Janardhan Kodavoor/ Team KaravaliXpress
26.6 C
Udupi
Monday, January 30, 2023
Sathyanatha Stores Brahmavara

ಗಾಯನ ನಿಲ್ಲಿಸಿದ ಗಾನ ಕೋಗಿಲೆ ಚಂದ್ರ ಶೇಖರ್ ಕೆದ್ಲಾಯ

ಗಾಯನ ನಿಲ್ಲಿಸಿದ ಗಾನ ಕೋಗಿಲೆ ಚಂದ್ರ ಶೇಖರ್ ಕೆದ್ಲಾಯ (72) ಇನ್ನಿಲ್ಲ 
ಚಂದ್ರಶೇಖರ ಕೆದ್ಲಾಯ ಅವರು ನನಗೆ ಕಂಡದ್ದು ಶತಾವಧಾನಿ ಗಣೇಶರ ಶತಾವಧಾನ ಕಾರ್ಯಕ್ರಮದ ಗಮಕ ವಾಚನದಲ್ಲಿ. ಓಹ್, ಅದನ್ನು ವಿಡಿಯೋ ತುಣುಕುಗಳಲ್ಲಿ ಕಾಣುವುದು ಕೂಡಾ ರೋಮಾಂಚನಕಾರಿ ಅನುಭಾವ ತರುವಂತದ್ದು. ಇಂಥಹ ಮಹಾನ್ ಕಲಾವಿದನ ವಿರಾಟ್ ಪ್ರತಿಭಾದರ್ಶನ ಬಹಳಷ್ಟು ಜನರಿಗೆ ತಿಳಿದಿರಲಿಲ್ಲ ಎಂಬುದು ಸುಳ್ಳಲ್ಲ.  ಮಹಾನ್ ಪ್ರತಿಭೆಗಳೇ ಹೇಗೆ.  ಅದು ಎಲ್ಲೋ ಅಜ್ಞಾತದಲ್ಲಿದ್ದರೂ ಕಾಲಕೂಡಿಬಂದಾಗ ಎಲ್ಲೆಡೆ ಬೆಳಕು ಚೆಲ್ಲುತ್ತಾ ಭಾಗ್ಯವಿದ್ದ ಹೃದಯಗಳಿಗೆ ಅಮೃತ ಸಿಂಚನ ತಂದುಬಿಡುತ್ತವೆ.  

ಹಾರ್ಯಾಡಿ ಚಂದ್ರಶೇಖರ ಕೆದ್ಲಾಯ ಅವರೊಬ್ಬ ಅಮೋಘ ಪ್ರತಿಭೆ. ಇವರು ನಿವೃತ್ತ ಶಿಕ್ಷಕರಾಗಿ, ಕನ್ನಡ ನಾಡು ಕಂಡ ಶ್ರೇಷ್ಟ ಗಮಕಿಗಳಾಗಿ, ಮಹಾನ್ ಸುಗಮ ಸಂಗೀತ ಗಾಯಕರಾಗಿ, ಕಲಾ ತರಬೇತುದಾರರಾಗಿ, ನೃತ್ಯ ರೂಪಕ-ನಾಟಕಗಳ ಸಂಗೀತ ಸಂಯೋಜಕರಾಗಿ, ರಚನಕಾರರಾಗಿ, ನಿರ್ದೇಶಕರಾಗಿ ಮಹತ್ವದ ಕೊಡುಗೆ ನೀಡುತ್ತಾ ಬಂದಿದ್ದಾರೆ.  ಬಹುಶಃ ಅವರು ತಮ್ಮ ಕಲೆಯನ್ನು ಆತ್ಮಸಂತೋಷದತ್ತ ಹೆಚ್ಚು ಹರಿಸಿ, ಅದನ್ನು ವಾಣಿಜ್ಯದ ಲಾಭದತ್ತ ಬಳಸುವುದರತ್ತ ಹೆಚ್ಚು ಗಮನಹರಿಸದೆ ಇರುವವರು.

