ಹಗಲಿನ ಸೂರ್ಯನಿಂದ ರಾತ್ರಿಯಲ್ಲೂ ಬೆಳಕು ಸಾಧ್ಯ ~ಪೇಜಾವರ ಶ್ರೀ

ತಂತ್ರಜ್ಞಾನದಿಂದಾಗಿ ಹಗಲಿನ ಸೂರ್ಯನಿಂದ ರಾತ್ರಿಯಲ್ಲೂ ಬೆಳಕು ಸಾಧ್ಯವಾಗಿದೆ. ಬೆಳಕುಮಾತ್ರವಲ್ಲದೇ ಸೌರವಿದ್ಯುತ್ತಿನ ಮೂಲಕ ಇನ್ನೂ ಅನೇಕ ಲಾಭಗಳಾಗುತ್ತಿವೆ. ಇಂತಹಾ ಸೌರವಿದ್ಯುತ್ತಿನ ಘಟಕವನ್ನು ನಮ್ಮ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಕಾಲೇಜಿನಲ್ಲಿ ಅಳವಡಿಸಿರುವುದು ತುಂಬಾ ಸಂತೋಷವನ್ನು ಉಂಟು ಮಾಡಿದೆ. ಬೆಂಗಳೂರಿನ ಉದ್ಯಮಿಗಳಾದ ಶ್ರೀಯುತ ರಾಮದಾಸ ಮಡಮಣ್ಣಾಯರು ಈ ಸೌರವಿದ್ಯುದ್ಘಟಕದ ದಾನಿಗಳಾಗಿರುವುದೂ ತುಂಬಾ ಸ್ತುತ್ಯವಾಗಿದೆ. ರಾಮದಾಸ ಮಡಮಣ್ಣಾಯರು, ನಾವೆಲ್ಲರೂ ಹೆಮ್ಮೆ ಪಡುವಂತಹಾ ಉದ್ಯಮಿಯಾಗಿದ್ದಾರೆ. ಯಾವುದೇ ವಿದೇಶೀ ಕಂಪೆನಿಗಳ ಸಹಯೋಗವಿಲ್ಲದೇ ಈ ವರ್ಷದಲ್ಲಿ ಸಾವಿರಾರು ಕೋಟಿರೂಪಾಯಿಗಳ ಯಂತ್ರಗಳ ರಫ್ತು ಮಾಡುವಮೂಲಕ ಬಹಳ ದೊಡ್ದ ಸಾಧನೆ ಮಾಡಿದ್ದಾರೆ. ಅವರ ಈ ಕೈಗಾರಿಕೋದ್ಯಮವು ಆದರ್ಶಪ್ರಾಯವಾಗಿದೆ. ಎ.ಎಮ್.ಎಸ್ ಎಂಬ ಹೆಸರಿನ ಈ ಕಂಪೆನಿಯ ಒಳಗೆ ಹೊಕ್ಕರೆ ಒಂದು ವಿಶಿಷ್ಟವಾದ ಪರಿಸರ ಅಲ್ಲಿದೆ. ಕಂಪೆನಿಯ ಒಳಗೂ ಧಾರ್ಮಿಕ ವಾತಾವರಣವಿದೆ. ಎಲ್ಲಾ ಸಿಬ್ಬಂದಿಗಳೂ ಪ್ರತಿದಿನವೂ ಬೆಳಗ್ಗೆ ಒಟ್ಟಾಗಿ ಯಾವುದೇ ಭೇದ-ಭಾವವಿಲ್ಲದೆ ದೇವರ ಪ್ರಾರ್ಥನೆಯನ್ನು ಸಲ್ಲಿಸಿಯೇ ತಮ್ಮ ತಮ್ಮ ಕಾರ್ಯದಲ್ಲಿ ತೊಡಗುತ್ತಾರೆ. ಇಂತಹಾ ರಾಮದಾಸ ಮಡಮಣ್ಣಾಯರಿಗೆ ಶ್ರೀಕೃಷ್ಣ-ಮುಖ್ಯಪ್ರಾಣರ ಅನುಗ್ರಹದಿಂದ ಆಯುಷ್ಯ ಆರೋಗ್ಯ ನೆಮ್ಮದಿ ಇನ್ನೂ ಅಧಿಕ ಸಾಧನೆಯನ್ನು ದೇವರ ಸೇವೆಯನ್ನೂ ಮಾಡುವ ಸಾಮರ್ಥ್ಯವನ್ನೂ ದೇವರು ನೀಡಲಿ ಎಂದು ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಮಹಾವಿದ್ಯಾಲಯದಲ್ಲಿ ನೂತನ ಸೋಲಾರ್ ಘಟಕವನ್ನು ಉದ್ಘಾಟಿಸಿ ಆಶೀರ್ವಚಿಸಿದರು. ಈ ವೇಳೆ ಪರ್ಯಾಯ ಪುತ್ತಿಗೆ ಮಠದ ದಿವಾನರಾದ ಶ್ರೀಯುತ ನಾಗರಾಜ ಭಟ್ಟರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸೋಲಾರ್ ಅಳವಡಿಕೆಯಲ್ಲಿ ಸಹಕರಿಸಿದ ಸಾಯಿ ಟೆಕ್ ಸಂಸ್ಥೆಯ ಅಧಿಕಾರಿಗಳಾದ ಬಾಲಕೃಷ್ಣ ಆಚಾರ್ಯರು ಅಭ್ಯಾಗತರಾಗಿದ್ದರು. ಎಸ್.ಎಮ್.ಎಸ್.ಪಿ ಸಭಾ ದ ಕೋಶಾಧಿಕಾರಿಗಳಾದ ಶ್ರೀಯುತ ಚಂದ್ರಶೇಖರ ಆಚಾರ್ಯರು ಮತ್ತು ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಸತ್ಯನಾರಾಯಣ ವಿ ರಾವ್ ಇವರು ಶ್ರೀಗಳವರಿಗೆ ಫಲಪುಷ್ಪಗಳನ್ನು ಅರ್ಪಿಸಿ, ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ವಿನಯ ಹೆಗಡೆ ಮತ್ತು ಸಂಕೇತಗಾಂವ್ಕರ್ ವೇದಘೋಷಗೈದರು. ಗೌರವ ಉಪನ್ಯಾಸಕರಾದ ವಿದ್ವಾನ್ ರಾಧೇಶ ಆಚಾರ್ಯರು ಕಾರ್ಯಕ್ರಮವನ್ನು ನಿರ್ವಹಿಸಿದರು. ಗೌರವ ಉಪನ್ಯಾಸಕರಾದ ವಿದ್ವಾನ್ ಶ್ರೀನಿವಾಸ ತಂತ್ರಿ ಇವರು ಧನ್ಯವಾದಗಳನ್ನು ಅರ್ಪಿಸಿದರು.

 

 
 
 
 
 
 
 
 
 
 
 

Leave a Reply