ಕಟೀಲಿನಲ್ಲಿ “ನಾಗಾರಾಧನಾ ಸಾಹಿತ್ಯ ಸಂವವಾದ” ನಾಗ – ವೃಕ್ಷ ಅವಳಿ ಚೇತನಗಳು : ಕುಂಡಂತಾಯ

ಕಟೀಲು : ಮಾನವನಿಂದ ಮೊತ್ತಮೊದಲು ದೈವೀಕರಿಸಲ್ಪಟ್ಟ ಪ್ರಾಣಿ ನಾಗ.ಪುರಾತನವಾದರೂ ಬಲಗುಂದದ ಆರಾಧನೆಯಾಗಿ ನಾಗಾರಾಧನೆ ಮಾನವ ವಿಕಾಸದೊಂದಿಗೆ ಸಾಗಿಬಂದಿದೆ. ನಾಗ ತಂಪನ್ನು ಆಶ್ರಯಿಸಿಕೊಂಡು ಬದುಕುವ ಪ್ರಾಣಿ. ಆದು ದರಿಂದಲೇ ನಾಗನ ಆರಾಧನೆಯಲ್ಲಿ‌ ತಂಪೆರೆಯುವ ಕ್ರಿಯೆಗೆ ಪ್ರಾಶಸ್ತ್ಯವಿದೆ.ನಾಗ ವಾಸಸ್ಥಾನ ಬನವನ್ನು ಉಳಿಸಿಕೊಂಡು ಪ್ರಕೃತಿಯನ್ನು ರಕ್ಷಿಸಬೇಕಾದುದು ಕಾಲದ ಅನಿವಾರ್ಯತೆ ಏಕೆಂದರೆ ನಾಗ – ವೃಕ್ಷ ಅವಳಿ ಚೇತನಗಳು ಎಂದು ಜಾನಪದ ಸಂಶೋಧಕ ,ಸಾಹಿತಿ ಕೆ.ಎಲ್.ಕುಂಡಂತಾಯ ಅಭಿಪ್ರಾಯಪಟ್ಟರು.

ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ‘ಕುದುರಿ’ನಲ್ಲಿ ಮೂಲ್ಕಿ ತಾಲೂಕು‌ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಟೀಲು ಪ್ರಥಮದರ್ಜೆ ಕಾಲೇಜಿನ‌ ಎನ್.ಎಸ್ ಎಸ್ .ಘಟಕ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಹಕಾರದಲ್ಲಿ‌ ಜರಗಿದ ‘ನಾಗಾರಾಧನೆ ನಾಗಾರಾಧನಾ ಸಾಹಿತ್ಯ ಸಂವಾದ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಮಾನವ ಅಭಿಯೋಗವಾಗದ ಪುರಾತನ ನಾಗಬನವೊಂದರಲ್ಲಿ ಕನಿಷ್ಠ 50 – 60 ವೃಕ್ಷ ಪ್ರಬೇಧಗಳು ಹಾಗೂ ಸುಮಾರು ಇಪ್ಪತ್ತರಷ್ಟು ಔಷಧೀಯ ಸಸ್ಯಗಳು ಇರುತ್ತವೆ.ಪಕ್ಷಿ ಸಂಕುಲಗಳು ಆಶ್ರಯ ಪಡೆದಿರುತ್ತವೆ.

ಹುಳು ಹುಪ್ಪಟಿಗಳ ಸಹಿತ ಜೀವರಾಶಿಗಳಿಗೆ ಬನವೊಂದು ಸುರಕ್ಷಿತ ನೆಲೆಯಾಗಿರುತ್ತದೆ,ಆದರೆ ಈ ಸತ್ಯವನ್ನು ಎಣಿಸದೆ ನಾಗಬನಗಳ ನಾಶ ನಡೆಯುತ್ತಲೇ ಇವೆ.ಈ ಅಭಿಯೋಗ ನಿಲ್ಲಬೇಕು ಬನಗಳು‌ ಸಂಸ್ಕೃತಿಯ ಪ್ರತೀಕವಾಗಿ ಉಳಿಯಬೇಕಿದೆ ಎಂದು ಕುಂಡಂತಾಯ ಹೇಳಿದರು.

