ಕಾಶ್ಮೀರಕ್ಕೆ 20,000 ಕೋಟಿ ರೂ. ಅಭಿವೃದ್ಧಿ ಯೋಜನೆಗೆ ಮೋದಿ ಚಾಲನೆ

ಶ್ರೀನಗರ: ಜಮ್ಮು-ಕಾಶ್ಮೀರ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವೆಂದು 2019ರಲ್ಲಿ ಘೋಷಿಸಿದ ಬಳಿಕ ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ತೆರಳಿದ್ದು, ಭಾನುವಾರ ಔಪಚಾರಿಕವಾಗಿ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಅವರು ಬನಿಹಾಲ್-ಖಾಝಿಗುಂಡ್ ಸುರಂಗ ಮತ್ತು ಎರಡು ಜಲವಿದ್ಯುತ್ ಯೋಜನೆಗಳು ಸೇರಿ 20,000 ಕೋಟಿ ರೂಪಾಯಿ ಯೋಜನೆಗಳಿಗೆ ಚಾಲನೆ ನೀಡಿದರು.

ಜಮ್ಮುವಿನ ಪಲ್ಲಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಪಂಚಾಯತ್ ರಾಜ್ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ‘ಈ ಪ್ರದೇಶ ನನಗೆ ಹೊಸದಲ್ಲ. ಅದೇ ರೀತಿ ನಿಮಗೆ ನಾನು ಹೊಸಬನೂ ಅಲ್ಲ. ಕಳೆದ ಎರಡು ಅಥವಾ ಮೂರು ವರ್ಷಗಳ ಅವಧಿಯಲ್ಲಿ ಜಮ್ಮು- ಕಾಶ್ಮೀರ ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ.

ಇದಕ್ಕೂ ಹಿಂದಿನ ಸರ್ಕಾರಗಳು ಕೇಂದ್ರ ಸರ್ಕಾರದ ಯೋಜನೆಗಳನ್ನು ಇಲ್ಲಿ ಜಾರಿಗೊಳಿಸುತ್ತಿರಲಿಲ್ಲ. ನಾವು ಅದನ್ನು ಸಾಧಿಸಿದ್ದೇವೆ. ಕಳೆದ ಆರು ದಶಕದಲ್ಲಿ ಈ ಪ್ರದೇಶದಲ್ಲಿ ಕೇವಲ 17,000 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ 38,000 ಕೋಟಿ ರೂಪಾಯಿಯನ್ನು ಮೂಲಸೌಕರ್ಯ ಒದಗಿಸಲು ಹೂಡಿಕೆ ಮಾಡಲಾಗಿದೆ’ ಎಂದರು.

ಜಮ್ಮು – ಕಾಶ್ಮೀರದಲ್ಲಿ ಕ್ಷೇತ್ರ ಮರುವಿಂಗಡನೆ ಕಾರ್ಯ ಪ್ರಗತಿಯಲ್ಲಿದೆ.

ಅದು ಮುಗಿಯುತ್ತಿದ್ದಂತೆ ಎರಡೂ ಹೊಸ ಕೇಂದ್ರಾಡಳಿತ ಪ್ರದೇಶಗಳಲ್ಲಿ ಚೊಚ್ಚಲ ಚುನಾವಣೆಗಳು ನಡೆಯಲಿವೆ. ಪ್ರಧಾನಿ ಮೋದಿ ಅವರ ಮೊದಲ ಭೇಟಿ ಕೂಡ ಚುನಾವಣೆಯ ಸುಳಿವನ್ನು ನೀಡಿದೆ ಎಂದು ರಾಜಕೀಯ ಪರಿಣತರು ಹೇಳಿದ್ದಾರೆ.

ಸುರಂಗದ ವಿಶೇಷ: ಬನಿಹಾಲ್-ಖಾಜಿಗುಂಡ್ ಸುರಂಗವನ್ನು 3,100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಿುಸಲಾಗುತ್ತಿದೆ. ಇದು 8.45 ಕಿ.ಮೀ. ಉದ್ದವಿದೆ. ಇದು ಎರಡು ಪ್ರದೇಶಗಳ ಅಂತರವನ್ನು 16 ಕಿ.ಮೀ. ತಗ್ಗಿಸುತ್ತದೆ ಮತ್ತು ಪ್ರಯಾಣದ ಅವಧಿಯನ್ನು ಒಂದೂವರೆ ಗಂಟೆ ಕಡಿಮೆ ಮಾಡುತ್ತದೆ.

ಕಾರ್ಬನ್ ನ್ಯೂಟ್ರಲ್ ಪಂಚಾಯಿತಿ: ಜಮ್ಮು- ಕಾಶ್ಮೀರದ ಗಡಿ ಭಾಗದ ಜಿಲ್ಲೆ ಸಾಂಬಾದಲ್ಲಿರುವ ಪಲ್ಲಿ ಗ್ರಾಮವು ದೇಶದ ಮೊದಲ ಕಾರ್ಬನ್ ನ್ಯೂಟ್ರಲ್ ಪಂಚಾಯಿತಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಘೋಷಿಸಿದ್ದಾರೆ.

