ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ರಂಗಶಿಬಿರ ಅಗತ್ಯ: ಮಲ್ಲಿಕಾ ಟೀಚರ್

ಉಡುಪಿ: ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ರಂಗಶಿಬಿರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಮಲ್ಲಿಕಾದೇವಿ ಟೀಚರ್ ತಿಳಿಸಿದರು.

ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಕೊಡವೂರು ಬಾಚನಬೈಲಿನಲ್ಲಿ ಆಯೋಜಿರುವ ‘ಬಾಲಲೀಲೆ’ ಮಕ್ಕಳ ರಂಗಶಿಬಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಬಾಲ್ಯದಲ್ಲಿ ಇಂಥ ರಂಗಶಿಬಿರಗಳು ಇರಲಿಲ್ಲ. ಈಗಿನ ಮಕ್ಕಳಿಗೆ ಇಂಥ ಸುವರ್ಣಾವಕಾಶಗಳು ಸಿಕ್ಕಿವೆ. ಮಕ್ಕಳ ಶೈಕ್ಷಣಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ, ವ್ಯಕ್ತಿತ್ವ ನಿರ್ಮಾಣದಲ್ಲಿ ಈ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿವರಿಸಿದರು.

ಹೆತ್ತವರಿಂದ ಶುಲ್ಕ ಕಟ್ಟಿಸಿಕೊಂಡು ಹೆಚ್ಚಿನ ಕಡೆಗಳಲ್ಲಿ ರಂಗಶಿಬಿರಗಳನ್ನು ನಡೆಸಲಾಗುತ್ತದೆ. ಆದರೆ ಸುಮನಸಾ ಕೊಡವೂರು ಸಂಸ್ಥೆಯು ಉಚಿತವಾಗಿ ರಂಗಶಿಬಿರವನ್ನು ಹಮ್ಮಿಕೊಂಡಿದೆ. ಸುಮನಸಾದ ಪ್ರಾಮಾಣಿಕ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಮನಸಾ ಕೊಡವೂರು ಗೌರವಾಧ್ಯಕ್ಷ ಎಂ.ಎಸ್. ಭಟ್ ಅವರು ಪ್ರಸ್ತುತ ದಿನಗಳಲ್ಲಿ ರಂಗ ಶಿಬಿರದ ಮಹತ್ವದ ಬಗ್ಗೆ ಮಾತನಾಡಿದರು. ಮಕ್ಕಳ ಒಳಗೆ ಸುಪ್ತವಾಗಿರುವ ಪ್ರತಿಭೆಗಳು ಅನಾವರಣಗೊಳ್ಳಲು, ಮುಂದೆ ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಯಾಗಲು ಈ ಶಿಬಿರಗಳು ಸಹಾಯಕವಾಗಿವೆ ಎಂದು ಹೇಳಿದರು.

ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿನಯ್ ಕಲ್ಮಾಡಿ, ಸುರೇಶ್ ಸುವರ್ಣ ಕುರ್ಕಾಲ್, ಶಿಬಿರದ ನಿರ್ದೇಶಕ ಗಣೇಶ್ ಸಗ್ರಿ, ಸಂಪನ್ಮೂಲ ವ್ಯಕ್ತಿಗಳಾದ ದಿವಾಕರ್ ಕಟೀಲ್, ಅಕ್ಷತ್ ಅಮೀನ್, ಜಗದೀಶ್ ಚೆನ್ನಂಗಡಿ, ಪ್ರವೀಣ್ ಜಿ.ಕೊಡವೂರು, ರಾಧಿಕಾ ದಿವಾಕರ್, ಪ್ರಜ್ಞಾ ಶ್ರೀ ಉಪಸ್ಥಿತರಿದ್ದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.

40 ಮಕ್ಕಳು ಈ ರಂಗ ಶಿಬಿರದಲ್ಲಿ ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮೇ 10 ರವರೆಗೆ ‘ಬಾಲಲೀಲೆ– ಇದು ಬಣ್ಣದ ಪರಿಚಯ’ ರಂಗಶಿಬಿರ ನಡೆಯಲಿದೆ.

 
 
 
 
 
 
 
 
 
 
 

Leave a Reply