Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ಈ ವಿಷಯ ಯಾರಿಗೂ ಹೇಳುವುದು ಬೇಡ ಎಂದು ಮೊದಲು ಅಂದುಕೊಂಡಿದ್ದೆ.

ಆದರೆ ಹೇಳದಿದ್ದರೆ ಮುಂದೆ ಇನ್ನೊಬ್ಬರಿಗೆ ಯಾರಿಗಾದರೂ ಈ ರೀತಿ ತೊಂದರೆಯಾದರೆ…? ಹಾಗಾಗಿ ಜನರಿಗೆ ಎಚ್ಚರಿಸಲು ಈ ಬರಹ ಬರೆಯುತ್ತಿದ್ದೇನೆ.

ಇದು ನಿನ್ನೆ ಅಂದರೆ ಜೂನ್ 30ರಂದು ನಡೆದ ಘಟನೆ.
ಸಂಜೆ ಐದು ಘಂಟೆ. ಮಳೆ ಜೋರಿತ್ತು. ಮಧ್ಯೆ ಸ್ವಲ್ಪ “ಹೊಳ” ಆಯಿತು. ನಿಮಗೆ ಗೊತ್ತಿದೆ; ನಾವು ಹುಟ್ಟಿದ್ದು, ಬೆಳೆದಿದ್ದು, ಆಡಿದ್ದು, ಓದಿದ್ದು, ಮತ್ತು ಇನ್ನೇನೇನೋ ಮಾಡಿದ್ದೆಲ್ಲಾ ಅರಬ್ಬೀ ಸಮುದ್ರ ತೀರದಲ್ಲಿ. ಹಾಗೆ ಹೊಳ ಆದಾಗ ತಿರುಗಾಡಲಿಕ್ಕೆ ಹೋಗಲು ಮನಸ್ಸು ಮಾಡಿದ್ದು, ಸಮುದ್ರ ತೀರಕ್ಕೆ. ಹಿಂದೆಲ್ಲಾ ನಾಲ್ಕು, ಐದು, ಆರು ಕಿ.ಮೀ.ನಷ್ಟು ದೂರ ವಾಕಿಂಗ್ ಹೋಗಿದ್ದುಂಟು. ಆದರೆ ಪುನಃ ಮಳೆ ಬರುವಂತಿದ್ದರಿಂದ, ಒಂದೆರಡು ಕಿ.ಮೀ. ತಿರುಗಿ ಮನೆಗೆ ಹೋಗುವ ಅಂದುಕೊಂಡಿದ್ದೆ.

ಪದೇ, ಪದೇ ಮಳೆ ಬರುತ್ತಿರುವುದರಿಂದ ಸಮುದ್ರ ತೀರದಲ್ಲಿ “ಒಂದು ನರ ಹುಳ” ಇದ್ದಿರಲಿಲ್ಲ. ಮನೆಯಿಂದ ಹೊರಟು ಅರಾಲು ಗದ್ದೆ ಹಾದು ಸಮುದ್ರ ತೀರಕ್ಕೆ ಹೆಜ್ಜೆಯಿಟ್ಟೆ. ಸ್ವಲ್ಪ ದೂರ ಹೋಗಿದ್ದೆ, ಅಷ್ಟೇ. ಒಂದಷ್ಟು ದೂರದಿಂದ ಮೂರು ನಾಯಿಗಳು ಓಡಿ ಬರಲು ಪ್ರಾರಂಭಿಸಿದವು. ಅವು ಅವಷ್ಟಕ್ಕೆ ಆಡಿಕೊಳ್ಳುತ್ತಿರ ಬೇಕೆಂದು ಕೊಂಡು ನಾನು ನನ್ನ ಪಾಡಿಗೆ ಹೋಗುತ್ತಿದ್ದೆ.

ಆದರೆ ಅವು ಬಂದಿದ್ದು ನನ್ನ ಹತ್ತಿರ. ಗಾತ್ರದಲ್ಲಿ, ಮುಖ ಲಕ್ಷಣದಲ್ಲಿ ಮೂರೂ ರಾಕ್ಷಸ ಸ್ವರೂಪಿಗಳಾಗಿದ್ದವು. ನಾನು ಯಾವುದೇ ಬಣ್ಣ, ಬಣ್ಣದ ಬಟ್ಟೆ ಕೂಡಾ ತೊಟ್ಟಿರಲಿಲ್ಲ. ಆದರೂ ನಾನೇನಾಗುತ್ತಿದೆ ಎಂದು ಯೋಚಿಸುವುದರೊಳಗೇ ಬೊಗಳುತ್ತಾ ಮೂರೂ, ಮೂರು ಕಡೆಯಿಂದ ನನ್ನ ಮೈಮೇಲೇ ಎರಗಿ ಬಿಟ್ಟವು.

ಅಯ್ಯೋ ದೇವರೇ, ಇವುಗಳನ್ನು ಹೇಗೆ ಎದುರಿಸುವುದಪ್ಪಾ, ಎಂದುಕೊಳ್ಳುತ್ತಾ ಕೈಯಲ್ಲಿದ್ದ ಬಿಡಿಸಿದ್ದ ಕೊಡೆ ಯನ್ನು ಅಡ್ಡ ಹಿಡಿಯತೊಡಗಿದೆ. ಆದರೆ ಒಂದಕ್ಕೆ ಅಡ್ಡ ಹಿಡಿದರೆ ಮತ್ತೊಂದು, ಮತ್ತೊಂದಕ್ಕೆ ಅಡ್ಡ ಹಿಡಿದರೆ ಮಗದೊಂದು, ಹೀಗೆ ಮೂರು ದಿಕ್ಕುಗಳಿಂದ ಅವು ಮೈಮೇಲೆ ಎರಗುತ್ತಿದ್ದರೆ ನಾನಾದರೂ ಏನು ಮಾಡಲಿ? ಜೊತೆಗೆ ಜೋರಾಗಿ ಗಾಳಿ, ಹನಿ, ಹನಿಯಾಗಿ ಮಳೆ! ಕೊಡೆ ಬೇರೆ ಗಾಳಿಗೆದುರಾದಾಗ ಉಲ್ಟಾ ಆಗುತ್ತಿತ್ತು. ಹಾಗೂ ನಾನು ಕೊಡೆ ಅಡ್ಡ ಹಿಡಿದಷ್ಟೂ ಅವು ಇನ್ನಷ್ಟು ಜೋರಾಗುತ್ತಿದ್ದವು.

ಚಿಕ್ಕಂದಿನಿಂದಲೂ ನನಗೆ ನಾಯಿಗಳೆಂದರೆ ಹೆದರಿಕೆ. ಬಾಲ್ಯದಲ್ಲಿ ನಾಯಿ ಬಾಲ ಅಲ್ಲಾಡಿಸಿಕೊಂಡು ಹತ್ತಿರ ಬಂದರೂ ಹೆದರಿ ಕೂಗಿಕೊಳ್ಳುತ್ತಿದ್ದೆ. ಅಂತಹುದರಲ್ಲಿ, ಒಂದಲ್ಲಾ, ಎರಡಲ್ಲಾ, ಮೂರೂ ನಾಯಿಗಳು ಭಯಾನಕ ವಾಗಿ ಕೂಗುತ್ತಾ ನನ್ನಿಂದ ಒಂದಡಿ ದೂರದಲ್ಲಿ ನನ್ನತ್ತ ಹಾರಿ, ಹಾರಿ ಬೀಳುತ್ತಿದ್ದವು. ನನಗಂತೂ ಆ ಕ್ಷಣಕ್ಕೆ ಏನು ಮಾಡಲಿ ಎಂದು ತೋಚದಿದ್ದರೂ, ಅದು ಹೇಗೇಗೋ ಅವುಗಳನ್ನು ಎದುರಿಸುತ್ತಿದ್ದೆ. ಅಬ್ಬಾ! ಈಗ ನೆನಸಿಕೊಳ್ಳಲೂ ಭಯವಾಗುತ್ತಿದೆ.