ಇದು ದೇಶಕ್ಕೆ ಕಾರ್ಬನ್ ನ್ಯೂಟ್ರಲ್ ಆಗುವುದಕ್ಕೆ ದಾರಿ ತೋರಿದೆ ಎಂದು ಅವರು ಇದೇ ವೇಳೆ ಹೇಳಿದರು. ಇಲ್ಲಿ ದಾಖಲೆಯ ಕೇವಲ ಮೂರೇ ವಾರದ ಅವಧಿಯಲ್ಲಿ ಸ್ಥಾಪಿಸಲಾದ 500 ಕೆವಿ ಸೌರ ವಿದ್ಯುತ್ ಘಟಕವನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದರು. 1,500 ಸೌರ ಫಲಕಗಳನ್ನು 6,408 ಚದರ ಮೀಟರ್​ನಲ್ಲಿ ಅಳವಡಿಸಲಾಗಿದೆ. ಇಲ್ಲಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನು ಮಾದರಿ ಗ್ರಾಮ ಪಂಚಾಯಿತಿಯ 340 ಮನೆಗಳಿಗೆ ಬಳಸಲಾಗುತ್ತದೆ. ಇದಕ್ಕೆ 2.75 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

ಅಮೃತ ಸರೋವರ್: ಜಮ್ಮು-ಕಾಶ್ಮೀರದ ಪ್ರತಿ ಜಿಲ್ಲೆಯಲ್ಲಿ 75 ಜಲಾಶಯಗಳನ್ನು ಅಭಿವೃದ್ಧಿಪಡಿಸುವ ಮತ್ತು ಮರುಜೀವ ಕೊಡುವ ಅಮೃತ ಸರೋವರ್ ಉಪಕ್ರಮಕ್ಕೆ ಪ್ರಧಾನಿ ಮೋದಿ ಇದೇ ವೇಳೆ ಚಾಲನೆ ನೀಡಿದರು.

ಭಾಷಣ ಪ್ರಮುಖಾಂಶ
ಭಾರತದ ಅಭಿವೃದ್ಧಿಯು ‘ವೋಕಲ್ ಫಾರ್ ಲೋಕಲ್’ ಮಂತ್ರದಲ್ಲಿ ಅಡಗಿದೆ. ಭಾರತದ ಪ್ರಜಾಪ್ರಭುತ್ವವನ್ನು ಮುನ್ನಡೆಸುವಲ್ಲಿ ಲೋಕಲ್ ಗವರ್ನೆನ್ಸ್ ಕೂಡ ಒಂದು ಚಾಲನಾ ಶಕ್ತಿ. ಮುಂದಿನ 25 ವರ್ಷಗಳ ಅವಧಿಯಲ್ಲಿ ಹೊಸ ಜಮ್ಮು-ಕಾಶ್ಮೀರ ನಿರ್ವಣವಾಗಲಿದ್ದು, ಹೊಸ ಅಭಿವೃದ್ಧಿಯ ಇತಿಹಾಸವನ್ನು ಬರೆಯಲಿದೆ. ನಿಮ್ಮ ಕೆಲಸವು ಸ್ಥಳೀಯವಾಗಿ ಇರಬಹುದು. ಆದರೆ, ಅದರ ಒಟ್ಟು ಪರಿಣಾಮ ಜಾಗತಿಕವಾಗಿ ಇರಲಿದೆ.
ಕೇವಲ ಎರಡು-ಮೂರು ವರ್ಷದ ಅವಧಿಯಲ್ಲಿ ಈ ರಾಜ್ಯದಲ್ಲಿ ಅಭಿವೃದ್ಧಿಗೆ ಹೊಸ ಆಯಾಮ ಸಿಕ್ಕಿದೆ. ಅದಕ್ಕೂ ಇಲ್ಲಿ ಕೇಂದ್ರ ಸರ್ಕಾರದ 250 ಕಾನೂನುಗಳು ಅನ್ವಯವಾಗುತ್ತಿರಲಿಲ್ಲ. ಈಗ ಎಲ್ಲವೂ ಅನ್ವಯವಾಗುತ್ತಿದ್ದು, ಪ್ರತಿಯೊಬ್ಬ ಪ್ರಜೆಯನ್ನು ಸಬಲಗೊಳಿಸುವ ಕೆಲಸ ಆಗುತ್ತಿದೆ.
ಭಾಷೆ ಅಥವಾ ಮೂಲಸೌಕರ್ಯ ಅಥವಾ ಸೌಲಭ್ಯಗಳ ಮೂಲಕ ಸಂಪರ್ಕವನ್ನು ಸಾಧಿಸುವುದರ ಕಡೆಗೆ ನಮ್ಮ ಗಮನ. ಕನ್ಯಾಕುಮಾರಿ ದೇವಿಯು ವೈಷ್ಣೋದೇವಿಯನ್ನು ಒಂದೇ ರಸ್ತೆಯಲ್ಲಿ ಸಂಧಿಸುವ ದಿನ ಬಹಳ ದೂರವಿಲ್ಲ.

 
 
 
 
 
 
 
 
 
 
 

Leave a Reply