ಕೃಷ್ಣವೇಷ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೂವತೈದಕ್ಕಿಂತಲೂ ಅಧಿಕ ಬಹುಮಾನ ಬಾಚಿಕೊಂಡ ಕಂದಮ್ಮ ಪುಟ್ಟ ಹಿರಣ್ಮಯೀ..

ಆಬಾಲವೃದ್ಧರಾದಿಯಾಗಿ ಎಲ್ಲರನ್ನೂ ಆಕರ್ಷಿಸುವವನು ಭಗವಾನ್ ಶ್ರೀ ಕೃಷ್ಣ. ಅದರಲ್ಲೂ ಪುಟ್ಟ ಬಾಲಕೃಷ್ಣನ  ಮುದ್ದಿನ ಮುಖ, ಮನಸೆಳೆಯುವ ತುಂಟಾಟದ ಸವಿಯನ್ನು ಬಣ್ಣಿಸಿದಷ್ಟೂ ಕಡಿಮೆಯೇ‌. ದ್ವಾಪರ ಯುಗದ ಕೃಷ್ಣನ ಆಕರ್ಷಣೆ ಕಲಿಯುಗದಲ್ಲೂ ಇನಿತೂ ಕಡಿಮೆಯಾಗಿಲ್ಲ. ಹಾಗೆಂದೇ ಮನೆ ಮನೆಗಳಲ್ಲಿ ಮನಮನಗಳಲ್ಲಿ ಪುಟ್ಟ ಕೃಷ್ಣನನ್ನು‌ ಕಾಣುವ ಹಂಬಲ.
ಹೊಳೆವ ಕಂಗಳನ್ನು ಹೊತ್ತು, ಮುದ್ದು ಮೊಗದಲ್ಲಿ ನಗುವ ಸೂಸುತ್ತ ಗುಂಗುರು ಕೇಶರಾಶಿಯನ್ನು ಮೇಲೆತ್ತಿ  ಜುಟ್ಟನ್ನು ಕಟ್ಟಿ ಅದಕ್ಕೊಂದು ನವಿಲು ಗರಿ ಸಿಕ್ಕಿಸಿ, ಕಣ್ಣು ಕೋರೈಸುವ ಆಭರಣ ಧರಿಸಿ ಮನಕ್ಕೆ ಮುದ ನೀಡುವ ಪಟ್ಟೆ ಪೀತಾಂಬರವನ್ನು ಹೊದ್ದ ಒಂದು ಪುಟ್ಟ ಕಂದ ನಮ್ಮೆದುರು ಬಂದರೆ ದ್ವಾಪರ ಯುಗದ ನವನೀತ ಕೃಷ್ಣನದ್ದೇ ನೆನಪು. 
ಕಳೆದ ವರುಷ ಕೋವಿಡ್ ಮಹಾಮಾರಿಯಿಂದಾಗಿ ಬದುಕಿನಲ್ಲಾದ ಅಲ್ಲೋಲ ಕಲ್ಲೋಲದಲ್ಲಿ ಒಂದಷ್ಟು ಹೊಸತನವನ್ನು ಮೈಗೂಡಿಸಿ‌ಕೊಂಡವರು ಹಲವರು. ಇತ್ತೀಚಿನ ವರುಷಗಳಲ್ಲಿ ಕೃಷ್ಣವೇಷ  ಸ್ಪರ್ಧೆ ಹಲವಾರು ಸಂಘ ಸಂಸ್ಥೆಗಳಿಂದ, ಮಠ ಸಂಸ್ಥಾನಗಳಿಂದ ವ್ಯಾಪಕವಾಗಿ ನಡೆದುಕೊಂಡು ಬರುತ್ತಲಿದೆ. ಆದರೆ ಮನೆಯಿಂದ ಹೊರ ಹೋಗದ ಈ ಸಂದಿಗ್ಧ ಕೋವಿಡ್ ಸಂದರ್ಭದಲ್ಲಿ ಜನರು ಆಶ್ರಯಿಸಿದ್ದು ಸಾಮಾಜಿಕ ಜಾಲತಾಣಗಳನ್ನು. 
ಹಾಗಾಗಿ ಕೃಷ್ಣ ವೇಷ ಸ್ಪರ್ಧೆಗೊಂದು ಹೊಸ ಆಯಾಮ. ಕೃಷ್ಣ ವೇಷ ಹಾಕಿದ ಮಕ್ಕಳ ಛಾಯಾಚಿತ್ರ  ಸ್ಪರ್ಧೆ, ವೀಡಿಯೋ ಚಿತ್ರೀಕರಣ ಸ್ಪರ್ಧೆ ಎಲ್ಲೆಡೆ ಸಂಚಲನ ಮೂಡಿಸಿದ್ದು ಸುಳ್ಳಲ್ಲ. ಪುಟ್ಟ ಕಂದಮ್ಮಗಳ ಅಮೋಘ ಅಭಿನಯ, ಛಾಯಾಗ್ರಾಹಕರ ಅದ್ಭುತ ಕೈಚಳಕ, ಮುದ್ದುಮೊಗ ಹೊತ್ತು ಮುಗ್ಧ ಭಾವದಲ್ಲಿ ಫೋಟೋಗೆ ಪೋಸ್ ಕೊಡುವ ರೀತಿ, ತಂದೆ ತಾಯಿಯ ವಿಶೇಷ ಮುತುವರ್ಜಿ, ಮನೆಮಂದಿಯ ಸಾಂಧರ್ಭಿಕ ಸಹಕಾರ, ಕಣ್ ಸೆಳೆವ ಹಿನ್ನಲೆ ಹೀಗೆ ಎಲ್ಲವೂ ಸಕಾರಾತ್ಮಕವಾಗಿ ಮೇಳೈಸಿದ  ಒಂದು ಅಪೂರ್ವ ಸಂಗಮದಲ್ಲಿ ಮೂಡಿ ಬಂದ ಸುಂದರ ಮಗುವಿನ ಛಾಯಾಚಿತ್ರವನ್ನು ನೋಡಿದವರಿಂದ ವಾಹ್ ಎಂಬ ಉದ್ಗಾರ ಸಹಜ.
ಇಂತಹ ಒಂದು ಅಪೂರ್ವ ಛಾಯಾಚಿತ್ರಗಳ ಮೂಲಕ ಮನೆ ಮಾತಾದ ನಮ್ಮೀ‌ ಕರಾವಳಿಯ ಮುದ್ದು ಕಂದಮ್ಮ  ಹಿರಣ್ಮಯೀ ಎಸ್ ಭಟ್ ಉಡುಪಿ. ತಾಯಿ ಪ್ರಜ್ವಲೀ ಎಸ್ ಭಟ್ ಹಾಗು ತಂದೆ ಸುಧೀರ್ ಭಟ್ ಮತ್ತು ಅಣ್ಣ ಅಪ್ರಮೇಯ ಭಟ್  ಹಾಗು ಮನೆ ಮಂದಿಯ ಅಕ್ಕರೆಯ ಈ ಬಾಲೆ ಕಳೆದ ವರುಷ ಕೃಷ್ಣ ವೇಷದ ಛಾಯಾಚಿತ್ರ ಸ್ಪರ್ಧೆಯಲ್ಲಿ ಗಳಿಸಿದ ಬಹುಮಾನಗಳು ಸುಮಾರು ಮೂವತೈದಕ್ಕೂ ಅಧಿಕ. 
ಭಾಗವಹಿಸಿದಲ್ಲೆಲ್ಲ ಬಹುಮಾನ ಬಾಚಿಕೊಂಡು ಬಂದ ಈ ಬಾಲೆಯ ಕೃಷವೇಷದ ಛಾಯಾಚಿತ್ರ ಕಂಡಾಗ ಅಖಿಲಪ್ರದ ಸಾಕ್ಷಾತ್ ಶ್ರೀ ‌ಕೃಷ್ಣನದ್ದೇ ನೆನಪು. ಕಣ್ಣಲ್ಲೇ ಮಾತನಾಡುವ  ಈ ಪೋರಿಗೆ ಫೋಟೋ ಅಂದರೆ ಅಚ್ಚುಮೆಚ್ಚು. ತನ್ನ ತುಂಟಾಟಗಳಿಂದ, ಹೆಜ್ಜೆ ಹಾಕಿ ನೃತ್ಯಮಾಡುವ  ಈ ಬಾಲೆಯ ಕೃಷ್ಣ ವೇಷದ ಛಾಯಾಚಿತ್ರಗಳು, ವೀಡಿಯೋ ಚಿತ್ರೀಕರಣಗಳು  ಕಳೆದ ವರುಷ ಲಾಕ್ ಡೌನ್ ನಲ್ಲಿ‌ ಹಲವರ ಕಂಪ್ಯೂಟರ್‌, ಫೇಸ್ ಬುಕ್, ವಾಟ್ಸಾಪ್, ಲ್ಯಾಪ್ ಟಾಪ್ ಗಳಲ್ಲಿ ನಲಿದಾಡಿತ್ತು.
ಬರೋಬ್ಬರಿ ಮೂವತ್ತೈದು ಬಹುಮಾನಗಳನ್ನು ಬಾಚಿಕೊಂಡ ಈ ಮುದ್ದು ಕೃಷ್ಣನಿಗೆ ಮನಸೋಲದವರಿಲ್ಲ‌. ಜಾಲತಾಣಗಳಲ್ಲಿ ಸುಮಾರು ಇಪ್ಪತ್ನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆ ಆದ ವೀಡೀಯೋ ಮತ್ತು ಫೋಟೋಗಳ ವೀಡೀಯೋ ತುಣುಕುಗಳು ಜನಮನಸೆಳೆದಿತ್ತು. ಭಾಗವಹಿಸಿದಲ್ಲೆಲ್ಲ ಬಹುತೇಕ ಪ್ರಥಮ  ಬಹುಮಾನ ಗಿಟ್ಟಿಸಿ ಎಲ್ಲರೊಂದಿಗೆ ಸೆಲ್ಫೀಗೆ ನಗುಮೊಗ ಒಡ್ಡಿ ತನ್ನ ಪ್ರೀತಿಸುವವರನ್ನು ಮತ್ತಷ್ಟು ಮರಳು ಮಾಡುತ್ತಿದ್ದಳು ಈ‌ಬಾಲೆ. 
ಈಕೆಯ  ಮುಗ್ಧತೆ ಸೂಸುವ ಮುದ್ದುಮೊಗದ ಭಾವನೆಗಳನ್ನು ವಿವಿಧ ಕೋನಗಳಲ್ಲಿ  ಸೆರೆಹಿಡಿಯುವುದು ಸುಲಭದ ಮಾತಲ್ಲ.ಇಷ್ಟು ಚಿಕ್ಕ ವಯಸ್ಸಿನಲ್ಲಿ ತುಂಟತನ, ಹಟಮಾರಿತನ ಸಹಜವಾದ ಮಗುವನ್ನು ಹಿಡಿದಿಟ್ಟು ಫೋಟೋಗೆ ಪೋಸ್ ಕೊಡುವಂತೆ ರಮಿಸುವುದು ತಾಯಿ ತಂದೆಯರಿಗೆ ಒಂದು ಸವಾಲು. ಅಲ್ಲದೇ ಛಾಯಾಗ್ರಾಹಕನಿಗೆ ಅದನ್ನು ತನ್ನ ಛಾಯಾಗ್ರಹಣದಲ್ಲಿ ಹಿಡಿದಿಟ್ಟುಕೊಳ್ಳುವುದು ಒಂದು ಕಲೆ.
ಆಕರ್ಷಕ ಮುಖ, ಮನಕ್ಕೆ ಮುದ ನೀಡುವ ತುಂಟತನ  ಇವೆಲ್ಲ ಮಗುವಿಗೆ ದೇವರು‌ ನೀಡಿದ ಉಡುಗೊರೆ‌. ಇವೆಲ್ಲವೂ ಮೇಳೈಸಿ ಮೂಡಿ ಬಂದ ಛಾಯಾಚಿತ್ರವು ಕಲಾವಿದರಿಗೆ, ಮಕ್ಕಳನ್ನು ಪ್ರೀತಿಸುವವರಿಗೆ, ಕೃಷ್ಣನನ್ನು ಆರಾಧಿಸುವವರಿಗೆ , ಛಾಯಾಗ್ರಹಣವನ್ನು ಗೌರವಿಸುವವರಿಗೆ ವಿಶೇಷ ಔತಣವಿದ್ದಂತೆ. ಒಂದೂವರೆ ವರುಷದ ಮಗುವಾಗಿದ್ದಾಗಲೇ ಕೃಷ್ಣನ ವೇಷ ತೊಟ್ಟು, ಛಾಯಾಗ್ರಹಣಕ್ಕೆ ಮೊಗವೊಡ್ಡಿ ಸುಂದರ ಛಾಯಂಕನದ ಮೂಲಕ ಎಲ್ಲರ ಮನಸೆಳೆದ ಈ ಪುಟ್ಟ ಪೋರಿ ಹಿರಣ್ಮಯಿಗೆ ನಿಮ್ಮೆಲ್ಲರ ಆಶೀರ್ವಾದವಿರಲಿ. 
                                             -**********************-
~ ಸುಮಾರು ಇಪ್ಪತ್ತು ವರುಷಗಳಿಂದ ಉಡುಪಿಯ ಹೃದಯಭಾಗದಲ್ಲಿ ಸ್ಟುಡಿಯೋ ನಡೆಸಿಕೊಂಡು ಬರುತ್ತಿರುವ  ನನಗೆ ಪುಟ್ಟ ಮಕ್ಕಳ ಫೋಟೋ ತೆಗೆಯುವುದಂದರೆ ತುಂಬ ಖುಷಿ. ಅದು ಒಂಥರಾ ಸವಾಲು ಕೂಡಾ. ಅದರಲ್ಲೂ  ಆ ಮಕ್ಕಳ ಛಾಯಾಚಿತ್ರಗಳು ಬಹುಮಾನ ಪಡೆದಾಗಲಂತೂ ಬಹಳ ಸಂತಸ. ಈ ಮಗು ಹಿರಣ್ಮಯೀ ತನ್ನ ಅಮ್ಮನ ಉತ್ಸಾಹ ಕ್ಕೆ ಪೂರಕವಾಗಿ ಸ್ಪಂದಿಸುತ್ತಾ, ಇನ್ನಷ್ಟು ಮತ್ತಷ್ಟು ಫೋಟೋ ತೆಗೆಯಲು ಮುಖ ಒಡ್ಡಿ ನಿಲ್ಲುತ್ತಿತ್ತು. ಮುದ್ದುಮೊಗದ ಮುಗ್ಧ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವುದು
ನಮಗೂ ಖುಷಿಯ ವಿಷಯ. ~ ಧನಂಜಯ ಕುಮಾರ್, ಅಂಕಿತಾ ಸ್ಟುಡಿಯೋ, ಉಡುಪಿ.
 
 
 
 
 
 
 
 
 
 
 

Leave a Reply