ಇದ್ದಕ್ಕಿದ್ದಂತೆ ನನಗೇ ತಿಳಿಯದಂತೆ ನನ್ನ ಕೊಡೆ ಮಡಚಿಕೊಂಡಿತು. ಆಗ ಅದನ್ನೇ ಜೋರಾಗಿ ಕೋಲಿನಂತೆ ಬೀಸತೊಡಗಿದೆ. ಅದಕ್ಕೆ ಅವು ಸ್ವಲ್ಪ ಹೆದರಿಕೊಂಡಂತೆ ಕಂಡಿತು. ಸ್ವಲ್ಪ ನನ್ನಿಂದ ನಾಲ್ಕಾರು ಅಡಿ ದೂರ ಸಾಗಿದವು. ಆದರೆ ನನ್ನ ಮೇಲಿನ ದಾಳಿಯಿಂದ ಮಾತ್ರ ಹಿಂಜರಿಯಲೇ ಇಲ್ಲ.

ಮೂರು ನಾಯಿಗಳಲ್ಲಿ ಎರಡು ಕಪ್ಪು ಬಣ್ಣದವು, ಒಂದು ಬಿಳಿ ಬಣ್ಣದ್ದು, ಅದಕ್ಕೆ ಮೈಮೇಲೆ ದೊಡ್ಡ ಗಾಯವಿತ್ತು. ಅದೇ ನನ್ನ ಮೇಲಿನ ದಾಳಿಗೆ ಕ್ಯಾಪ್ಟನ್ ನಂತೆ ವರ್ತಿಸುತ್ತಿತ್ತು. ಕಪ್ಪು ನಾಯಿಗಳು ನಾನು ಕೊಡೆ ಬೀಸಿದ್ದಕ್ಕೆ ಹಿಂದೆ ಸರಿದರೂ ಇದು ಹಿಂದೆ ಸರಿಯುತ್ತಿರಲಿಲ್ಲ. ಅದು ಕಪ್ಪು ನಾಯಿಗಳತ್ತ ತಿರುಗಿ, ತಿರುಗಿ ಕೂಗಿ ಬನ್ನಿ,ಬನ್ನಿ ಎಂದು ಕರೆದಂತೆ ನನಗೆ ಅನಿಸುತ್ತಿತ್ತು. ಹೀಗೆ ಹೋರಾಡುತ್ತಾ ಐದಾರು ನಿಮಿಷ ಕಳೆಯಿತು. ಅಷ್ಟರೊಳಗೆ ನಾನೂ ಇನ್ನೂರು ಮುನ್ನೂರು ಮೀಟರ್ ಮುಂದೆ ಸಾಗಿದ್ದೆ.

ಅಷ್ಟು ಹೊತ್ತಿಗೆ ನಾನು ಸಾಕಷ್ಟು ಸುಸ್ತಾಗಿದ್ದರೂ, ಅವೂ ಸುಸ್ತಾಗಿ ಪೂರ್ತಿ ದೂರವಲ್ಲದಿದ್ದರೂ, ಸ್ವಲ್ಪ ದೂರ ಸರಿದವು. ಸದ್ಯ ಹೋದವು ಎಂದು ನಿಟ್ಟುಸಿರು ಬಿಟ್ಟು ಒಂದೈವತ್ತು ಮೀಟರ್ ಮುಂದೆ ಹೋಗಿದ್ದೆ ಪುನಃ ಆ ಬಿಳಿ ನಾಯಿ ಅದೇ ಹಿಂದಿನ ರೋಷದಲ್ಲಿ ಕೂಗುತ್ತಾ ವಾಪಾಸು ಬಂದೇ ಬಿಟ್ಟಿತು. ಹತ್ತಿಪ್ಪತ್ತು ಸೆಕೆಂಡಿನ ನಂತರ ಆ ಎರಡು ಕಪ್ಪು ನಾಯಿಗಳೂ ಬಂದವು. ಮಳೆ ಹನಿಯುತ್ತಿದ್ದರಿಂದ ಅಷ್ಟರೊಳಗೆ ಪುನಃ ಕೊಡೆ ಬಿಡಿಸಿದ್ದೆ.

ಮತ್ತದೇ ಹಿಂದಿನ ರೀತಿಯಲ್ಲೇ ಅವು ಮೂರು, ನಾನು ಒಬ್ಬ, ನಮ್ಮ ಹೋರಾಟ ಮುಂದುವರಿಯಿತು. ಇಷ್ಟ ರೊಳಗೆ ಹೋರಾಡುತ್ತಲೇ ಸಮುದ್ರ ತೀರದಲ್ಲಿ ಒಟ್ಟು ಅರ್ಧ ಕಿ.ಮೀ. ಸಾಗಿಯಾಗಿತ್ತು. ಹಿಂದಿನ ರೀತಿಯಲ್ಲೇ ಕೊಡೆ ಮಡಚಿ ಅವುಗಳನ್ನು ನನಗೇ ತಿಳಿಯದಂತೆ ಧೈರ್ಯದಿಂದ ಎದುರಿಸಿದ್ದೆ. ಅದೇ ಪ್ಲಸ್ ಪಾಯಿಂಟ್ ಆಯಿತೋ, ಅಥವಾ ಅವುಗಳ Jurisdiction ಅಲ್ಲಿಗೇ ಮುಗಿಯಿತೋ, ಅಂತೂ ಕೊನೆಗೆ ಅವುಗಳು ಹಿಂದೆ ಸರಿದವು, ಮತ್ತೆ ವಾಪಾಸು ಬರಲಿಲ್ಲ. ಒಟ್ಟು ಅರ್ಧ ಕಿ.ಮೀ.ದೂರ, ಕಾಲು ಘಂಟೆ ನಮ್ಮ ಹೋರಾಟ ನಡೆದಿತ್ತು. ಇದನ್ನು ನೆನಸಿಕೊಂಡರೇ ಈಗ ಮೈ ಝುಂ ಎನ್ನುತ್ತದೆ.

ನಾನು ಸಮುದ್ರ ತೀರದಿಂದ ಮೇಲೆ ಸಾಗಲು ಇನ್ನೊಂದು ಕಾಲು ಕಿ.ಮೀ. ನಡೆಯಬೇಕಿತ್ತು. ಪುನಃ ಆ ರಾಕ್ಷಸ ನಾಯಿಗಳು ಬರುತ್ತವೆಯೋ ಎಂಬ ಭಯದಿಂದಲೇ ಹಿಂದೆ ನೋಡುತ್ತಾ, ನೋಡುತ್ತಾ ಜನವಸತಿ ಇರುವ ಸ್ಥಳ ಬೇಗ ತಲುಪಿಕೊಂಡೆ. ಆ ಹೊತ್ತಿಗೆ ಮನೆಯಿಂದ ಹೆಂಡತಿ ಫೋನ್ ಮಾಡಿ “ಇನ್ನೂ ಯಾಕೆ ಮನೆಗೆ ಬರಲಿಲ್ಲ” ಎಂದು ವಿಚಾರಿಸಿದಳು. ಅಮ್ಮನೂ ವಿಚಾರಿಸಲು ಹೇಳಿದ್ದಳಂತೆ. ಯಾವಾಗಲೂ ನಾನು ವಾಕಿಂಗ್ ಹೋದರೆ ಒಂದು ಘಂಟೆಯಾದರೂ ಮನೆಗೆ ಬರದಿದ್ದರೆ ಮಾತ್ರ ಫೋನ್ ಬರುತ್ತಿತ್ತು. ಇಂದು ಅದೇನು Telepathy ಇದೆಯೋ ಏನೋ, ಅರ್ಧ ಘಂಟೆಗೇ ಫೋನ್ ಬಂತು.

