ಬದುಕಿನ ಸ್ವಯಂ ವಿಶ್ಲೇಷಣೆ ಮುಖ್ಯ : ನರೇಂದ್ರ ಎಸ್ ಗಂಗೊಳ್ಳಿ

ನಮ್ಮ ಬದುಕಿನ ಸ್ವಯಂ ವಿಶ್ಲೇಷಣೆ ಮಾಡಿಕೊಂಡಾಗ ಆತ್ಮತೃಪ್ತಿ ಸಂತೋಷ ಕಾಣಸಿಗುವಂತಾಗಬೇಕು ಅದು ನಿಜವಾದ ಬದುಕಿನ ಸಾರ್ಥಕತೆ ಎಂದು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಯುವ ಬರಹಗಾರ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು.

ಅವರು ಗಂಗೊಳ್ಳಿಯ ಶ್ರೀ ಗುರು ಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಇದರ 39ನೇ ವಾರ್ಷಿಕೋತ್ಸವ ಮತ್ತು ಗುರು ಜ್ಯೋತಿ ಶಿಕ್ಷಣ ನಿಧಿ ಯೋಜನೆಯ 22ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ನಮ್ಮ ಬದುಕಿನಲ್ಲಿ ವಿದ್ಯೆಯ ಜೊತೆಗೆ ಬದುಕಿನ ಸಂಸ್ಕಾರ ಮೌಲ್ಯಗಳನ್ನು ಅರಿತು ಅಳವಡಿಸಿಕೊಳ್ಳಬೇಕು. ಈ ನೆಲದ ಧೀಮಂತ ಧರ್ಮ, ಸಂಸ್ಕೃತಿ ಮತ್ತು ನೈಜ ಇತಿಹಾಸದ ಅರಿವನ್ನು ಖುದ್ದಾಗಿ ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪರ್ಷಿಯನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ ಪ್ರಭಾಕರ್ ಎಚ್ ಕುಂದರ್, ಶ್ರೀ ಮಹಾಕಾಳಿ ದೇವಸ್ಥಾನ ಕುಂದಾಪುರದ ಅಧ್ಯಕ್ಷ ಜಯಾನಂದ ಖಾರ್ವಿ, ಜಿ ಎಸ್ ವಿ ಎಸ್ ಅಸೋಸಿಯೇಷನ್ ಸದಸ್ಯ ರಾಮನಾಥ್ ನಾಯಕ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮುಳುಗು ತಜ್ಞ ದಿನೇಶ್ ಖಾರ್ವಿ ಇವರನ್ನು ಸನ್ಮಾನಿಸಲಾಯಿತು. ಪ್ರತಿ ವರ್ಷದಂತೆ ಶೈಕ್ಷಣಿಕ ನೆರವಿಗೆ ಓರ್ವ ವಿದ್ಯಾರ್ಥಿಯನ್ನು ದತ್ತು ತೆಗೆದುಕೊಳ್ಳಲಾಯಿತು. ಪ್ರತಿಭಾ ಪುರಸ್ಕಾರದ ಜೊತೆ 58 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಶ್ರೀ ಗುರು ಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಿಜಯ ಖಾರ್ವಿ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಕಾಂತ ಬಿಲ್ಲವ ವರದಿ ವಾಚಿಸಿದರು. ವೀಣಾ ಹರೀಶ್ ಮತ್ತು ರಾಧಾಕೃಷ್ಣ ಯು. ಶಾನುಭಾಗ್ ವಿದ್ಯಾರ್ಥಿ ವೇತನ ಫಲಾನುಭವಿಗಳ ಮತ್ತು ಬಹುಮಾನಿತರ ಪಟ್ಟಿ ವಾಚಿಸಿದರು. ಸುಂದರ ಜಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಇದಕ್ಕೂ ಮೊದಲು ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಮೀನುಗಾರಿಕಾ ಉಪನಿರ್ದೇಶಕರಾದ ಕುಮಾರಸ್ವಾಮಿ ಆರ್ ಧ್ವಜಾರೋಹಣ ನೆರವೇರಿಸಿದರು.

 
 
 
 
 
 
 
 
 
 
 

Leave a Reply