120 ಮಂದಿ ದೈವ ನರ್ತಕರು ಜತೆ ಕಾಂತಾರ ಸಿನಿಮಾ ವೀಕ್ಷಿಸಿದ ಸಚಿವ ಕೋಟ

ದೇಶದಾದ್ಯಂತ ಚಿತ್ರ ರಸಿಕರ ಅಪಾರ ಪ್ರೀತಿಗೆ ಪಾತ್ರವಾಗಿರುವ ಕಾಂತಾರ ಚಲನ ಚಿತ್ರದ ವಿಶೇಷ ಪ್ರದರ್ಶನಕ್ಕೆ ಕೋಟೇಶ್ವರದ ಭಾರತ್ ಸಿನೆಮಾಸ್ ಮಂಗಳವಾರ ಸಾಕ್ಷಿಯಾಯಿತು. ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಾರಥ್ಯದಲ್ಲಿ ಕಾಂತಾರದ ಚಿತ್ರದ ಜೀವಾಳವಾಗಿರುವ ದೈವ ನರ್ತಕರು ಒಟ್ಟಾಗಿ ಬಂದು ಚಿತ್ರ ವೀಕ್ಷಿಸಿ ಸಂಭ್ರಮಿಸಿದ ಕ್ಷಣ ಸೃಷ್ಟಿಯಾಯಿತು. ಸುಮಾರು 120 ಮಂದಿ ದೈವ ನರ್ತಕರು ಜತೆಯಾಗಿ ಕುಳಿತು ಸಿನಿಮಾ ನೋಡಿದರು.

ಮುಂಜಾಗೆ 11 ಗಂಟೆಗೆ ಸುಮಾರು 120 ಮಂದಿ ದೈವ ನರ್ತಕರಿಗಾಗಿ ಕೋಟೇಶ್ವರ ಭಾರತ ಸಿನೆಮಾಸ್‌ನಲ್ಲಿ ಸಚಿವರು ಶೋ ಮುಂಗಡ ನಿಗದಿಪಡಿಸಿದ್ದರು.

ಜಿಲ್ಲೆಯ ಕೋಲ ಕಟ್ಟುವವರು, ದೈವ ನರ್ತಕರು ಈ ವಿಶೇಷ ಪ್ರದರ್ಶನದಲ್ಲಿ ಭಾಗಿಯಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕುಟುಂಬದೊಂದಿಗೆ ಚಿತ್ರ ವೀಕ್ಷಿಸಿದರು. ನಮ್ಮ ಜಾನಪದ ಆಚರಣೆಯನ್ನು ದೊಡ್ಡ ಪರದೆಯಲ್ಲಿ ವಿಕ್ಷೀಸಿದ ದೈವ ನರ್ತಕರು, ಶೋ ಆಯೋಜಿಸಿದ ಸಚಿವರನ್ನು ಹಾಗೂ ಕಾಂತಾರ ಚಿತ್ರ ನಿರ್ಮಿಸಿದ ರಿಷಭ್ ಶೆಟ್ಟಿ ಅವರನ್ನು ಶ್ಲಾಘಿಸಿದರು. ಈ ಸಂದರ್ಭ ಆಗಮಿಸಿದ ಪ್ರತಿಯೊಬ್ಬ ದೈವ ನರ್ತಕರನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸನ್ಮಾನಿಸಿದರು. ಕಾಂತಾರ ಚಿತ್ರದಲ್ಲಿ ನಟಿಸಿ ಕಲಾವಿದರೂ ಈ ಪ್ರದರ್ಶನದಲ್ಲಿ ಭಾಗಿಯಾದರು.

ಸಿನಿಮಾ ವೀಕ್ಷಣೆಯ ