇಜಸ್ವಿಯವರು ಪ್ರಶಸ್ತಿ ಸ್ವೀಕರಿಸಲು ಬನವಾಸಿಗೆ ಬರುತ್ತಾರಾ? ಎಂದು ತಿಳಿಯಲು ಪ್ರಕಾಶ್ ಅವರಿಗೆ ಸಂಘಟಕರು ಫೋನ್ ಮಾಡಿದ್ದರು.

ಈ ಬಗ್ಗೆ ತೇಜಸ್ವಿಯವರನ್ನು ಕೇಳಿದಾಗ ಅವರು ಇಲ್ಲ ಎಂದರು. ಅವರನ್ನು ಮತ್ತೆ ಮತ್ತೆ ಒತ್ತಾಯಿಸಿ ಹೋಗಿ ಎಂದು ಪ್ರಕಾಶ್ ಸಲಹೆ ನೀಡಿದಾಗ ತೇಜಸ್ವಿಯವರಿಂದ ಬೈಸಿಕೊಂಡಿದ್ದರು. ತಮಾಷೆಗಾಗಿ ಒಮ್ಮೆ ಹೇಳಿದರಂತೆ. ನಿಮಗೆ ಮೈಸೂರು ಪೇಟ ಹಾಕಿ ಶಾಲು ಹೊದಿಸುವುದನ್ನು ನಾವು ನೋಡಬಹುದು. ತೇಜಸ್ವಿ ನಗುತ್ತಾ ಲೋ ಮೊದಲು ನಿನಗೆ ಒದ್ದರೆ ಎಲ್ಲಾ ಸರಿ ಹೋಗುತ್ತೆ ಎಂದಿದ್ದರು. ಶಿವಮೊಗ್ಗದಲ್ಲಿ ಸಾಹಿತ್ಯ ಸಮ್ಮೇಳನ. ಅಧ್ಯಕ್ಷರನ್ನಾಗಿ ತೇಜಸ್ವಿಯವರನ್ನು ಆಯ್ಕೆ ಮಾಡುವ ಅಪೇಕ್ಷೆ.

ರಾಜ್ಯಸಮಿತಿಯಲ್ಲಿ ಇವರ ಹೆಸರನ್ನು ಪ್ರಸ್ತಾಪಿಸುವ ನಿರ್ಧಾರವೂ ಆಯಿತು. ಆದರೆ ತೇಜಸ್ವಿಯವರು ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಾರೇ? ಎಂಬ ಆತಂಕ. ಈ ವಿಷಯಕ್ಕೆ ಸಂಬoಧಿಸಿದoತೆ ತೇಜಸ್ವಿಯವರ ಅಭಿಪ್ರಾಯ ಕೇಳುವ ಹೊಣೆಯನ್ನು ಗೆಳೆಯ ಪ್ರಕಾಶ್‌ರಿಗೆ ವಹಿಸಲಾಯಿತು. ಅಂತೂ ಒಮ್ಮೆ ಯಾವುದೋ ವಿಚಾರವನ್ನು ಮಾತನಾಡುತ್ತಾ ತೇಜಸ್ವಿಯವರಲ್ಲಿ ಪ್ರಕಾಶರು ಈ ವಿಷಯ ಪ್ರಸ್ತಾಪಿಸಿದರು. ಈ ಬಗ್ಗೆ ಸಾಕಷ್ಟು ಮಾತುಕತೆಗಳಾದ ಮೇಲೆ ತೇಜಸ್ವಿ ಹೇಳಿದರು. ನಿನಗೇನು ತಲೆ ಕೆಟ್ಟಿದೆಯೇನು? ಆ ಮೂರು ದಿನ ನಾನು ಕೂರುವುದು, ಮೆರವಣಿಗೆ ಇದನ್ನೆಲ್ಲ ಎಣಿಸಿದರೆ ಜ್ವರ ಬರುತ್ತದೆ. ಅದರ ಸುದ್ದಿ ಬೇಡ.

ರವೆ ಇಡ್ಲಿ: ತೇಜಸ್ವಿಯವರು ಕೌಟುಂಬಿಕ ಪರಿಸರದಲ್ಲೂ ತಮಾಷೆಯಾಗಿ ಇರುತ್ತಿದ್ದರು. ಪ್ರಕಾಶ್ ಒಮ್ಮೆ ತೇಜಸ್ವಿಯವರ ಮನೆಗೆ ಬಂದಾಗ ಮಧ್ಯಾಹ್ನವಾಗಿತ್ತು. ತಿಂಡಿ ತಿನ್ನಲು ಕರೆದಾಗ ತಿಂಡಿ ಬೇಡ ಕಾಫಿ ಕೊಡಿ ಸಾಕು ಎಂದರು ಪ್ರಕಾಶ್. ತೇಜಸ್ವಿಯವರ ಮಡದಿ ಒಂದು ಹೊಸ ತಿಂಡಿ ಮಾಡಿದ್ದೇನೆ ಬನ್ನಿ ಎಂದರು. ತೇಜಸ್ವಿಯವರು ಅದು ಯಾವುದು ಮಾರಾಯ್ತಿ? ಎಂದು ಕೇಳಿದರು. ಬೆಳಗ್ಗೆ ರವೆಯ ಉಪ್ಪಿಟ್ಟು. ಅದು ಸ್ವಲ್ಪ ಉಳಿದಿತ್ತು.

