ಬಣ್ಣಗಳ ಜೊತೆಗೆ ಬದುಕನ್ನು ಕಟ್ಟಿ ಕೊಳ್ಳಲು ಹೊರಟ ಬಡ ಕಲಾವಿದರ ಬವಣೆಗಳು~ ತಿಪಟೂರು ಕೃಷ್ಣ  

ನಮ್ಮೊಳಗೆ ಸುಪ್ತವಾಗಿರುವ ಕಲಾ ಪ್ರತಿಭೆಯನ್ನು ನಾವು ಬಾಲ್ಯದಲ್ಲೇ ಬಣ್ಣಗಳ ಚೆಲ್ಲುತ್ತಾ, ಆಟ ಆಡುತ್ತಾ ಖುಷಿ ಪಡುತ್ರಿದ್ದೇವು. ಏನೋ ಮಾಡಲು ಹೋಗಿ ಅದು ಏನೋ ಆದಾಗ ಅದರ ಚಿತ್ತಾರಕ್ಕೆ ನೆಗೆದು ನಲಿಯುತ್ತಿದ್ದೇವು. ನಾವು ಬಿಡಿಸಿದ ಬಣ್ಣದ ಚಿತ್ರ ನಮಗೆ ಹೆಮ್ಮೆ ಎನುಸುತ್ತಿತ್ತು. ಅದೇನೋ ಆತ್ಮಾನಂದ ನೀಡುತ್ತಿತ್ತು.
ಆ ಹವ್ಯಾಸ ಮುಂದುವರೆದಂತೆ ಪೆನ್ಸಿಲ್, ಪೆನ್ನು, ಬಣ್ಣದ ಕಡ್ಡಿಗಳ ಹಿಡಿದು ಪಠ್ಯದಲ್ಲಿ ಕಣ್ಣಿಗೆ ಆಕರ್ಷಕವಾಗಿ ಕಂಡ ಚಿತ್ರಗಳ ಬೆನ್ನೆತ್ತಿ, ನಮ್ಮ ಬಿಳಿ ಹಾಳೆಯ ಮೇಲೆ ಮೂಡಿಸಿ, ಹೆತ್ತವರಿಂದಲೋ, ಶಿಕ್ಷಕರಿಂದಲೋ ಮೆಚ್ಚಿಗೆ ಪಡೆಯದೇ ಹೋದರೆ ಮನಸ್ಸಿಗೆ ಸಮಾಧಾನ ಇರುತ್ತಿರಲಿಲ್ಲ. 
ಕಲಿಯಲು ಡ್ರಾಯಿಂಗ್ ಶೀಟ್ ಸಿಗದೇ ಹೋದಾಗ ಎಷ್ಟೋ ಬಿಳಿ ಸುಣ್ಣದ ಗೋಡೆಗಳ ಮೇಲೆ ನಿಸರ್ಗದಲ್ಲಿ ಸಿಗುವ ಬೇಲಿಯ ಹೂವು, ಹಸಿರೆಲೆ, ಕೆಮಣ್ಣನ್ನೇ ಬಣ್ಣವಾಗಿಸಿ, ಹೂವು, ಬಳ್ಳಿ, ಗಿಳಿ, ನವಿಲು, ಸೂರ್ಯ, ಬೆಟ್ಟಗಳ ಸಾಲು ಸಾಲು ಚಿತ್ರಗಳು ಮೂಡಿ ಬರುತ್ತಿದ್ದವು, ಅವು ಮುಂದೆ ನಮ್ಮ ಹುಡುಗಾಟದ ಸಾಕ್ಷಿಯಾಗಿ ಎಷ್ಟೋ ವರ್ಷಗಳ ಕಾಲ ಅಣಕಿಸುತ್ತಿದ್ದವು. ಆ ಆನಂದ ಈಗ ಎಲ್ಲಿ ಮಾಯವಾಗಿದೆ ಎಂದು ಹುಡುಕಿದರೂ ಇಂದಿನ ತಂತ್ರಜ್ಙಾನದಲ್ಲಿ ಮಾಯೆಯಲ್ಲಿ ಸಿಗಲೊಲ್ಲದು.
ಅಂತಹ ಹವ್ಯಾಸಗಳ ಮೂಲಕ ಮನಸ್ಸನ್ನು ತುಂಬಿಕೊಂಡ ಕಲೆ ಕೊನೆಗೆ ಜೀವನಕ್ಕೂ ಆಧಾರವಾಗುವುದೊಂದು ವಿಶೇಷ. ಅವರವರ ಶಕ್ತಿ, ಸತತ ಪರಿಶ್ರಮ,  ಸಾಮಾರ್ಥ್ಯ, ಹಣಕಾಸು, ಪ್ರೋತ್ಸಾಹದಿಂದ ಅವರ ಯೋಗ್ಯತೆ ಗನುಸಾರ ಅವರ ಬದುಕು ಬಣ್ಣಗಳ ಒಳಗೆ  ಸಾಧಕನನ್ನು ಹೊರಗೆ ಅನುಭವಿಯನ್ನು ನಿಲ್ಲಿಸುವುದುಂಟು. ನಿರಂತರ ಕಲಿಕೆ, ಶ್ರಮದ ಮೂಲಕ ಪಕ್ವಗೊಂಡು ಮೇಲಕ್ಕೇರಿ ಎಂ ಎಫ್ ಹುಸೇನ್ ನಂತೆ
ಮಹಾಕಲಾವಿದನೂ ಆಗ ಬಹುದು ಅಥವಾ ದುರಾದುಷ್ಟವಶಾತ್ ಸಮಾಜದ ಕಟ್ಟ ಕಡೆಯಲ್ಲಿ ಬಡತನದ
ಬವಣೆಯಲ್ಲೂ ದಿನ ಎಣಿಸ ಬಹುದು.

