ಶಂಖನಾದದಿಂದ ಪ್ರಾಣಾಯಾಮದ ಲಾಭ..~ಡಾ.ರಾಘವೇಂದ್ರ ಪೈ.

ನಮ್ಮ ಸನಾತನ ಧರ್ಮದ ಹಲವು ಆಚರಣೆಗಳು ವೈಜ್ಞಾನಿಕ ಮಹತ್ವ ಹಾಗೂ ತಳಹದಿ ಹೊಂದಿವೆ.  ಅವುಗಳಲ್ಲಿ ಆಧ್ಯಾತ್ಮಿಕ ಸ್ಥಾನಪಡೆದ ಶಂಖನಾದವೂ ಒಂದು. ಬೇರೆ ಬೇರೆ ಹೆಸರಿನಲ್ಲಿ ಸಾಕಷ್ಟು ದುಬಾರಿ ವಸ್ತುಗಳು ಮನೆಯಲ್ಲಿ ಸ್ಥಾನ ಪಡೆದಿವೆ. ಆದರೆ, ಎಷ್ಟು ಮನೆಗಳಲ್ಲಿ ಶಂಖವನ್ನು ತಂದಿರಿಸಿದ್ದಾರೆ?

ಹದಿನಾಲ್ಕು ರತ್ನಗಳಲ್ಲಿ ಶಂಖವೂ ಒಂದು. ಇದು ಮನೆಯಲ್ಲಿರುವುದರಿಂದ ವಾಸ್ತು ದೋಷ ನಿವಾರಣೆ, ಮನೆಯ ಋಣಾತ್ಮಕ ಶಕ್ತಿ ಉಪಶಮನದೊಂದಿಗೆ ಧನಾತ್ಮಕ ಕಂಪನ್ನು ಉಂಟುಮಾಡುತ್ತದೆ. ವಿಷ್ಣು, ಲಕ್ಷ್ಮೀ ಕೈಯಲ್ಲೂ ಶಂಖ ಭೂಷಿತವಾಗಿದೆ.

ವಿಷ್ಣುವಿನ ಎಲ್ಲ ಅವತಾರದಲ್ಲೂ ಶಂಖಧಾರಣೆಯಾಗಿದೆ. ಸಮುದ್ರ ಮಂಥನದ ಸಮಯದಲ್ಲಿ ಉದ್ಭವಗೊಂಡ ದಿವ್ಯವಸ್ತುಗಳಲ್ಲಿ ಲಕ್ಷ್ಮಿಯ ನಂತರ ಪ್ರಕಟಗೊಂಡ ಸಾಲಾ ಹೆಸರಿನ ಶಂಖವು ಲಕ್ಷ್ಮೀ ಸಹೋದರ ಎನಿಸಿಕೊಂಡಿದೆ. ಸಾಲಾ ಎನ್ನುವುದು ಅರವತ್ತು ನಮೂನೆಯ ವಿವಿಧ ಬಣ್ಣದ ಮೃದ್ವಂಗಿ ಜಾತಿಯ ಸಮುದ್ರ ಜೀವಿಯಿಂದ ನಿರ್ಮಿತವಾಗುವ ಶಂಖ. ಇಂಡೋಪೆಸಿಫಿಕ್ ಸಮುದ್ರದಲ್ಲಿ ಹೆಚ್ಚಾಗಿ ಸಿಗುತ್ತದೆ.

ಶಂಖ ಎರಡು ಪ್ರಕಾರವಾಗಿ ಬಳಕೆಯಲ್ಲಿದೆ. ಊದುವ ಹಾಗೂ ಪೂಜಾದಿ ಅಭಿಷೇಕಕ್ಕೆ ಬಳಸುವ ಶಂಖ ಎಂದು. ಎಡಮುರಿ ಊದಲು ಹಾಗೂ ಬಲಮುರಿ ಧಾರ್ಮಿಕ ಕಾರ್ಯಕ್ಕೆ. ಶಂಖನಾದವನ್ನು ಶುಭಕಾರ್ಯದಲ್ಲಿ ಬಳಸುತ್ತಾರೆ. ಹಿಂದೆ ಯುದ್ಧ ಘೋಷಣೆ, ವಿಜಯ ಘೋಷಣೆಗೆ, ವೀರತ್ವ- ಪೌರುಷತ್ವ ಸಾರಲು, ನಿರ್ದಿಷ್ಟ ವ್ಯಕ್ತಿಯನ್ನು ಗುರುತಿಸಲು ಬಳಸಲಾಗುತ್ತಿತ್ತು.

ಕುರುಕ್ಷೇತ್ರ ಯುದ್ಧ ಸಂದರ್ಭದಲ್ಲಿ ಶ್ರೀಕೃಷ್ಣಾರ್ಜುನರ ಸಂವಾದ, ಭಗವದ್ಗೀತೆಯಲ್ಲೂ ವಿವಿಧ ಶಂಖಗಳ ಪ್ರಸ್ತಾಪವಿದೆ. ಕೃಷ್ಣನ ಪಾಂಚಜನ್ಯ, ಧರ್ಮರಾಜನ ಅನಂತ ವಿಜಯ, ಭೀಮನ ಪೌಂಡ್ರಕ, ಅರ್ಜುನನ ದೇವದತ್ತ, ನಕುಲನ ಸುಘೋಷ ಹಾಗೂ ಸಹದೇವನ ಮಣಿಪುಷ್ಪಕ.
ಶಂಖನಾದದ ಪರಿಣಾಮ: ಇಡೀ ಸೃಷ್ಟಿಯೇ ನಾದಮಯ, ಓಂಕಾರಮಯ, ಶಂಖದಿಂದ ಹೊರಡುವ ಧ್ವನಿತರಂಗಗಳು ಓಂಕಾರವೇ ಆಗಿದೆ. 

ಎಲ್ಲಿ ನಿರಂತರ ಶಂಖನಾದ ಮೊಳಗುವುದೋ ಅಲ್ಲಿ ಧನಾತ್ಮಕ ವಾತಾವರಣ, ಮನೋಧೈರ್ಯ ನಿರ್ಮಾಣವಾಗುವುದು. ವೈರಸ್ ಮುಂತಾದ ಕೀಟಾಣುಗಳು ನಾಶವಾಗುವವು. ನಿಯಮಿತವಾಗಿ ಊದುವುದರಿಂದ ಶ್ವಾಸಕೋಶಕ್ಕೆ ಅತ್ಯುತ್ತಮ ವ್ಯಾಯಾಮ ಲಭಿಸುವುದು, ಏದುಸಿರು, ಶ್ವಾಸ ಸಂಬಂಧಿ ಕಾಯಿಲೆಗಳು ದೂರವಾಗುವುದು. ಶ್ವಾಸಕೋಶದ ಸಾಮರ್ಥ್ಯ ಹೆಚ್ಚುವ ಜೊತೆಗೆ ಉಗ್ಗುವಿಕೆ ದೂರೀಕರಿಸಲು ಸಹಕಾರಿ.

ನಿಯಮಿತ ಶಂಖನಾದದಿಂದ ಅಸ್ತಮಾ ದೂರವಾಗುವುದು. ಶಂಖ ಮುಖೇನ ಮಾಡಿದ ಸಾಲಿಗ್ರಾಮ ಅಭಿಷೇಕ ಎಲ್ಲ ಪುಣ್ಯನದಿಗಳ ಪವಿತ್ರ ಸಂಗಮವಾಗಿದೆ. ಈ ತೀರ್ಥ ಸೇವನೆಯಿಂದ ಎಲುಬು- ಹಲ್ಲುಗಳಿಗೆ ಸಂಬಂಧಿತ ಸಮಸ್ಯೆ ನಿವಾರಣೆಗೆ ಸಹಕಾರಿ.

ಮಕ್ಕಳಿಗೆ ಯಾವಾಗಲೂ ಶಂಖ ಊದಲು ಪ್ರೋತ್ಸಾಹಿಸುವುದರಿಂದ ಜೀವನದಲ್ಲಿ ಎದುರಾಗುವ ಸಮಸ್ಯೆ ಎದುರಿಸುವ ಮನೋಬಲ ಲಭಿಸುವುದು. ಹಲವು ಕಡೆ ಅಕ್ಕಿಯ ಮೇಲಿಟ್ಟು ಪೂಜೆ ಮಾಡುವ ಪದ್ಧತಿಯಿದೆ. ಧಾನ್ಯ ಲಕ್ಷ್ಮಿ ವಾಸಸ್ಥಾನ ಎಂಬ ಶ್ರದ್ಧೆ ಹಾಗೂ ನಿತ್ಯ ಶಂಖಾನು ಸಂಧಾನದಿಂದ ಸರಸ್ವತಿ ಅನುಗ್ರಹ ಪ್ರಾಪ್ತಿಯಾಗುವುದು.

