ಕೃಷಿಕರಿಗೆ ಆಧುನಿಕ ತಂತ್ರಜ್ಞಾನದ ಜೊತೆಗೆ ವೈವಿಧ್ಯತೆಯ ಅರಿವು ಮೂಡಿಸುವಲ್ಲಿ ಕಿಸಾನ್‌ವಾಣಿ ಕಾರ್ಯಕ್ರಮ ಪೂರಕ -ಟಿ.ಶ್ಯಾಮ್‌ಪ್ರಸಾದ್

ಶಿರ್ವ:-ಮಂಗಳೂರು ಆಕಾಶವಾಣಿಯಲ್ಲಿ ಪ್ರತೀದಿನ ಪ್ರಸಾರವಾಗುವ  ಕೃಷಿರಂಗ (ಕಿಸಾನ್ ವಾಣಿ) ಕಾರ್ಯಕ್ರಮ ಕಾಸರಗೋಡು,ದ.ಕ ಮತ್ತು ಉಡುಪಿ ಜಿಲ್ಲೆಗಳ ಕೃಷಿಕರಿಗೆ ಸಕಾಲಿಕ ಮಾಹಿತಿಯೊಂದಿಗೆ ಪ್ರಗತಿಪರ, ಪರಿಣಿತ ಕೃಷಿಕ್ಷೇತ್ರದ ಸಾಧಕರು, ಮತ್ತು ಅವರ  ಯಶಸ್ವಿ ವಿನೂತನ ಆವಿಷ್ಕಾರಗಳ ಬಗ್ಗೆ ಸಂದರ್ಶನದ ಮೂಲಕ ನೀಡುತ್ತಿರುವ ಮಾಹಿತಿಯಿಂದ ತಮ್ಮ ಕೃಷಿಕ್ಷೇತ್ರದಲ್ಲಿ  ಪರಿವರ್ತನೆ ತರಲು ಸಾಧ್ಯವಾಗಿದೆ. 
ಕೃಷಿಕರಿಗೆ ಆಧುನಿಕ ತಂತ್ರಜ್ಞಾನದ ಜೊತೆಗೆ ವೈವಿಧ್ಯತೆಯ ಅರಿವು ಮೂಡಿಸುವಲ್ಲಿ ಕಿಸಾನ್‌ವಾಣಿ ಕಾರ್ಯಕ್ರಮ ಪೂರಕವಾಗಿದೆ ಎಂದು ಮಂಗಳೂರು ಆಕಾಶವಾಣಿಯ  ಕಿಸಾನ್‌ವಾಣಿ ಕಾರ್ಯ ಕ್ರಮ ನಿರ್ವಹಣಾಧಿಕಾರಿ ಟಿ.ಶ್ಯಾಮ್‌ಪ್ರಸಾದ್ ನುಡಿದರು.
 
 ಅವರು ಮಂಗಳವಾರ ಬಂಟಕಲ್ಲು ರೋಟರಿ ಸಭಾಭವನದಲ್ಲಿ ಕಾಪು ತಾಲೂಕು ವ್ಯಾಪ್ತಿಯ ಕೃಷಿ ಹಾಗೂ ಪೂರಕ ಚಟುವಟಿಕೆಗಳಲ್ಲಿ ವಿಶಿಷ್ಠ ಸಾಧನೆ ಮಾಡುತ್ತಿರುವ ಸಾಧಕರ ಅನುಭವ ಧ್ವನಿ ಮುದ್ರಣ ಕಾರ್ಯಕ್ರಮಕ್ಕೆ  ಚಾಲನೆ ನೀಡಿ ಮಾತನಾಡುತ್ತಾ, ಕಿಸಾನ್‌ವಾಣಿ ಕಾರ್ಯಕ್ರಮದಲ್ಲಿ ಪ್ರತೀದಿನ ಬೆಳಿಗ್ಗೆ ಪೋನ್‌ಔಟ್ ರೆಕಾರ್ಡಿಂಗ್ ಮೂಲಕ ಸಂದರ್ಶನ, ಸಾವಯವ ಮಾತುಕತೆ, ಅಡಿಕೆ ಕೃಷಿಯ ಬಗ್ಗೆ ೧೫ದಿನಗಳ ಸರಣಿ ಕಾರ್ಯಕ್ರಮ, ಸ್ವಾತಂತ್ಯ  ಅಮೃತಮಹೋತ್ಸವ ಸಂದರ್ಭದಲ್ಲಿ ಆ. ೧೬ರಿಂದ ೨೦೨೨ ಆ.೧೪ರ ವರೆಗೆ ವರ್ಷಪೂರ್ತಿ ಭಾರತೀಯ ಅಂಚೆ ಇಲಾಖೆ ಪ್ರಾಯೋಜಿತ ಸರಣಿ ಕಾರ್ಯಕ್ರಮಗಳು ವಿಶೇಷವಾಗಿ ಪ್ರಸಾರವಾಗಲಿವೆ ಎಂದರು.