ಆದರೂ ಬಣ್ಣದ ಬದುಕು ಒಂದು ವಿಸ್ಮಯ ಮತ್ತು ವಿಚಿತ್ರ ಪ್ರಪಂಚ. ತನಗೇ ತಾನೇ ಯೋಗಿಯಾಗಿ ಬಿಡುವ ಚಿತ್ರಕಲಾವಿದ ತನ್ನದೇ ಪ್ರಪಂಚದಿಂದ ಆಚೆ ಬರಲಾರ. ಯಾವ ಹಂಗಿಗೂ ಸಿಲುಕದೇ ಬಣ್ಣದೊಳಗೆ ಬದುಕು ಕಾಣುವ ಕಲಾವಿದನಿಗೆ ಕೊನೆಯ ಕ್ಷಣಗಳ ಅರಿವೇ ಇರೋದಿಲ್ಲ. 

ತಾನು ಬಿಡಿಸಿದ ಚಿತ್ರದ ಪ್ರಭಾವಕ್ಕೊಳಗಾಗಿ, ವಿಮರ್ಶಕನೂ ಆಗುವ ಆತ ತೃಪ್ತಭಾವದಿಂದ ತನ್ನೊಳಗೆ ಕಳೆದು ಹೋಗುತ್ತಾ ಹೊರ ಪ್ರಪಂಚದಿಂದ ಮುಕ್ತನಾಗಿ ಬದುಕಿ ಬಿಡುತ್ತಾನೆ. ಅಂತಹ ನಿರುಪದ್ರವಿಗಳ ಬದುಕು ಬಣ್ಣದ ಲೋಕದಲ್ಲಿ ಮಾಸಿ, ಮರೆಯಾಗುತ್ತಾ, ನಾನಾ ಸಂಕಟ, ನೋವಿನ ಜೊತೆ ಅನಾರೋಗ್ಯ, ಬಡತನ ಬಂದರೆ ಬೆಂದು ಹೋದ ಆತ, ತನ್ನ ಬವಣೆ ಬರೆಯುವ ಕಥೆಗಾರನಾಗಬಲ್ಲ.