ಉರಗತಜ್ಞ,ನಾಗರಹಾವಿನ ಜೀವನ ವಿಧಾನದ ಅಧ್ಯಯನ ಸಹಿತ ಸಾವಿರಾರು ನಾಗರ ಹಾವುಗಳನ್ನು ರಕ್ಷಿಸಿದ ಗುರುರಾಜ ಸನಿಲ್ ಅವರು ಮಾತನಾಡಿ‌ ನಮಗೆ ಹೇಗೆ ಈ ಪರಿಸರದಲ್ಲಿ ಜೀವಿಸುವ ಹಕ್ಕು‌ ಇದೆಯೋ ಅಂತೆಯೇ ಪ್ರಾಣಿಗಳಿಗೂ ವಾಸಿಸುವ ಅಧಿಕಾರವಿದೆ.ನಾಗ ಸಂತತಿಯ ವಾಸಸ್ಥಾನವಾಗಿರುವ ನಾಗಬನಗಳನ್ನು‌ ನಾಶಮಾಡಬಾರದು.ಬನದ ಮರಗಳು ಮಳೆನೀರನ್ನು ಹಿಡಿದಿಟ್ಟುಕೊಂಡು ನೆಲದ ಆಳಕ್ಕೆ ರವಾನಿಸುತ್ತದೆ ಆಮೂಲಕ ಅಂತರ್ಜಲ ವೃದ್ಧಿಯಾಗುತ್ತದೆ ಎಂದರು.

ನಾಗಾರಾಧನೆಯನ್ನು ವಾಸ್ತವವಾಗಿ ಗಮನಿಸಬೇಕು.ಆಮೂಲಕ ಆರಾಧನಾ ಪ್ರಜ್ಞೆ ಬೆಳೆಸಿಕೊಳ್ಳಬೇಕು.ನಾಗನ ಬಗ್ಗೆ ಮೂಢನಂಬಿಕೆ ಬೇಡ ಎಂದ ಸನಿಲ್ ಅವರು ನಾಗ ಮನೆಗೆ ಹೇಗೆ ಮತ್ತು ಏಕೆ ಹರಿದು ಬರುತ್ತದೆ ಎಂದು ವಿವರಿಸಿ ಪರಿಸರ ಸ್ವಚ್ಛವಾಗಿರಲಿ ನಾಗ ಬರಲಾರದು ಎಂದರು.ಇಲಿ ಮುಂತಾದ ಪ್ರಾಣಿಗಳ ಬೆನ್ನುಹಿಡಿದು ನಾಗ ಬರುವುದು ಸಾಮಾನ್ಯ ಎಂದು ವಿವರಿಸಿದರು.ಸರ್ಪ ಕಚ್ಚಿದಾಗ ಮಾಡಬೇಕಾ ಪ್ರಥಮ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು.ಹೆದರದೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಸೂಚಿಸಿದರು.

ಗುರುರಾಜ ಸನಿಲ್ ಹಾಗೂ ಕೆ.ಎಲ್.ಕುಂಡಂತಾಯ ಅವರು ಬರೆದ ಪುಸ್ತಕಗಳನ್ನು ಖರೀದಿಸುವ ಮೂಲಕ‌ ಕಾರ್ಯಕ್ರಮವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಉದ್ಘಾಟಿಸಿದರು.ಗಾಯಕಿ ಅಶ್ವಿನಿ ರಾವ್ ಪಂಜೆ ಮಂಗೇಶರಾಯರ ಪ್ರಸಿದ್ಧ ಹಾವಿನ ಹಾಡನ್ನು ಹಾಡಿದರು.

ನಾಡೋಜ ಕೆ.ಪಿ.ರಾವ್,ಹಾಗೂ ಕ.ಸಾ.ಪ.ಮೂಲ್ಕಿ ಘಟಕದ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಯೋಜಕ ಮಿಥುನ್ ಉಡುಪ ಉಪಸ್ಥಿತರಿದ್ದರು.ಕಾರ್ಯದರ್ಶಿ ಜೊಸ್ಸಿ ಪಿಂಟೋ ಸ್ವಾಗತಿ ಸಿದರು.ರಾಜಶೇಖರ ಎಸ್.ಕಾರ್ಯಕ್ರಮ ನಿರೂಪಿಸಿದರು.ಕುದುರಿನ ಹುತ್ತದ ಎದುರಿನ ನಾಗಮಂಡಲ ಮಂಟಪದಲ್ಲಿ‌ ಕಾರ್ಯಕ್ರಮ ನಡೆಯಿತು.

 
 
 
 
 
 
 
 
 
 
 

Leave a Reply