ಗರ್ಭವತಿಯರು ಶಂಖದ ನೀರನ್ನು ಸೇವಿಸುವುದರಿಂದ ಹುಟ್ಟುವ ಮಗುವಿಗೂ ಲಾಭಕರ. ಪೋಲಿಯೋ ಬಾರದು. ಮೂಕ, ಕಿವುಡುತನ ಬಾರದು, ವಾಕ್ಪಟುತ್ವ ಪ್ರಾಪ್ತವಾಗುವುದು.
ಯೌಗಿಕ ಪರಿಣಾಮವಾಗಿ ಶಂಖನಾದವು ಷಟ್‌ಚಕ್ರ ಶುಚಿತ್ವಕ್ಕೆ ವಿವಿಧ ಚಕ್ರಗಳ ಏರುಪೇರು ಸಮತೋಲನಕ್ಕೆ ಸಹಕಾರಿ. ನಿರಂತರ ಅಭ್ಯಾಸದಿಂದ ಪ್ರಾಣಾಯಾಮದ ಲಾಭವನ್ನು ನಿಶ್ಚಯವಾಗಿ ಪಡೆಯಬಹುದು.

ಶಂಖದಲ್ಲಿಟ್ಟ ಹಾಲು ಕ್ಯಾಲ್ಸಿಯಂ ತೊಂದರೆ ದೂರ ಮಾಡಿ ಸ್ಮರಣಶಕ್ತಿ ವರ್ಧನೆ, ಕಣ್ಣಿನ ದೋಷ ನಿವಾರಣೆಗೆ ಉಪಕಾರಿ. “ಬ್ರಹ್ಮಮುಹೂರ್ತೆ ಉತ್ತಿಷ್ಟೇತ್ ಉಷಃಪಾನಂ” ಎಂಬುದು ಆಯುರ್ವೇದ ದಿನಚರ್ಯೆಯ ಸೂತ್ರ. ಪ್ರತಿದಿನ ಬೆಳಗ್ಗೆ ಎದ್ದಕೂಡಲೇ ಉಷಃಪಾನ ಮಾಡುವುದರಿಂದ ಸಂಧಿವಾತ, ಎಸಿಡಿಟಿ, ಮಲಬದ್ಧತೆ, ಅರೆತಲೆ ನೋವು ನಿವಾರಣೆಯಾಗುವುದು.

ಉಷಃಪಾನಕ್ಕೆ ಮಣ್ಣಿನ, ತಾಮ್ರದ, ಬೆಳ್ಳಿಯ ಅಥವಾ ಬಂಗಾರದ ಪಾತ್ರೆ ಬಳಸುತ್ತಾರೆ. ಆದರೆ, ಶಂಖದ ನೀರನ್ನು ಸೇವಿಸುವುದರಿಂದ ಮೂರು ಧಾತುಗಳ ಲಾಭ ಸಿಗಲಿದೆ. ನಿರಂತರ ಶಂಖಾನುಸಂಧಾನದಿಂದ ವೃದ್ಧಾಪ್ಯ ಸಮಸ್ಯೆ ಬಾರದು.

ಅನ್ನದಾನಕ್ಕೆ ಗದಾ ಶಂಖ, ಕಷ್ಟ ನಿವಾರಣೆಗೆ ಸುದರ್ಶನ ಶಂಖ, ಸಂತಾನಕ್ಕಾಗಿ ಮಾದಾ ಶಂಖ, ಸೂರ್ಯನ ಆರಾಧನೆಗೆ ಸೂರ್ಯ ಶಂಖ, ರಾಹುಕೇತು ಪೀಡೆ ನಿವಾರಣೆಗೆ ಕೇತು ಶಂಖ, ಮನಃ ನಿಯಂತ್ರಣಕ್ಕೆ ಚಂದ್ರ ಶಂಖ, ವಿಘ್ನು ನಿವಾರಣಿಗೆ ಗಣೇಶ ಶಂಖ ಒಳ್ಳೆಯದು.

 
 
 
 
 
 
 
 
 
 
 

Leave a Reply