5 ಕೋಟಿಗೂ ಮಿಕ್ಕಿ ಕೋವಿಡ್-19 ಲಸಿಕೆ ಡೋಸ್ ವಿತರಣೆಯ ಸಾಧನೆ ಅಭಿನಂದನಾರ್ಹ : ಕುಯಿಲಾಡಿ

ವಿಶ್ವದಾದ್ಯಂತ ಕೋವಿಡ್-19 ಲಸಿಕೆಯನ್ನು ರವಾನಿಸಿರುವ ಭಾರತ ಜಾಗತಿಕ ಮನ್ನಣೆ ಪಡೆದಿರುವುದು ಐತಿಹಾಸಿಕ ಸಾಧನೆಯಾಗಿದೆ. ಪ್ರಸಕ್ತ ದೇಶದಾದ್ಯಂತ 5 ಕೋಟಿಗೂ ಮಿಕ್ಕಿ ಕೋವಿಡ್-19 ಲಸಿಕೆ ಡೋಸ್ ವಿತರಣೆಯನ್ನು ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಅದ್ವಿತೀಯ ಸಾಧನೆ ಅಭಿನಂದನಾರ್ಹ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಕೊರೋನಾ ವೈರಸ್ ನ 2ನೇ ಅಲೆ ತೀವ್ರಗೊಳ್ಳುತ್ತಿರುವ ಮುನ್ಸೂಚನೆ ತೋರಿ ಬರುತ್ತಿದ್ದಂತೆಯೇ ಕೇಂದ್ರ ಸರಕಾರ ಇದೀಗ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಪಡೆಯಲು ಅವಕಾಶ ಕಲ್ಪಿಸಿರುವುದು ಪ್ರಶಂಸನೀಯವಾಗಿದೆ.

ಈಗಾಗಲೇ 60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಆರೋಗ್ಯ ಸಮಸ್ಯೆ ಇರುವ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ಪಡೆಯುವ ಅವಕಾಶ ನೀಡಲಾಗಿತ್ತು. ಕೇಂದ್ರ ಸರಕಾರದ ಈ ನಡೆಯಿಂದ ಲಸಿಕೆ ವ್ಯರ್ಥವಾಗುವುದನ್ನು ತಡೆಗಟ್ಟಲು ಕೂಡಾ ಸಾಧ್ಯವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಈ ನಿಟ್ಟಿನಲ್ಲಿ ಎಪ್ರಿಲ್ 1ರಿಂದ ಎಪ್ರಿಲ್ 30ರ ವರೆಗೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಕೇಂದ್ರ ಸರಕಾರ, ಲಸಿಕೆ ವಿತರಣಾ ಪ್ರಕ್ರಿಯೆಗೆ ವೇಗ ನೀಡುವಂತೆಯೂ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದ್ದು, ಸಂಬಂಧಪಟ್ಟ ನಾಗರಿಕರು ತಮ್ಮ ಕರ್ತವ್ಯವನ್ನು ಬದ್ಧತೆಯಿಂದ ನಿರ್ವಹಿಸಬೇಕಾಗಿದೆ.

ಕೊರೋನಾ ಪ್ರಸರಣ ತಡೆಗೆ ಸೂಕ್ತ ಮಾರ್ಗೋಪಾಯಗಳಾಗಿರುವ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಮತ್ತು ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ ಸರಕಾರದ ನಿರ್ದೇಶನದಂತೆ ಲಸಿಕೆ ಪಡೆಯುವ ಮೂಲಕ ನಾಗರಿಕರು ತಮ್ಮ ವೈಯಕ್ತಿಕ ಮತ್ತು ಕುಟುಂಬದ ಆರೋಗ್ಯದ ಕಾಳಜಿಯನ್ನು ತೋರಬೇಕಾಗಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply