ರೈತವಿಜ್ಞಾನಿ ರಾಘವೇಂದ್ರ ನಾಯಕ್‌ರವರ ಅಕಾಲಿಕ ನಿಧನದಿಂದ ಕೃಷಿವಲಯ ಅನಾಥ – ಡಾ.ಧನಂಜಯ

ಶಿರ್ವ:-ಸಮಗ್ರಕೃಷಿಯ ಪರಿಪೂರ್ಣ ಜ್ಞಾನವನ್ನು ಹೊಂದಿದ ರೈತರ ಆಪದ್ಭಾಂದವ, ಪ್ರಗತಿಪರ ಕೃಷಿಕ ರೈತವಿಜ್ಞಾನಿ ರಾಘವೇಂದ್ರ ನಾಯಕ್ ರವರ ಅಕಾಲಿಕ ನಿಧನದಿಂದ ಕೃಷಿವಲಯ ಅನಾಥವಾಗಿದೆ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಧನಂಜಯ ನುಡಿದರು.

ಅವರು ಇತ್ತೀಚೆಗೆ ನಿಧನರಾದ ಕೃಷಿಪಂಡಿತ ರಾಜ್ಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪ್ರಗತಿಪರ ಕೃಷಿಕ ರಾಘವೇಂದ್ರ ನಾಯಕ್‌ರವರ ನಿವಾಸ ಶಿರ್ವ ಕಲ್ಲೊಟ್ಟುನಲ್ಲಿ ಮಂಗಳವಾರ ಶಿರ್ವ ಗ್ರಾಮ ಪಂಚಾಯತ್, ಉಡುಪಿ ಜಿಲ್ಲಾ ಕೃಷಿಕ ಸಂಘ, ರೋಟರಿ ಕ್ಲಬ್ ಶಿರ್ವ ಇದರ ಸಹಭಾಗಿತ್ವದಲ್ಲಿ ಏರ್ಪಡಿಸಿದ ಸಾರ್ವಜನಿಕ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ, ಕೃಷಿವಿಜ್ಞಾನ ಕೇಂದ್ರದ ಪ್ರತೀಯೊಂದು ತರಬೇತಿಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ, ಪಡೆದ ಅಪಾರ ಅನುಭವನ್ನು ಸ್ವತ: ಅನುಷ್ಠಾನಗೊಳಿಸಿ, ಸಂಪನ್ಮೂಲವ್ಯಕ್ತಿಯಾಗಿ ಕಾಪು ತಾಲೂಕಿನ ಕೃಷಿಕರಲ್ಲಿ ಅಲ್ಲದೆ ಜಿಲ್ಲೆಯಾದ್ಯಂತ ಅನೇಕ ರೈತರಿಗೆ ಕ್ರಾಂತಿಕಾರಕ ಬದಲಾವಣೆಗೆ ಪ್ರೇರಣಾಶಕ್ತಿಯಾಗಿ ಶ್ರಮಿಸಿದ ರಾಘವೇಂದ್ರ ನಾಯಕ್ ಗುರುವನ್ನು ಮೀರಿಸಿದ ಶಿಷ್ಯ ಎಂಬ ಹೆಮ್ಮೆ ಇದೆ. ಎಳೆಯ ವಯಸ್ಸಿನಲ್ಲಿಯೇ ಒಬ್ಬ ರೈತವಿಜ್ಞಾನಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದರು.

ಅವರ ಅನುಪಮ ಸೇವೆಯನ್ನು ಪಡೆದ ಮಂಗಳೂರು ಆಕಾಶವಾಣಿಕೇಂದ್ರ ಕಿಸಾನ್‌ವಾಣಿ ವಿಭಾಗದ ಕಾರ್ಯಕ್ರಮ ನಿರ್ವಾಹಕ ಟಿ.ಶ್ಯಾಮ್‌ಪ್ರಸಾದ್, ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಶಿರ್ವ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಸಾದ್ ಶೆಟ್ಟಿ ಕುತ್ಯಾರು, ಪಶುಸಂಗೋಪನಾ ಇಲಾಖೆ, ಶಿರ್ವ ಪಶುಆರೋಗ್ಯ ವೈದ್ಯಾಧಿಕಾರಿ ಡಾ.ಅರುಣ್‌ಕುಮಾರ್ ಹೆಗ್ಡೆ, ಬ್ರಹ್ಮಾವರ ಕೃಷಿವಿಜ್ಞಾನ, ವಲಯ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಲಕ್ಷö್ಮಣ್, ಕೃಷಿ ಡಿಪ್ಲೋಮಾ ಕಾಲೇಜಿನ ಪ್ರಾಂಶುಪಾಲ ಡಾ.ಸುಧೀರ್ ಕಾಮತ್, ಉಡುಪಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ.ಮೋಹನ್‌ರಾಜ್, ಕೃಷಿ ವಿಜ್ಞಾನಿ ಡಾ.ಚೈತನ್ಯ ಮೊದಲಾದವರು ಮಾತನಾಡಿ ರಾಘವೇಂದ್ರ ನಾಯಕ್‌ರವರ ಅನುಪಮ ಸೇವೆಯನ್ನು ಸ್ಮರಿಸಿ ಕಂಬನಿ ಮಿಡಿದರು.
ಕುಟುಂಬದ ಹಿರಿಯರಾದ ಟೆಲಿಕಾಂ ಉಡುಪಿ ವಿಭಾಗದ ನಿವೃತ್ತ ಎಜಿಎಂ ರಾಮಚಂದ್ರ ನಾಯಕ್ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಶಿರ್ವ ಗ್ರಾಮ ಪಂ.ಉಪಾಧ್ಯಕ್ಷೆ ಗ್ರೇಸಿ ಕರ್ಡೋಜಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ನ್ಯಾಯವಾದಿ ಜಯಕೃಷ್ಣ ಆಳ್ವ ವಹಿಸಿದ್ದರು. ಬಿ.ಪುಂಡಲೀಕ ಮರಾಠೆ ನಿರೂಪಿಸಿದರು. ಧರ್ಮಾನಂದ ನಾಯಕ್ ಧನ್ಯವಾದವಿತ್ತರು. ಮೃತರ ಆತ್ಮಸದ್ಗತಿಗಾಗಿ ಸಾಮೂಹಿಕ ಪ್ರಾರ್ಥನೆ, ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಶೃದ್ಧಾಂಜಲಿ ಸಮರ್ಪಿಸಲಾಯಿತು

 
 
 
 
 
 
 
 
 
 
 

Leave a Reply