ಚಂದ್ರಶೇಖರ ಕೆದ್ಲಾಯ 1950ರ ಏಪ್ರಿಲ್ 23ರಂದು ಜನಿಸಿದರು.  ಶಾಲೆಯಲ್ಲಿ ಅವರ ಜನ್ಮದಿನ 1951ರ ಅಕ್ಟೋಬರ್ 13 ಎಂದು ದಾಖಲಾಗಿದೆ.  ಅವರ ಹುಟ್ಟೂರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಸ್ಕುತ್ತೂರು ಗ್ರಾಮದ ಹಾರ್ಯಾಡಿ.   ತಂದೆ ಗಣಪಯ್ಯ ಕೆದ್ಲಾಯ. ತಾಯಿ ಕಮಲಮ್ಮ.  ತಂದೆ ಗಣಪಯ್ಯ ನವರು ಕೃಷಿಕರಾಗಿ, ಜೊತೆಗೆ ಜೀವನದ ಸಾಗಣೆಯ ಅವಶ್ಯಕತೆಗಾಗಿ ರುಚಿ ರುಚಿಯಾದ ಅಡುಗೆ ಮಾಡುವ ಪಾಕ ಪ್ರವೀಣರಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಸರಾಗಿದ್ದವರು.  ತಾಯಿ ಕಮಲಮ್ಮ ತುಂಬು ಸಂಸಾರ ವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದವರು.  ಈ ದಂಪತಿಗಳಿಗೆ ಮೂರು ಪುತ್ರರು ಮತ್ತು ಒಬ್ಬ ಪುತ್ರಿ.  ಇವರ ಮನೆಗೆ ಪಟೇಲರು, ಶಾನುಭೋಗರು, ಬೇರೆ ಭೂಮಾಲೀಕರು ಬರುತ್ತಿದ್ದರು.  

ಇವರ ಮನೆ ಚಾವಡಿಯಂತಿತ್ತು.  ತಾಯಿ ಕಮಲಮ್ಮ ಬಂದವರಿಗೆಲ್ಲ ಊಟ ಹಾಕುತ್ತಿದ್ದರು.  “ನಮ್ಮ ಮಾಣಿಗೆ ಶಾಲೆ ಇಲ್ಲ ಮಾರಾಯರೇ. ದೂರ ಕಳಿಸುವುದಕ್ಕೆ ಕಾಡಿನ ಭಯ. ನೀವೆಲ್ಲಾ ಮನಸ್ಸು ಮಾಡಿ ಶಾಲೆ ತೆರೆದರೆ ಒಳ್ಳೆಯದು” ಎಂದು ಕಮಲಮ್ಮನವರು ಹೇಳಿದಾಗ ಚಂದ್ರಶೇಖರ ಕೆದ್ಲಾಯರಿಗಾಗಿ ಹರ್ಯಾಡಿಯಲ್ಲಿ ಶಾಲೆ ಆರಂಭಗೊಂಡಿಯೇ ಬಿಟ್ಟಿತು.

ಚಂದ್ರಶೇಖರ ಕೆದ್ಲಾಯ ಅವರ ಪ್ರಾರಂಭಿಕ ಶಾಲಾಭ್ಯಾಸ ಒಂದರಿಂದ 5ರವರೆಗೆ ಹಾರ್ಯಾಡಿಯಲ್ಲಿ, ಮುಂದೆ ಎರಡು ವರ್ಷ ಸಾಯಿಬ್ರಕಟ್ಟೆಯಲ್ಲಿ ನಡೆಯಿತು.  ಮುಂದೆ ಕೋಟೇಶ್ವರ ನಾರಾಯಣ ಭಟ್ಟರೆಂಬುವರ ಆಶ್ರಯ ದಿಂದ ಕೋಟೇಶ್ವರದ ಹೈಸ್ಕೂಲಿನಲ್ಲಿ ಓದಿ, ಕುಂದಾಪುರ ಬೋರ್ಡ್ ಶಾಲೆಯಲ್ಲಿ ಪಿಯುಸಿ ಓದಿದರು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿ.ಎಸ್‍ಸಿಗೆ ಸೇರಿದರೂ ಸ್ನೇಹಿತರ ಒತ್ತಾಸೆಯಿಂದ ಕನ್ನಡ ಮೇಜರ್ ಬಿ.ಎ. ಮುಗಿಸಿದರು. ಹಂಗಾರಕಟ್ಟೆಯಲ್ಲಿ ಚೇತನಾ ಪ್ರೌಢಶಾಲೆಯಲ್ಲಿ ಒಂದು ವರ್ಷ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದರು. ಹಂಗಾರಕಟ್ಟೆಯ ಮಂಜುನಾಥ್ ನಾಯಕ್ ಅವರ ಸಹಕಾರ ಬೆಂಬಲದಿಂದ ಉಡುಪಿ ಟಿ.ಎಂ. ಎ.ಪೈ. ಶಿಕ್ಷಣ ಮಹಾವಿದ್ಯಾಲಯ ಸೇರಿ ಬಿ.ಎಡ್ ಮುಗಿಸಿದರು.

