ನಾರಾಯಣ ಗುರುಗಳ ಸ್ಥಬ್ದ ಚಿತ್ರಕ್ಕೆ ಅವಕಾಶ ನಿರಾಕರಣೆ ಮಾಡಿರುವುದು ಗುರು ಪರಂಪರೆಗೆ ಅವಮಾನ: ಗೀತಾ ವಾಗ್ಳೆ  

ಉಡುಪಿ : ಒಂದೇ ಜಾತಿ,ಒಂದೇ ಮತ,ಒಬ್ಬನೇ ದೇವರು ಎಂಬ ತತ್ತ್ವದಡಿಯಲ್ಲಿ ಸಮಾಜದಲ್ಲಿ ಅತ್ಯಂತ ಹಿಂದುಳಿದಿದ್ದ ಜನಾಂಗವೊಂದನ್ನು ಬಲಯುತವಾಗಿ ಸಂಘಟಿಸಿ,ಆ ಸಮುದಾಯವನ್ನು ಇಡೀ ಜಗತ್ತೇ ಮೂಗಿನ ಮೇಲೆ ಬೆರಳಿಡುವಂತೆ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಹಾಗೂ ಆರ್ಥಿಕವಾಗಿ ಮುನ್ನಡೆಯುವಲ್ಲಿ ಪ್ರೇರಣಾಶಕ್ತಿಯಾಗಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತಾದ ಸ್ಥಬ್ದ ಚಿತ್ರದ ಪ್ರದರ್ಶನಕ್ಕೆ ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಅವಕಾಶ ನೀಡದಿರುವ ಕೇಂದ್ರ ಸರ್ಕಾರದ ನಿರ್ಧಾರ ನಿಜಕ್ಕೂ ಖಂಡನೀಯ”ಎಂಬುದಾಗಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಹೇಳಿದ್ದಾರೆ.

ಯುಗಪುರುಷ ಶ್ರೀ ನಾರಾಯಣ ಗುರುಗಳ ಜನ್ಮಸ್ಥಳ ಕೇರಳ ರಾಜ್ಯದಲ್ಲಿದ್ದು ಅವರ ಕುರಿತಾದ ಸ್ಥಬ್ದ ಚಿತ್ರವನ್ನು ಗಣರಾಜ್ಯೋತ್ಸವದ ಪೆರೇಡ್ ಗಾಗಿ ಕೇರಳ ಸರ್ಕಾರವು ತಯಾರಿಸಿದ್ದಕ್ಕಾಗಿ ನಾವೆಲ್ಲರೂ ಹೆಮ್ಮೆಯಿಂದ ಅಭಿನಂದಿಸಬೇಕು. ಆದರೆ ಕೇಂದ್ರ ಸರ್ಕಾರವು ಕೇರಳ ರಾಜ್ಯದ ಬಗ್ಗೆ ಯಾವತ್ತಿನಂತೇ ಮಲತಾಯಿ ಧೋರಣೆಯನ್ನು ತಾಳುವುದರ ಜೊತೆಗೇ ಬಿಲ್ಲವ ಸಮುದಾಯದ ಬಗ್ಗೆಯೂ ನಿರ್ಲಕ್ಷ್ಯ ತಳೆದಂತಿದೆ.ನಾರಾಯಣ ಗುರುಗಳು “ವಿದ್ಯೆಯಿಂದ ಬಲಯುತರಾಗಿರಿ “ಎಂಬ ಧ್ಯೇಯ ವಾಕ್ಯದೊಂದಿಗೆ ಶಿಕ್ಷಣಕ್ಕೆ ಹಾಗೂ ಸಂಘಟನೆಗೆ ನೀಡಿರುವ ಮಹತ್ವದಿಂದ ಕೇವಲ ಬಿಲ್ಲವ ಸಮುದಾಯದ ಜನರಿಗೆ ಮಾತ್ರವಲ್ಲ ಇಡೀ ಸಮಾಜಕ್ಕೇ ಪ್ರಯೋಜನವಾಗಿದೆ.

ಹಾಗಾಗಿ ಅವರು ಇಡೀ ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋದಂತಹ ಮಾರ್ಗದರ್ಶಕರಾಗಿ ಜನಪ್ರಿಯರಾದವರು. ಹೀಗಿರುವಾಗ ಅಂತಹಾ ಶ್ರೇಷ್ಠ ಗುರುಗಳ ಸ್ತಬ್ಧ ಚಿತ್ರವನ್ನು ಪ್ರದರ್ಶನಕ್ಕೆ ನಿರಾಕರಿಸಿರುವುದನ್ನು ಎಲ್ಲರೂ ಪ್ರತಿಭಟಿಸಬೇಕು.ಬಿಲ್ಲವ ಸಮುದಾಯದ ಹಲವಾರು ಮಂತ್ರಿಗಳು, ಶಾಸಕರು, ಎಲ್ಲಾ ಸಂಸದರಿದ್ದು, ಇದನ್ನು ವಿರೋಧಿಸುವುದನ್ನು ವಿರೋಧಿಸದೇ ಕೇಂದ್ರದ ಈ ಕ್ರಮವನ್ನು ವಿರೋಧಿಸಲಿ.

ಇನ್ನೂ ಕಾಲ ಮಿಂಚಿಲ್ಲ.ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಒತ್ತಾಯಿಸುವುದರೊಂದಿಗೇ ಈ ವರ್ಷವೇ ಅದು ಪ್ರದರ್ಶನ ಕಾಣುವಂತೆ ಮಾಡುವುದರ ಮೂಲಕ ತಾವು ನಿಜವಾದ ಜನ ಪ್ರತಿನಿಧಿಗಳೆನ್ನುವುದನ್ನು ತೋರಿಸಿಕೊಡಲಿ ಎಂದು ಗೀತಾ ವಾಗ್ಳೆ ಹೇಳಿದ್ದಾರೆ .

 
 
 
 
 
 
 
 
 
 
 

Leave a Reply