101 ಕಾಶ್ಮೀರಿ ಪಂಡಿತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಘೋಷಿಸಿದ ಕಾಶೀಮಠಾಧೀಶರು

ಆರ್ಟಿಕಲ್ 370 ರದ್ದು ಮಾಡಿರುವುದು ಕೇಂದ್ರ ಸರಕಾರದ ಕ್ರಾಂತಿಕಾರಿ ಹೆಜ್ಜೆಯಾಗಿತ್ತು. ಅದೇ ರೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಭೂಭಾಗ ದಲ್ಲಿರುವ ಶಾರದಾ ಪೀಠಕ್ಕೆ ಭಾರತೀಯರು ಭೇಟಿ ನೀಡುವ ಅವಕಾಶ ಬೇಗ ಸಿಗುವಂತಾಗಬೇಕು ಎಂದು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಂಮೀಂದ್ರ ತೀರ್ಥ ಸ್ವಾಮೀಜಿಗಳು ಹೇಳಿದ್ದಾರೆ.
 
ಅವರು ವಿಶ್ವ ಸಾರಸ್ವತ್ ಫೆಡರೇಶನ್ ವತಿಯಿಂದ ಕೊಂಚಾಡಿಯ ವನಿತಾ ಅಚ್ಯುತ್ ಪೈ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾದ ವಿಶ್ವ ಸಾರಸ್ವತ ಸಂಗಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆರ್ಶೀವಚನ ನೀಡಿದರು. ಸರಸ್ವತಿ ಹುಟ್ಟಿ ಹರಿಯುತ್ತಿದ್ದ ಕಾಶ್ಮೀರವನ್ನು ದೇವತೆಗಳ ನಾಡು, ಋಷಿಮುನಿಗಳ ಬೀಡು ಎಂದು ಹೇಳಲಾಗುತ್ತದೆ. 
ಆದರೆ ಅಲ್ಲಿ ಕೆಲವರು ಗಣಿಗಾರಿಕೆ ಮಾಡುವ ಮೂಲಕ ಪ್ರಕೃತಿದತ್ತ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಪೌರಾಣಿಕ ತಾಣಗಳು, ಐತಿಹಾಸಿಕ ಸ್ಥಳಗಳು ಅಲ್ಲಿ ನಿರ್ನಾಮವಾಗುತ್ತಿದೆ. ಕಾಶ್ಮೀರಿ ಪಂಡಿತರು ಇನ್ನು ನೆಮ್ಮದಿಯ ಬದುಕಿಗೆ ಮರಳಬೇಕಿದೆ. ಅದಕ್ಕಾಗಿ‌ ನಾವೆಲ್ಲರೂ ಒಂದಾಗಿ ಅವರಿಗೆ ಆಸರೆಯಾಗಬೇಕು. ಆರಂಭಿಕ ಹೆಜ್ಜೆಯಾಗಿ ಕಾಶ್ಮೀರದಲ್ಲಿ ಈಗ ನೆಲೆಸಿರುವ 101 ಅರ್ಹ ಕಾಶ್ಮೀರಿ ಪಂಡಿತರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಸಹಾಯಹಸ್ತ ಚಾಚಲಾಗುವುದು. 
ಮುಂದಿನ ದಿನಗಳಲ್ಲಿ ಅಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳುವ ಚಿಂತನೆ ಮಾಡಲಾಗುವುದು ಎಂದು ಶ್ರೀಗಳು ಹೇಳಿದರು. ಕಾರ್ಯಕ್ರಮದಲ್ಲಿ ಕಾಶ್ಮೀರ ಮತ್ತು ಕಾಶ್ಮೀರಿ ಪಂಡಿತರ ಬಗ್ಗೆ ಚಿಂತಕರಿಂದ ವಿಷಯ ಮಂಡನೆಯಾಯಿತು. ಕಾರ್ಯಕ್ರಮದ ಸಂಚಾಲಕ, ಶಾಸಕ ವೇದವ್ಯಾಸ ಕಾಮತ್ ಸ್ವಾಗತಿಸಿದರು. ಲೆಕ್ಕ ಪರಿಶೋಧಕ ಜಗನ್ನಾಥ ಕಾಮತ್ ನಿರೂಪಿಸಿದರು. ಉದ್ಯಮಿಗಳಾದ ಪ್ರದೀಪ್ ಪೈ, ವಾಸುದೇವ ಕಾಮತ್, ನಂದಗೋಪಾಲ್ ಶೆಣೈ, ಅತುಲ್ ಕುಡ್ವ ಸಹಿತ ರಾಜ್ಯ, ದೇಶದಿಂದ ಅನೇಕ ಗಣ್ಯರು ಆಗಮಿಸಿದ್ದರು.
 
 
 
 
 
 
 
 
 
 
 

Leave a Reply