ನಾನು ನೋಡುತ್ತಾ ಕಲಿಯುತ್ತಾ ಹೋದ ಅನೇಕ ವ್ಯಕ್ತಿಗಳಲ್ಲಿ ತಿಪಟೂರಿನ ಹೆಸರಾಂತ ಕಲಾವಿದರಾದ ಲಕ್ಷ್ಮೀ ಆಟ್ರ್ಸ್ ನ ಟಿ.ಆರ್. ಶಾಂತರಾಜು ( ನನ್ನ ಕಲಾ ಗುರುಗಳು) ವಿಜಯ ಆಟ್ರ್ಸ್ ನ ಯೋಗಾನಂದ, ಸುಂದರ ಆಟ್ರ್ಸ್ ನ ಸುಂದರ್, ಸೂರ್ಯ ಆಟ್ರ್ಸ್ ನ ಸೂರಿ, ಶ್ರೀ ಆಟ್ರ್ಸ್,  ಮತ್ತಿತರರ ಜೊತೆಗೆ ಅವತ್ರು ನನ್ನದು ಒಂದು ಶ್ರೀನಿವಾಸ ಆಟ್ರ್ಸ್ ಕೆಲಸ ಮಾಡುತಿತ್ತು.

ಇವತ್ತು ಅವರೆಲ್ಲಾ ಮರೆಯಾಗಿ ಹೋಗಿದ್ದು, ವಿಜಯ ಆಟ್ರ್ಸ್ ನ ಯೋಗಾನಂದ್ ಆ ಹಳೆಯ ನೆನಪಲ್ಲಿ ನಿಜ ಜೀವನದ ಬಡತನದ ನೋವನ್ನು ಅನುಭವಿಸುತ್ತಾ ಕಾಲ ಕಳೆಯುತ್ತಿದ್ದಾರೆ. ತಾವೇ ನಿರ್ಮಿಸಿಕೊಂಡ ಒಂದು ಚೌಕಟ್ಟಿನೊಳಗೆ ಸೀಮಿತ, ಸರಳ ಬದುಕನ್ನು ಕಟ್ಟಿಕೊಂಡು ಕನಸು ಕಾಣುತ್ತಿರುವ ಕಲಾವಿದರು ಅಸಂಖ್ಯಾತ. ಬಣ್ಣದ ಕಲಾವಿದರ ಕೊನೆಯ ಕಾಲದ ಬದುಕು ನಿಜಕ್ಕೂ ಬರ್ಬರ.

ಇವನ್ನೆಲ್ಲಾ ಮೀರಿ ಬಂದ ನಾನು ಕೊರೋನಾ ಸಮಯದಲ್ಲಿ ಬಡ ಕಲಾವಿದರ ಸ್ಥಿತಿಗತಿಯ ಬಗ್ಗೆ ತಿಳಿದು, ಒಂದಿಷ್ಟು ಸಹಾಯ ಮಾಡಲು ಹೋದಾಗ ತುಂಬಾ ನೋವಾಯಿತು. ಕಲೆಯ ಜೊತೆಗೆ ಬರಹ ಗೊತ್ತಿರುವ ನಾನು ಆ ಮೂಲಕ ನೊಂದ ಕಲಾವಿದರಿಗೆ ಒಂದಿಷ್ಟು ನ್ಯಾಯ ಒದಗಿಸುವ ಆಸೆಯೊಂದಿಗೆ ಈ ಅಕ್ಷರಗಳ ಮೊರೆ ಹೊಕ್ಕಿರುವೆ.

ಆಧುನಿಕ ಚಿತ್ತಾರಗಳಲ್ಲಿ ಪಾರಂಪರಿಕ ಕಲೆಗಳು ಕಳೆದು ಹೋಗಿವೆ, ಜೊತೆಗೆ ಆ ಕಲಾವಿದರೂ ಸಹ. ಅವರಲ್ಲಿ ನಾಮಫಲಕ ಕಲಾವಿದರೂ ಇದ್ದಾರೆ. ಯೋಗಾನಂದ್ ಅವರಲ್ಲಿ ಒಬ್ಬರು.
ಒಂದು ಕಾಲದಲ್ಲಿ ತಿಪಟೂರಿನ ಎಲ್ಲಾ ತರಹದ ಕಲಾವಿದರ ಜೊತೆಗೆ  ಹಾಗೂ ರಾಜಕೀಯ ನಾಯಕರೊಂದಿಗೆ ಒಡನಾಟ ಇಟ್ಟಯಕೊಂಡಿದ್ದು, ಸಮಾಜಕ್ಕೆ ಬಹು ಪರಿಚತರು ಎನಿಸಿಕೊಂಡಿದ್ದರು. ಇಬ್ಬರು ಮಕ್ಕಳು, ಹೆಂಡತಿಯೊಂದಿಗೆ ಕಲೆಯೇ ಜೀವನ ಎಂದು ಬದುಕುತ್ತಿದ್ದರು. ಸುಮಾರು ಐವತ್ತು ವರ್ಷಗಳ ಕಾಲ ಬಣ್ಣಗಳ ಜೊತೆಗೆ ಜೀವಿಸಿದರು. ಕಾಲ ಬದಲಾಯಿತು. ತಂತ್ರಜ್ಞಾನದ ಜೊತೆಗೆ ಪೈ ಪೋಟಿ ಕಷ್ಟವಾಯಿತು. ಜನ ಹೊಸದರತ್ತಾ ಆಕರ್ಷಿತರಾದರು. 
ಕಾರಣ, ಕೈಗೆ ಕೆಲಸ ಸಿಗದೇ ವರ್ಷಗಳು ಕಳೆದು ಹೋದವು‌. ಪ್ಲೆಕ್ಸ್‌ಗಳ ಅಬ್ಬರದಲ್ಲಿ ಲಕ್ಷಾಂತರ ಕಲಾವಿದರು ಬೀದಿ ಪಾಲಾದರು. ಅವರ ಬದುಕು ತರಗೆಲೆಯಂತೆ ಹೊಸತನದ ಗಾಳಿಯಲ್ಲಿ ಏರುಪೇರಾಯಿತು. ತುತ್ತು ಅನ್ನಕ್ಕೂ ತತ್ವಾರ ಉಂಟಾಯಿತು. ಜೊತೆಗೆ ಬಡತನ,  ಸಾಲ, ಅನಾರೋಗ್ಯ ಇವು ಬಣ್ಣದ ಬದಕನ್ನು ಜರ್ಜರಿತಗೊಳಿಸಿತು. ಅದರ ಯೋಗಾನಂದರಿಗೂ ತಟ್ಟಿತು. ಸಾಹುಕಾರರ ಕಾಯಿಲೆಗಳು ಬಂದೇರಗಿತು. ಬಲಗಾಲು ತುಂಡಾಯಿತು. ಇದ್ದ ಕಣ್ಣು ಕಾಣದಂತಾಯಿತು. 
ಇವು ಕಷ್ಟದ ಬದುಕಿಗೆ ಮತ್ತಷ್ಟು ಸಂಕಟ ತಂದವು. ಬಡತನ, ಹಸಿವು, ದಾಹ, ಅವಮಾನ ಅನುಭವಿಸಿದವರಿಗೆ ಗೊತ್ತು ಅವುಗಳ ತೀಕ್ಷ್ಣತೆ. ಕಡೆಯ ಮಗನಿಗೂ ಬ್ರಷ್ ಹಿಡಿಸಿ, ಬಣ್ಣದ ಪರಿಚಯ ಮಾಡಿಸಿದ ಪರಿಣಾಮ ವಾರಕ್ಕೊ, ತಿಂಗಳಿಗೋ ಸಿಗುವ ಒಂದು ಕೆಲಸದಿಂದ ಹೊಟ್ಟೆ ತುಂಬಿಸಿಕೊಳ್ಳುವ ಸ್ಥಿತಿ.
ನೂರು ಜನಕ್ಕೆ ಖುಷಿ, ಆನಂದ ಕೊಡುವ ಬಣ್ಣ ಆ ಕಲೆಗಾರನನ್ನು ಕಷ್ಡದೊಳಗೆ ನೂಕಿ, ಕಪ್ಪು ಬಣ್ಣದೊಳಗೆ ಮುಚ್ಚಿ ಬಿಡುತ್ತದೆ. ಈ ದುಸ್ಥಿತಿ ನೋಡಿ ಮನಕ್ಕೆ ತುಂಬಾ ನೋವಾಯಿತು. 68 ವರ್ಷದ ಯೋಗಾನಂದರ ಮನಸ್ಸು ಇನ್ನೂ ಅದೇ ಲವಲವಿಕೆಯಲ್ಲಿ, ಉತ್ಸಾಹದಲ್ಲಿದ್ಸರೂ ಅವರ ದೇಹ, ಕಣ್ಣು, ಕೈಗಳು ಸಾತ್ ನೀಡುತ್ತಿಲ್ಲ.
ಇಂತಹ ಅಮಾಯಕ ವ್ಯಕ್ತಿಗಳನ್ನು ಗುರ್ತಿಸಿ, ಒಂದಷ್ಟು ಸಹಾಯ ಹಸ್ತ ನೀಡಿದರೆ ಪುಣ್ಯ ಬರುತ್ತದೆ‌. ನಾನು ನಿಮ್ಮಲ್ಲಿ ಈ ಮೂಲಕ ವಿನಂತಿಸುವುದು ಏನೆಂದರೆ, ಎಷ್ಟು ಸಾಧ್ಯವೋ ಅಷ್ಟನ್ನು ಈ ಕುಟುಂಬಕ್ಕೆ ಸಹಾಯ ಮಾಡಿದಲ್ಲಿ ದೇವರು ಮೆಚ್ಚಿಯಾನು ಎಂದು ನಿರೀಕ್ಚಿಸಿದ್ದೇನೆ.. ಈಗಾಗಲೇ ರಾಜ್ಯ ನಾಮ ಫಲಕ ಕಲಾವಿದರ ಸಂಘ ದಿನಸಿ ಕಿಟ್ ನೀಡಿದೆ. ಕಿರುತೆರೆ ಕಲಾವಿದ ದಯಾನಂದ್ ಸಾಗರ ಆಗಾಗ ಬಂದು ಕೈಲಾದ ಸಹಾಯ ಮಾಡಿ ಹೋಗುತ್ತಾರೆ. 
ಶಿಲ್ಪಾ ಆಟ್ರ್ಸ್ ನ ಜೀತೇಂದ್ರ ಕುಮಾರ್ ಆರೋಗ್ಯ ವಿಚಾರಿಸಿ ಕಲಾವಿದರ ಮಾಸಾಶನಕ್ಕೆ ಪ್ರಯತ್ನಿಸುವೆ ಎಂದಿದ್ದಾರೆಂದು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಹೃದಯವಂತರು ಸಮಾಜದಲ್ಲಿದ್ದಾರೆ. ಅವರಿಗೆ ಸರಿಯಾದ ದಾರಿ ಸಿಗುತ್ತಿಲ್ಲವೆಂದು ನೊಂದು ನುಡಿಯುತ್ತಾರೆ. ಸಮಾಜದಲ್ಲಿ ಇಂತಹ ಅರ್ಹರನ್ನು ಗುರ್ತಿಸಿ, ಸಹಾಯ ಮಾಡಿ. ನಿಮ್ಮ ಬದುಕು ಬಂಗಾರವಾಗುತ್ತದೆ.
– ತಿಪಟೂರು ಕೃಷ್ಣ, ಪತ್ರಕರ್ತ, ಚಿಂತಕ.
 
 
 
 
 
 
 
 
 
 
 

Leave a Reply