ಶಿರ್ವ ರೋಟರಿ ಸಹಭಾಗಿತ್ವದಲ್ಲಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕಾರ್ಯ ದರ್ಶಿ ಜಿನೇಶ್ ಬಲ್ಲಾಳ್ ವಹಿಸಿದ್ದರು. ಕೃಷಿ ಅನುವುಗಾರ, ಪ್ರಗತಿಪರ ಕೃಷಿಕ ರಾಘವೇಂದ್ರ ನಾಯಕ್ ಶಿರ್ವ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.  ಯಂತ್ರದ ಮೂಲಕ ತೆಂಗಿನ ಮರವೇರುವ ಕಾಯಕಯೋಗಿ ಪ್ರಾಣೇಶ್ ಹೆಜಮಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾರಸಿಕೃಷಿ ಕೈತೋಟ ಪ್ರವೀಣೆ ಸಂಧ್ಯಾ ಜಿ,ಇಂದ್ರಾಳಿ,  ಹಸಿಕಸವನ್ನು ಸಾವಯವವಾಗಿ ಪರಿವರ್ತಿಸುವ ಸಾಧಕ ಭಾಸ್ಕರ ಶೆಟ್ಟಿ ಹೆಜಮಾಡಿ,  ಭತ್ತದ ಕೃಷಿಯ ಪ್ರಗತಿಪರ ರೈತ ನಿತ್ಯಾ ನಂದ ನಾಯಕ್ ಪಾಲಮೆ,  ಕೋಳಿ ಸಾಕಣೆಯಿಂದ ಸ್ವಾವಲಂಬನೆ ಸಾಧಿಸಿದ ಡೆಸ್ಮಾಂಡ್ ಆಲ್ಬನ್ ಫೆರಾವೊ ಶಿರ್ವ, ತಿಲಪಿಯ ಮೀನುಸಾಕಣೆ (ಸಾವಯವ ಮಾದರಿ) ಸ್ಕೈ ಅರ್ಗಾನಿಕ್ ಫಿಶ್ ಪಾರ್ಮ್ನ ಶೇಖ್ ಖಾಲಿದ್ ತೆಂಕ ಎರ್ಮಾಳ್, ಮರದ ಸ್ನೇಹಿತರು ಪ್ರಾಣೇಶ್ ಹೆಜ್ಮಾಡಿ, ಮಳೆಗಾಲದ ತರಕಾರಿಗಳ ಬಗ್ಗೆ ರಾಘವೇಂದ್ರ ನಾಯಕ್ ಶಿರ್ವ ಇವರ ಕೃಷಿ ಹಾಗೂ ಪೂರಕ ಸಾಧನೆಗಳ ಧ್ವನಿಮುದ್ರಣ ಮಾಡಲಾಯಿತು.

 
 
 
 
 
 
 
 
 
 
 

Leave a Reply