ಚಂದ್ರಶೇಖರ ಕೆದ್ಲಾಯ ಅವರು ಮಂಗಳೂರಿನ ಕೆನರಾ ಪ್ರೌಢ ಶಾಲೆಯಲ್ಲಿ ಒಂದೂವರೆ ವರ್ಷ (1975-1976) ಕೆಲಸ ಮಾಡಿ, ಮುಂದೆ 35 ವರ್ಷಗಳ (1976-2011) ಕಾಲ ಬ್ರಹ್ಮಾವರದ  ನಿರ್ಮಲಾ ಪ್ರೌಢ ಶಾಲೆಯಲ್ಲಿ  ಸೇವೆ ಸಲ್ಲಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ (1992-93), ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ (2008) ಯನ್ನು ಗಳಿಸಿದ ಕೀರ್ತಿಗೆ ಪಾತ್ರರಾದರು.

ಚಂದ್ರಶೇಖರ ಕೆದ್ಲಾಯ ಅವರು ತಮ್ಮ ಶಾಲಾ ದಿನಗಳಿಂದಲೂ ಹಾಡುವಿಕೆ ಮತ್ತು ನಾಟಕಗಳಲ್ಲಿ ಪಾಲ್ಗೊಳ್ಳುತ್ತ ಬಂದರು. ಮುಂದೆ ಸಂಗೀತ, ಗಮಕ, ನಾಟಕಗಳ ಸಂಗೀತ ನಿರ್ದೇಶನ, ನೃತ್ಯ ರೂಪಕಗಳ ನಿರ್ದೇಶನ ಹೀಗೆ ಅವರ ಕಲಾವ್ಯಾಪ್ತಿ ಪಸರಿಸುತ್ತಾ ಬಂತು.

ಚಂದ್ರಶೇಖರ ಕೆದ್ಲಾಯ ಅವರಲ್ಲಿ ಸಾಹಿತ್ಯ, ಸಂಗೀತ, ಸುಗಮ ಸಂಗೀತ, ಗಮಕ, ನಾಟಕ ಮುಂತಾದ ಕಲಾ ನೈಪುಣ್ಯತೆಗಳನ್ನು ಪೋಷಿಸಿದವರಲ್ಲಿ ಅನೇಕ ಗುರುವರ್ಯರಿದ್ದಾರೆ.   ಸಾಹಿತ್ಯದಲ್ಲಿ ಎಂ. ರಾಜ ಗೋಪಾಲಾ ಚಾರ್ಯ, ಎಂ. ಗೋಪಾಲಕೃಷ್ಣ ಅಡಿಗ, ರಾಮದಾಸ್, ನಾಗೇಶ್, ಸಿ. ಎಸ್. ಯಾದವಾಡ, ನಟರಾಜ ದೀಕ್ಷಿತ್ ಮೊದಲಾದವರು ಕೆದ್ಲಾಯರಿಗೆ ಗುರುಗಳು. ನಾಟಕಕ್ಕೆ ಉದ್ಯಾವರ ಮಾಧವ ಆಚಾರ್, ಆನಂದ ಗಾಣಿಗ, ವೈಕುಂಠ ಹೆಬ್ಬಾರ್, ಪ್ರೊ. ರಾಮದಾಸ್, ಪ್ರೊ. ಬಿ. ಆರ್. ನಾಗೇಶ್ ಮೊದಲಾದವರು ಗುರುಗಳು. 

