ಬಂಟಕಲ್ಲು – “ಕೊಂಕಣಿ ಮಾನ್ಯತಾ ದಿವಸ್” ಆಚರಣೆ 

 ಸಾರಸ್ವತ್ ಸಂದೇಶ್ ಸಂಪಾದಕ ಎಸ್.ಗೋಪಾಲಕೃಷ್ಣ ನಾಯಕ್‌ಗೆ “ಕೊಂಕಣಿ ಮಾನ್ಯತಾ ಪುರಸ್ಕಾರ್” ಪ್ರದಾನ

ಶಿರ್ವ:-ಕೊಂಕಣಿ ಭಾಷೆಗೆ ರಾಷ್ಟ್ರೀಯ ಭಾಷಾ ಮಾನ್ಯತೆ ಇರುವುದರಿಂದ ಆ ಭಾಷೆಯಲ್ಲಿ ಹೆಚ್ಚಿನ ಸಾಧನೆ ಮಾಡಲು ಅವಕಾಶವಿದೆ. ಕೊಂಕಣಿ ಭಾಷೆಗೆ ಪುರಾತನ ಸಾಂಸ್ಕೃತಿಕ ಹಿನ್ನೆಲೆ, ಸಂಸ್ಕಾರ, ಸಂಸ್ಕತಿಯ ತಳಹದಿ ಇದೆ.

1992 ಅಗಸ್ಟ್ 20ರಂದು ಭಾರತದ ಸಂವಿಧಾನದ 8ನೇ ಪರಿಶ್ಚೇದಕ್ಕೆ ಅಧಿಕೃತವಾಗಿ ದಾಖಲಾದ ದಿನ ಸಮಸ್ತ ಕೊಂಕಣಿ ಭಾಷಿಕರಿಗೆ ಹೆಮ್ಮೆಯ ದಿನವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ ಪೂರ್ಣಿಮಾ ಸುರೇಶ್ ನುಡಿದರು.

   ಅವರು ಶುಕ್ರವಾರ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಸಭಾಂಗಣದಲ್ಲಿ ರಾಜಾಪುರ ಸಾರಸ್ವತ ಯುವೃಂದದ ವತಿಯಿಂದ ಏರ್ಪಡಿಸಿದ “ಕೊಂಕಣಿ ಮಾನ್ಯತಾ ದಿನಾ ಚರಣೆ” ಕಾರ್ಯಕ್ರವನ್ನು ಜ್ಯೋತಿ ಪ್ರಜ್ವಲನದ ಮೂಲಕ ಉದ್ಘಾಟಿಸಿ ಮಾತನಾಡಿದರು.  

ಈ ಸಂದರ್ಭದಲ್ಲಿ ಕಳೆದ 42ವರ್ಷಗಳಿಂದ ಆರ್‌ಎಸ್‌ಬಿ ಕೊಂಕಣಿ ತ್ರೆಮಾಸಿಕ ಪತ್ರಿಕೆ “ಸಾರಸ್ವತ್ ಸಂದೇಶ್” ಇದರ ಗೌರವ ಸಂಪಾದಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಣಿಪಾಲ ಸಮೀಪದ ಸರಳೇಬೆಟ್ಟು ಗೋಪಾಲಕೃಷ್ಣ ನಾಯಕ್‌ರವರಿಗೆ ” ಕೊಂಕಣಿ ಮಾನ್ಯತಾ ಪುರಸ್ಕಾರ್” ನೀಡಿ ಗೌರವಿಸಲಾಯಿತು.
 
ಮಂಗಳೂರು ವಿಶ್ವವಿದ್ಯಾನಿಲಯ ಕೊಂಕಣಿ ಅಧ್ಯಯನ ಪೀಠದ ಸದಸ್ಯ ಬಿ.ಪುಂಡಲೀಕ ಮರಾಠೆ ಮಾತನಾಡಿ ಭಾರತದ  ಪಶ್ಚಿಮ ಕರಾವಳಿಯ ಗುಜರಾತ್, ಮಹಾರಾಷ್ಟ್ರ  ಗೋವಾ, ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಕರಾವಳಿ ಭಾಗದ ಹಿಂದು, ಮುಸ್ಲಿಮ್, ಕ್ರೈಸ್ತರಾದಿಯಾಗಿ 42 ಸಮುದಾಯ ದವರ  ಮಾತೃಭಾಷೆ ಕೊಂಕಣಿಯಾಗಿದ್ದು, ಅಲ್ಲದೆ ಗೋವಾದ ರಾಜ್ಯಭಾಷೆ ಯಾಗಿಯೂ ಮಾನ್ಯತೆಗಳಿಸಿದೆ.

ಈ ಭಾಷೆಯ ಸಂಸ್ಕೃತಿ, ಜಾನಪದ ಪರಂಪರೆ, ಇತಿಹಾಸ, ಸಾಧನೆಗಳ ಬೆಳವಣಿಗೆ ಹಾಗೂ  ಸಂರಕ್ಷಣೆಗಾಗಿ  ಕರ್ನಾಟಕ ಸರಕಾರ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಂಗಳೂರು ವಿ.ವಿಯಲ್ಲಿ ಕೊಂಕಣಿ ಅಧ್ಯಯನಪೀಠ ಸ್ಥಾಪಿಸಿ ಈ ಭಾಷೆಯ ಸರ್ವಾಂಗೀಣ ಬೆಳವಣಿಗೆ ವೇದಿಕೆಯನ್ನು ರೂಪಿಸಿದೆ  ಎಂದರು.

 ಸಮಾರಂಭದ ಅಧ್ಯಕ್ಷತೆಯನ್ನು ಯುವವೃಂದದ ಗೌರವ ಅಧ್ಯಕ್ಷ ಹಾಗೂ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಆರ್.ಪಾಟ್ಕರ್ ವಹಿಸಿ ಮಾತನಾಡುತ್ತಾ ಈ ದಿನವನ್ನು ಯುವವೃಂದದ ಮೂಲಕ ಪ್ರತೀ ವರ್ಷ ಆಚರಿಸಲಾಗುತ್ತಿದ್ದು ಸಮಾಜದ ವಿವಿಧ ಪ್ರದೇಶಗಳಲ್ಲಿರುವ ಸಮಾಜದ ಸಂಘಟನೆಗಳೂ ಮಾನ್ಯತಾ ದಿನಾಚರಣೆ ಆಚರಿಸುವ ಮೂಲಕ ಮಾತೃಭಾಷೆ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದರು.  

ಶ್ರೀದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು ಶುಭ ಹಾರೈಸಿದರು. ಯುವೃಂದದ ಅಧ್ಯಕ್ಷೆ ಶ್ರಾವ್ಯಾ ಪಾಟ್ಕರ್ ಸ್ವಾಗತಿಸಿದರು. ಕಾರ್ಯದರ್ಶಿ ಸುಮಲತಾ ಪಾಟ್ಕರ್ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಶ್ರೀದುರ್ಗಾ ಮಹಿಳಾ ವೃಂದದ ಅಧ್ಯಕ್ಷೆ ಶೋಭಾ ಪಾಟ್ಕರ್, ಶ್ರೀದುರ್ಗಾ ಮಹಿಳಾ ಚಂಡೆಬಳಗದ ಅಧ್ಯಕ್ಷೆ ಗೀತಾ ವಾಗ್ಲೆ, ಎಳ್ಳಾರೆ ಪಾಂಡುರOಗ ಕಾಮತ್,  ಸಮಾಜಭಾಂದವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
  
 
 
 
 
 
 
 
 
 
 
 

Leave a Reply