30700 ಕೋಟಿ ರೂ. ವಹಿವಾಟು ದಾಟಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್—-

ಲಾಭಗಳಿಕೆಯಲ್ಲೂ ಹೊಸ ವಿಕ್ರಮ

ಉಡುಪಿ: ಕೋವಿಡ್ ಸಂದಿಗ್ಧ ಪರಿಸ್ಥಿತಿ ಹಾಗೂ ಪ್ರಕೃತಿ ವೈರುಧ್ಯದ ಕಾರಣ ಕುಂಠಿತಗೊಂಡ ಆರ್ಥಿಕ ವ್ಯವಸ್ಥೆಯ ನಡುವೆಯೂ ಕೆನರಾ ಬ್ಯಾಂಕ್ ಪ್ರವರ್ತಿತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು 10.53 ಪ್ರತಿಶತ ಪ್ರಗತಿ ದರದಲ್ಲಿ 30748 ಕೋಟಿ ರೂ. ಒಟ್ಟಾರೆ ವಹಿವಾಟು ದಾಖಲಿಸಿದೆ ಮತ್ತು ಬ್ಯಾಂಕಿನ ಕಾರ್ಯನಿರ್ವಹಣಾ ಲಾಭ 125 ಕೋಟಿ ರೂ. ಗಳಿಂದ 330 ಕೋಟಿ ರೂ. ಗಳಿಗೆ ವೃದ್ಧಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಪಿ ಗೋಪಿಕೃಷ್ಣ ತಿಳಿಸಿದ್ದಾರೆ.

ಬುಧವಾರದಂದು ಪತ್ರಿಕಾ ಹೇಳಿಕೆ ನೀಡಿರುವ ಅವರು ಹಲವು ಉಪಬಂಧಗಳನ್ನು ಪಾವತಿಸಿಯೂ ಬ್ಯಾಂಕು 32.19 ಕೋಟಿ ರೂ. ನಿಕ್ಕಿ ಲಾಭಗಳಿಸುವಲ್ಲಿ ಶಕ್ತವಾಗಿದೆ. ಆ ಮೂಲಕ ಬ್ಯಾಂಕಿನ ನಿವ್ವಳ ಸಂಪತ್ತು 1224.42 ಕೋಟಿ ರೂ.ಗಳಿಗೆ ವೃದ್ಧಿಸಿದೆ ಎಂದು ತಿಳಿಸಿದರು.

ಠೇವಣಿ ಸಂಗ್ರಹಣೆಯಲ್ಲಿ 9.60% ಪ್ರತಿಶತ ಪ್ರಗತಿ ದರದಲ್ಲಿ 17647 ಕೋಟಿ ರೂ. ಮಟ್ಟವನ್ನು ತಲುಪಿರುವ ಬ್ಯಾಂಕು 2021-2022ರ ಸಾಲಿನಲ್ಲಿ ವಿವಿಧ ರಂಗಗಳಿಗೆ ಸಂಬಂಧಿಸಿ 8825 ಕೋಟಿ ರೂ. ಸಾಲ ವಿತರಿಸಿದೆ. ಬ್ಯಾಂಕಿನ ಸಾಲ ಹಾಗೂ ಮುಂಗಡಗಳು: 11.80% ಪ್ರಗತಿ ದರದಲ್ಲಿ 13101ಕೋಟಿ ರೂ. ಮಟ್ಟವನ್ನು ತಲುಪಿದೆ. ನಿಕ್ಕಿ ಅನುತ್ಪಾದಕ ಸಾಲವನ್ನು 9.66 % ಪ್ರತಿಶತದಿಂದ 5.90 ಪ್ರತಿಶತಕ್ಕೆ ತಗ್ಗಿಸಲಾಗಿದೆ. ಬ್ಯಾಂಕಿನ ಕಾರ್ಯ ನಿರ್ವಹಣಾ ಲಾಭ 164.40% ಪ್ರಗತಿದರದಲ್ಲಿ 124.90ಕೋಟಿ ರೂ. ಗಳಿಂದ 330.19ಕೋಟಿ ರೂ. ಗಳಿಗೆ ವೃದ್ಧಿಸಿದೆ. ಬ್ಯಾಂಕಿನ ಒಟ್ಟೂ ಆದಾಯವು 1589.53 ಕೋಟಿ ರೂ. ಗಳಿಂದ 1991.16ಕೋಟಿಗೆ ಏರಿಕೆಯಾಗಿದೆ ಎಂದೂ ಗೋಪಿ ಕೃಷ್ಣ ತಿಳಿಸಿದ್ದಾರೆ.

2022-2023ರ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಬ್ಯಾಂಕು 18900 ಕೋಟಿ ರೂ. ಠೇವಣಿ ಮತ್ತು 14100 ಕೋಟಿ ರೂ. ಮುಂಗಡ ಮಟ್ಟವನ್ನು ತಲುಪುವ ಮೂಲಕ 33000 ಕೋಟಿ ರೂ. ವಹಿವಾಟು ಸಾಧಿಸುವ ಮತ್ತು ಒಂಭತ್ತು ಜಿಲ್ಲೆಗಳ ಕಾರ್ಯಕ್ಷೇತ್ರದಲ್ಲಿ 9150 ಕೋಟಿ ರೂ. ಸಾಲ ವಿತರಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಗೋಪಿಕೃಷ್ಣ ತಿಳಿಸಿರುವರು.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಪ್ರಸ್ತುತ ಮಂಗಳೂರು ಮತ್ತು ಉಡುಪಿ ಒಳಗೊಂಡ೦ತೆ ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ 629 ಶಾಖೆಗಳನ್ನು ಹೊಂದಿದೆ.

 
 
 
 
 
 
 
 
 
 
 

Leave a Reply