ಸಂಗೀತಕ್ಕೆ ಉಡುಪಿ ನರಸಿಂಹ ದೇವಾಡಿಗ, ವಿದ್ವಾನ್ ರಂಗನಾಥ ಆಚಾರ್ಯ, ನೀಲಾವರ ರಾಮ ಶೆಟ್ಟಿಗಾರ್, ಉಡುಪಿ ವಾಸುದೇವ ಭಟ್ಟ, ಗೋಪಾಲಕೃಷ್ಣ ಅಯ್ಯರ್, ಮಂಗಳೂರು ಮೊದಲಾದವರು ಗುರುಗಳು. ಸುಗಮ ಸಂಗೀತಕ್ಕೆ ಕವಿ ಎಂ. ಗೋಪಾಲಕೃಷ್ಣ ಅಡಿಗ, ಶ್ರೀಕಾಂತ ಮೂರ್ತಿ ತೀರ್ಥಹಳ್ಳಿ ಇವರಿಂದ ನೇರ ಪ್ರೇರಣೆ ಒದಗಿತು. ಗಮಕಕ್ಕೆ ಮೈಸೂರು ರಾಘವೇಂದ್ರ ರಾಯರು, ನೀಲಾವರ ಲಕ್ಷ್ಮೀನಾರಾಯಣ ರಾವ್, ಮಟಪಾಡಿ ರಾಜಗೋಪಾಲಾಚಾರ್ಯ ಕೆದ್ಲಾಯರಿಗೆ ಗುರುಗಳು.

ಬಾಲಕ ಚಂದ್ರಶೇಖರ ಕೆದ್ಲಾಯರು ಕೋಟೇಶ್ವರದಲ್ಲಿ ಹೈಸ್ಕೂಲು ಓದುವಾಗ ಗೋಪಾಲಕೃಷ್ಣ ಅಡಿಗರು ಪ್ರಾಂಶುಪಾಲರಾಗಿದ್ದರು.   1969ರಲ್ಲಿ ಒಮ್ಮೆ ಪ್ರತಿಭಾ ಪ್ರದರ್ಶನದಲ್ಲಿ ಕೆದ್ಲಾಯ ಅವರು ‘ಮೋಹನ ಮುರಳಿ’ ಪದ್ಯವನ್ನು ಮೋಹನ ರಾಗದಲ್ಲಿ ಹಾಡಿದ್ದನ್ನು ಕೇಳಿದ ಅಡಿಗರಿಗೆ ಅದು ತುಂಬಾ ಸಂತಸ ತಂದು, ತಮ್ಮ “ಕಟ್ಟುವೆವು ನಾವು” ಸಂಕಲನ ಕೊಟ್ಟು “ಇದರಲ್ಲಿ ಇನ್ನೂ ಬೇರೆ ಹಾಡುಗಳಿವೆ. ಸಂಗೀತ ಕಲಿ, ಹಾಡಲು ಪ್ರಯತ್ನಿಸು” ಎಂದರು.  

ಹೀಗೆ ಅಡಿಗರ ಅನೇಕ ಕವನಗಳನ್ನು ಅವರ ಮುಂದೆಯೇ ಹಾಡಿ ಅವರಿಂದ ಸೈ ಅನ್ನಿಸಿಕೊಂಡವರು. ಮಾತ್ರವಲ್ಲದೆ ಗೋಪಾಲಕೃಷ್ಣ ಅಡಿಗರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಅವರ ಚುನಾವಣಾ ಪ್ರಚಾರದ ಸಭೆಗಳಲ್ಲಿ ಅವರ ಗೀತೆಗಳನ್ನು ಹಾಡಿ ಜನಮೆಚ್ಚುಗೆ ಪಡೆದರು.  ಸ್ವಯಂ ಅಟಲ್ ಬಿಹಾರಿ ವಾಜಪೇಯಿ ಸಂತಸಪಟ್ಟು ಬೆನ್ನುತಟ್ಟಿದರು.