ಇದೀಗ ನನ್ನ ವಿಮರ್ಶೆಯೇನೆಂದರೆ, ನಾನೇನಾದರೂ ಅವುಗಳಿಗೆ ಹೆದರಿ ಕೊಡೆ ಬೀಸದೆ ಓಡಲು ಪ್ರಯತ್ನಿಸಿದ್ದರೆ, ಅವು ಬೆನ್ನಟ್ಟಿ ಬಂದು ನನ್ನನ್ನು ಕಚ್ಚಿಯೇ ಬಿಡುತ್ತಿದ್ದವೋ ಏನೋ? ಅದೇ ರೀತಿ ನಾನೇನಾದರೂ ಕಾಲು ಜಾರಿ ಬಿದ್ದಿದ್ದರೂ ನನ್ನನ್ನು ಮೂರೂ ಒಟ್ಟಿಗೆ ಸೇರಿ ಮುಗಿಸಿಯೇ ಬಿಡುತ್ತಿದ್ದವು ಎಂದೆನಿಸುತ್ತಿದೆ. ಅಲ್ಲೆಲ್ಲೋ ಬೆಂಗಳೂರಿನಲ್ಲಿ ಬೀದಿ ನಾಯಿಗಳೆಲ್ಲಾ ಒಟ್ಟಾಗಿ ಒಂದು ಮಗುವನ್ನು ಅರ್ಧಂಬರ್ಧ ತಿಂದೇ ಹಾಕಿದ್ದವು ಎಂಬ ಸುದ್ದಿ ನೆನಪಾದಾಗ “ದೇವರು ದೊಡ್ಡವನು, ನನ್ನನುಳಿಸಿದ” ಎಂದು ನಿಟ್ಟುಸಿರು ಬಿಡುತ್ತಿರುವೆ.

ಈ ಘಟನೆ ನಡೆದದ್ದು ಉಡುಪಿ ಜಿಲ್ಲೆ, ಪಾರಂಪಳ್ಳಿ ಪಡುಕೆರೆಯ ಕಡಲ ತೀರದಲ್ಲಿ. ಇಂದು ವಿಚಾರಿಸುವಾಗ ಇಂತಹ ಹತ್ತಾರು ಬೀಡಾಡಿ ನಾಯಿಗಳು ಅಲ್ಲಿವೆ ಅಂತೆ. ಅವು ಎಷ್ಟೋ ಮನೆಯ ಕೋಳಿಗಳನ್ನು ಎತ್ತಿಕೊಂಡು ಹೋಗಿ ತಿಂದು ಮುಗಿಸಿವೆಯಂತೆ.

ಆದರೆ ನಾನು ಈ ಹಿಂದೆ ನೂರಾರು ಬಾರಿ ಇದೇ ತೀರದಲ್ಲಿ ಸಂಚರಿಸಿರುವೆ. ಎಂದೂ ಇಂತಹ ಅನುಭವ ಗಳಾಗಿರಲಿಲ್ಲ. ಮೊದಲೇ ಹೇಳಿದಂತೆ ಈ ಲೇಖನದ ಪ್ರಮುಖ ಉದ್ದೇಶ, ಸಮುದ್ರ ತೀರದಲ್ಲೂ ಇತ್ತೀಚೆಗೆ ಪೇಟೆಯ ಬೀದಿಗಳಿಲ್ಲಿದ್ದಂತೆ ಬೀಡಾಡಿ ನಾಯಿಗಳ ಕಾಟ ಇದೆ, ಎಲ್ಲರೂ ಜಾಗೃತೆಯಾಗಿರಿ ಎಂದು ಹೇಳುವುದು. ಸದ್ಯ ನನ್ನ ಪುಣ್ಯ,ನನಗಿಷ್ಟರಲ್ಲೇ ಮುಗಿಯಿತು. ಮುಂದೆ ಯಾರಿಗಾದರೂ ಬೇರೇನಾದರೂ ಆದರೂ ಆಗಬಹುದು, ಹಾಗಾಗಿ ಚಿಕ್ಕ ಮಕ್ಕಳನ್ನಂತೂ ಒಂಟಿಯಾಗಿ ಸಮುದ್ರ ತೀರಕ್ಕೆ ಬಿಡಬೇಡಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ.

— ಕೋಡಿ ಚಂದ್ರಶೇಖರ ನಾವಡ,
ಕೋಡಿ ಕನ್ಯಾನ, ವಯಾ ಸಾಸ್ತಾನ, ಉಡುಪಿ ಜಿಲ್ಲೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!