ಶಿರಿಮಠ: ಒಂದನೇ ಬುಕ್ಕರಾಯನ ಶಾಸನ ಪತ್ತೆ

ಬ್ರಹ್ಮಾವರ ತಾಲೂಕಿನ ಯಡಾಡಿ-ಮತ್ಯಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹೈಗುಳಿ-ಯಕ್ಷಿ ದೈವಸ್ಥಾನವಿರುವ ಶಿರಿಮಠದ ಗದ್ದೆಯಲ್ಲಿನ ಶಾಸನವನ್ನು ಶ್ರೀ ದಿನೇಶ್ ಪುತ್ರನ್ ವಿಠಲವಾಡಿ ಕುಂದಾಪುರ ಇವರ ಮಾಹಿತಿಯ ಮೇರೆಗೆ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ ಉಡುಪಿ (ಎ.ಒ.ಎಂ. ನ ಅಂಗಸಂಸ್ಥೆ) ಇದರ ಅಧ್ಯಯನ ನಿರ್ದೇಶಕ ಎಸ್.ಎ. ಕೃಷ್ಣಯ್ಯ ಅವರ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿರುತ್ತಾರೆ.

ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು 5 ಅಡಿ ಎತ್ತರ ಮತ್ತು 2 ಅಡಿ ಅಗಲವನ್ನು ಹೊಂದಿದೆ. ಶಾಸನದ ಮೇಲ್ಭಾಗದಲ್ಲಿ ಶಿವಲಿಂಗವನ್ನು ಪೂಜಿಸುತ್ತಿರುವ ವ್ಯಕ್ತಿ ಮತ್ತು ಇದರ ಇಕ್ಕೆಲಗಳಲ್ಲಿ ದೀಪ, ನಂದಿ, ರಾಜಕತ್ತಿ ಹಾಗೂ ಸೂರ್ಯ-ಚಂದ್ರರ ಕೆತ್ತನೆಯಿದೆ.

ಶಾಸನದ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು, ಶಾಸನವು ಶಕವರುಷ 1278 ನೆಯ ದುರ್ಮುಖಿ ಸಂವತ್ಸರದ ಭಾದ್ರಪದ ಶುದ್ಧ 5 ಗುರುವಾರ ಅಂದರೆ ಕ್ರಿಸ್ತಶಕ 1356ರ ಕಾಲಮಾನಕ್ಕೆ ಸೇರಿದ್ದಾಗಿದೆ. ಶಾಸನದಲ್ಲಿ ವಿಜಯನಗರ ದೊರೆ ವೀರ ಬುಕ್ಕಣ್ಣ ಒಡೆಯರ ಉಲ್ಲೇಖವಿದ್ದು ಈ ಸಂದರ್ಭದಲ್ಲಿ ಬಾರಕೂರು ರಾಜ್ಯವನ್ನು ಮಹಾಪ್ರಧಾನ ಮಲೆಯ ದಂಡನಾಯಕ ಆಳ್ವಿಕೆ ಮಾಡುತ್ತಿದ್ದ ಎಂದು ತಿಳಿಯುತ್ತದೆ. ಮುಖ್ಯವಾಗಿ ಈ ಶಾಸನವು ಬ್ರಾಹ್ಮಣರಿಗೆ ನೀಡಿದ ಭೂದಾನದ ಬಗ್ಗೆ ಹಾಗೆಯೇ ದಾನದ ಭೂಮಿಯ ಚತುಸ್ಸೀಮೆಗಳ ವಿವರವನ್ನು ದಾಖಲಿಸುತ್ತದೆ. ಶಾಸನದಲ್ಲಿ ಕೋಟೀಸ್ವರ ದೇವರ ಮತ್ತು ಹರ ಮಹಾದೀಸ್ವರ ದೇವರ ಉಲ್ಲೇಖಗಳು ಕಂಡುಬರುತ್ತದೆ.

ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಕಿಶನ್ ಕುಮಾರ್ ಮೂಡುಬೆಳ್ಳೆ, ಹೇಮಾ ಶೆಟ್ಟಿ ಸಹಕಾರ ನೀಡಿರುತ್ತಾರೆ.

 
 
 
 
 
 
 
 
 
 
 

Leave a Reply