ಸುಗಮ ಸಂಗೀತದಲ್ಲಿ ಚಂದ್ರಶೇಖರ ಕೆದ್ಲಾಯರು ಆಕಾಶವಾಣಿಯಲ್ಲಿ ’ಬಿ’ ಗ್ರೇಡ್ ಗಾಯಕರು. ದೂರದರ್ಶನ ದಲ್ಲಿ ಅವರ ಭಾವಗೀತೆಗಳ, ರಂಗಗೀತೆಗಳ ಅನೇಕ ಕಾರ್ಯಕ್ರಮಗಳು ಪ್ರಸಾರವಾಗಿವೆ. ರಾಜ್ಯದ ಪ್ರಮುಖ ನಗರಗಳು ಮಾತ್ರವಲ್ಲದೆ ದೆಹಲಿ, ಮುಂಬೈ, ಬರೋಡ, ನೋಯ್ಡಾ, ಕಾಸರಗೋಡು ಮೊದಲಾದೆಡೆ ಅವರು ಸುಗಮ ಸಂಗೀತದ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಚಂದ್ರಶೇಖರ ಕೆದ್ಲಾಯರ ಗೆಜ್ಜೆ ಮಾತಾಡುತ್ತಾವೊ, ಗುರು ಆರಾಧನಾ, ವೀರಭದ್ರ ಸ್ತುತಿ, ಗೀತ ಸಂಗಮ, ಜಿನಸ್ತುತಿ, ಬಪ್ಪನಾಡು ಸುಪ್ರಭಾತ ಮತ್ತು ಭಕ್ತಿಗೀತೆ, ಅಮೃತವಾಹಿನಿ, ಹಾರುಹಕ್ಕಿ, ಓ ಮನಸ್ಸೆ, ಪಠ್ಯಪುಸ್ತಕದ ಹಾಡುಗಳು ಮೊದಲಾದ ಅನೇಕ ಹಾಡುಗಳ ಧ್ವನಿಸುರುಳಿಗಳು ಬಿಡುಗಡೆಗೊಂಡಿವೆ. ಶ್ರೀ ರಾಮ ಜನನ, ಸೀತಾ ಸ್ವಯಂವರ (ನೃತ್ಯ ರೂಪಕ), ಕುಮಾರವ್ಯಾಸ ಭಾರತ ಕಾವ್ಯ ವಾಚನ (ಶತಾವಧಾನಿ ಡಾ| ಆರ್. ಗಣೇಶ್ ಅವರ ವ್ಯಾಖ್ಯಾನದೊಂದಿಗೆ) ಮುಂತಾದವು ಚಂದ್ರಶೇಖರ ಕೆದ್ಲಾಯರ ಧ್ವನಿಮುದ್ರಿಕೆಗಳಲ್ಲಿ ಸೇರಿವೆ. ಶತಾವಧಾನಿ ಗಣೇಶರ ಆವಧಾನ ಕಾರ್ಯಕ್ರಮಗಳಲ್ಲಿ ಕೆದ್ಲಾಯರ ಕಾವ್ಯವಾಚನ ವಿಶಿಷ್ಟವೆಂಬಂತೆ ಶೋಭಿ ಸಿರುವುದನ್ನು ಇಡೀ ಸಾಂಸ್ಕೃತಿಕ ಲೋಕವೇ ಕಂಡು ನಿಬ್ಬೆರಗಾಗಿದೆ.

ಚಂದ್ರಶೇಖರ ಕೆದ್ಲಾಯರು ಸಮೂಹ ಉಡುಪಿ, ರಂಗ ಅಧ್ಯಯನ ಕೇಂದ್ರ, ಕುಂದಾಪುರ, ಲಾವಣ್ಯ (ರಿ) ಬೆಂಗಳೂರು, ಶ್ರೀ ಮಹಾಲಿಂಗೇಶ್ವರ ಲಲಿತಕಲಾ ಕೇಂದ್ರ, ಬ್ರಹ್ಮಾವರ, ಎಸ್. ಎಂ. ಎಸ್. ಕಾಲೇಜು ಉಡುಪಿ, ರಂಗಭೂಮಿ (ರಿ) ಉಡುಪಿ, ರಥಬೀದಿ ಗೆಳೆಯರು (ರಿ) ಉಡುಪಿ, ಪೂರ್ಣಪ್ರಜ್ಞ ಕಾಲೇಜು ಉಡುಪಿ, ನೃತ್ಯನಿಕೇತನ ಕೊಡವೂರು, ನಾದವೈಭವಂ ಉಡುಪಿ, ನಾಟ್ಯಾಂಜಲಿ ಸುರತ್ಕಲ್, ಸನಾತನ ನಾಟ್ಯಾಲಯ ಮಂಗಳೂರು ಮೊದಲಾದ ಸಂಸ್ಥೆಗಳಲ್ಲಿ ನಾಟಕ ಮತ್ತು ನೃತ್ಯ ರೂಪಕಗಳ ನಿರ್ದೇಶನವನ್ನು ಮಾಡಿದ್ದಾರೆ.