ಅದನ್ನೇ ಬಳಸಿ ರವೆ ಇಡ್ಲಿ ಏಕೆ ಮಾಡಬಾರದು ಅಂತ ಯೋಚಿಸಿ ಬೇರೆ ಏನೋ ಪದಾರ್ಥ ಸೇರಿಸಿ ಇಡ್ಲಿ ಮಾಡಿದೆ ಎಂದರು ರಾಜೇಶ್ವರಿ. ತೇಜಸ್ವಿಯವರು ಪ್ರಕಾಶ್ ಅವರೊಂದಿಗೆ ನಗುತ್ತಾ ಪೂರ್ತಿ ತಿಂದು ಖಾಲಿ ಮಾಡು. ಇಲ್ಲದಿದ್ದರೆ ಬೆಳಗ್ಗಿನ ತಿಂಡಿಗೆ ಇನ್ನೊಂದು ರೂಪ ಕೊಟ್ಟು ಎರಡನೆಯ ಪ್ರಯೋಗ ಮಾಡಿ ಕೊಡುತ್ತಾಳೆ.

ಅನಾರೋಗ್ಯದಲ್ಲಿಯೂ ತಮಾಷೆ: ಒಮ್ಮೆ ತೇಜಸ್ವಿಯವರು ಅನಾರೋಗ್ಯ ನಿಮಿತ್ತ ಮೈಸೂರಿನ ಗೋಪಾಲ ಗೌಡ ಆಸ್ಪತ್ರೆಗೆ ದಾಖಲಾದರು. ವಿಷಯ ತಿಳಿದ ಪ್ರಕಾಶರು ತಮ್ಮ ಕುಟುಂಬ ಸಹಿತ ಅವರನ್ನು ಕಾಣಲು ಹೋದರು. ತೇಜಸ್ವಿ ಆಸ್ಪತ್ರೆಯ ಮಂಚದ ಮೇಲೆ ತಿರುಗಿ ಮಲಗಿದ್ದರು. ಒಂದು ಕೈಯನ್ನು ತಲೆಗೆ ಕೊಟ್ಟು, ಇನ್ನೊಂದು ಕೈಯಿಂದ ಖಾರದ ಬೂಂದಿಯನ್ನು ತಿನ್ನುತ್ತಿದ್ದರು. ಪ್ರಕಾಶರು ಪೇಷೆಂಟ್ ನೋಡೋಕೆ ಬಂದರೆ ಖಾರದ ಬೂಂದಿ ತಿನ್ನುತ್ತಾ ಕೂತಿದ್ದೀರಲ್ಲಾ? ಎಂದಾಗ ತೇಜಸ್ವಿಯವರು ರೋಗ ಬಾಯಿಗೆ ಅಲ್ಲ ಎಂದು ತಮಾಷೆಯಾಗಿ ನುಡಿದರು.

ತೇಜಸ್ವಿಯವರು ನಮ್ಮೊಂದಿಗಿಲ್ಲ. ಆದರೆ ಬದುಕು, ಬರೆಹ, ಚಿಂತನೆಗಳು ನಮ್ಮ ಮುಂದಿವೆ. ಹಳ್ಳಿ, ಕಾಡು, ಕೃಷಿ, ಪ್ರಕೃತಿ, ಪ್ರಾಣಿ-ಪಕ್ಷಿ, ಪರಿಸರಗಳ ಉಳಿವು ನಮ್ಮ ಮುಂದೆ ಸವಾಲಾಗುತ್ತಿರುವ ಇಂದಿನ ದಿನಗಳಲ್ಲಿ ತೇಜಸ್ವಿಯವರು ಮತ್ತೆ ಮತ್ತೆ ನೆನಪಾಗುತ್ತಾರೆ.
• ಡಾ.ಶ್ರೀಕಾಂತ್ ಸಿದ್ದಾಪುರ.
(ಸೆಪ್ಟೆಂಬರ್ ಎಂಟು ತೇಜಸ್ವಿಯವರ ಜನ್ಮ ದಿನ)

 
 
 
 
 
 
 
 
 
 
 

Leave a Reply