ಚಂದ್ರಶೇಖರ ಕೆದ್ಲಾಯರು ದಕ್ಷಯಜ್ಞ, ಸಮುದ್ರಮಥನ, ಗಿರಿಜಾ ಕಲ್ಯಾಣ, ಲವಕುಶ, ನಾಗ ಮಹಿಮೆ, ಹೂಗಳ ರಾಣಿ, ಏಕತೆ, ಬಿತ್ತಿದ ಬೀಜ, ದಶಕನ್ಯೆಯರು, ರಾಮಜನನ, ಭರತನ ಭ್ರಾತೃ ಪ್ರೇಮ, ಶಾಂತಲೆ ಹೀಗೆ ಹಲವು ನಾಟಕ ಕೃತಿಗಳನ್ನು ರಚಿಸಿರುವುದರ ಜತೆಗೆ ಹಲವಾರು ನಾಟಕಗಳಿಗೆ ನೃತ್ಯ ರೂಪಕಗಳಿಗೆ ಹಾಡುಗಳ ರಚನೆ ಯನ್ನೂ ಮಾಡಿದ್ದಾರೆ.

ಚಂದ್ರಶೇಖರ ಕೆದ್ಲಾಯರು ಸಾರ್ವಜನಿಕ ಶಿಕ್ಷಣ ಇಲಾಖೆಯ ಚೈತನ್ಯ ತರಬೇತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ಕನ್ನಡ ಭಾಷೆ, ಛಂದಸ್ಸು, ಗಮಕ ಕಲಿಸುವಿಕೆ, ವಿವಿಧ ಶಾಲೆ, ಕಾಲೇಜು, ಸಂಘ-ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸುಗಮ ಸಂಗೀತ ಮತ್ತು ಗಮಕ ತರಬೇತಿ, ಶಿಕ್ಷಕರಿಗೆ ಗಾಯನ ತರಬೇತಿ ಮೊದಲಾದ ಅನೇಕ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪ ನ್ಮೂಲ ವ್ಯಕ್ತಿಯಾಗಿ, ತರಬೇತುದಾರರಾಗಿ ತಮ್ಮ ಜ್ಞಾನಸಂಪತ್ತನ್ನು ಧಾರೆಯೆರೆದಿದ್ದಾರೆ.

ಚಂದ್ರಶೇಖರ ಕೆದ್ಲಾಯರು ಬ್ರಹ್ಮಾವರ ಅಜ್ಜಂಪುರ ಕರ್ನಾಟಕ ಸಂಘ, ಮಟಪಾಡಿ ಯಕ್ಷಗಾನ ಸಂಘ, ಗೆಳೆಯರ ಬಳಗ ಹಂಗ್ಳೂರು, ಲಾವಣ್ಯ ಬೈಂದೂರು, ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘ, ರಂಗಭೂಮಿ ಉಡುಪಿ, ರಥಬೀದಿ ಗೆಳೆಯರು ಉಡುಪಿ, ಮೊದಲಾದ ಸಂಘಟನೆಗಳಲ್ಲಿ ಸೇವೆ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಉಡುಪಿ ಜಿಲ್ಲಾ ಪ್ರತಿನಿಧಿಯಾಗಿ ಕಾರ್ಯಕ್ರಮ ಆಯೋಜನೆ, ಸ್ಥಳೀಯ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಸೇವೆ, ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯ ಪರಿಷತ್ತಿನ ಸದಸ್ಯನಾಗಿ ಕಾರ್ಯ ನಿರ್ವಹಣೆ, ಶಾಲೆಯ ಶಿಕ್ಷಕ-ರಕ್ಷಕ ಸಂಘದ ಕಾರ್ಯದರ್ಶಿಯಾಗಿ ಸೇವೆ, ಹೀಗೆ ಹತ್ತು ಹಲವು ಸಂಸ್ಥೆಗಳಲ್ಲಿ  ಸಮಾಜಮುಖಿ ಕೈಂಕರ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ.

ಚಂದ್ರಶೇಖರ ಕೆದ್ಲಾಯರ ಈ ಎಲ್ಲಾ ಪ್ರತಿಭೆ, ಕಲಾಕೈಂಕರ್ಯ, ಶಿಕ್ಷಕ ವೃತ್ತಿಯಲ್ಲಿನ ಬದ್ಧತೆಗಳಿಗಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳು  ಅವರನ್ನರಸಿ ಬಂದಿವೆ. ಅವುಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ (1992-93), ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ (2008), ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕ ಪ್ರತಿಭಾ ಸ್ಪರ್ಧೆಯಲ್ಲಿ ಎರಡು ಬಾರಿ ಸಂಗೀತದಲ್ಲಿ ರಾಜ್ಯಮಟ್ಟದಲ್ಲಿ ಬಹುಮಾನ (1995-1996), ಕರ್ನಾಟಕ ನಾಟಕ ಅಕಾಡೆಮಿಯ ರಂಗ ಭಾರತಿ ನಾಟಕೋತ್ಸವಗಳಲ್ಲಿ ಹೂವಿನ ಹಡಗಲಿಯ ಸಮ್ಮಾನ (2006), ಮೂಡಬಿದಿರೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ “ಕರ್ನಾಟಕ ಶ್ರೀ” ಬಿರುದು ಪ್ರದಾನ (2013), ಕರ್ನಾಟಕ ಗಮಕ ಕಲಾ ಪರಿಷತ್ತಿನಿಂದ ಸನ್ಮಾನ. 

 ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಹಲವು ಬಾರಿ ಸಂಗೀತ ನಿರ್ದೇಶನಕ್ಕೆ ಬಹುಮಾನ, ಉಡುಪಿ ಮೂಡುಬೆಳ್ಳೆ ಉಪಾಧ್ಯ ಪ್ರತಿಷ್ಠಾನದ “ಉಪಾಧ್ಯ ಸನ್ಮಾನ”, ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಿಂದ ಸನ್ಮಾನ, ಶೀರೂರು ಮಠದ ಪರ್ಯಾಯದಲ್ಲಿ “ಶ್ರೀಕೃಷ್ಣಾನುಗ್ರಹ” ಪ್ರಶಸ್ತಿ (2010), ಗದುಗಿನ ವೀರನಾರಾಯಣ ದೇವರ ಸನ್ನಿಧಿಯಲ್ಲಿ ಸನ್ಮಾನ, ಗಮಕ ಕ್ಷೇತ್ರದಲ್ಲಿನ ಸಾಧನೆಗಾಗಿ ಮುಳಿಯ ಪ್ರಶಸ್ತಿ (2011), ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಶಿಕ್ಷಕ ಸನ್ಮಾನ (2014), ಕಾಂತಾವರ ಕನ್ನಡ ಸಂಘದಿಂದ ಸನ್ಮಾನ (2015), ಕಾಂತಾ ವರ ಲಲಿತ ಕಲಾ ಪುರಸ್ಕಾರ, ಗೋಪಾಲಕೃಷ್ಣ ಅಡಿಗ ಪ್ರಶಸ್ತಿ,  ಕಯ್ಯಾರ ಕಿಞ್ಞಣ್ಣ ರೈ  ಪ್ರಶಸ್ತಿ, ಉಡುಪಿ ಜಿಲ್ಲಾ ಗಮಕ ಸಮ್ಮೇಳನದ ಆಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಇವರ ಕಣ್ಮರೆ ಈ ನಾಡಿನ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಉಡುಪಿ ಜಿಲ್ಲಾ ಕನ್ನಡ ಕನ್ನಡ ಸಾಹಿತ್ಯ ಪರಿಷತ್ತು ಅತೀವ ಶೋಕ ವ್ಯಕ್ತಪಡಿಸಿದೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಓಂ ಶಾಂತಿ ಶಾಂತಿಃ. ~ ನೀಲಾವರ ಸುರೇಂದ್ರ ಅಡಿಗ, ಅಧ್ಯಕ್ಷರು, ಕಸಾಪ ಉಡುಪಿ ಜಿಲ್ಲೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!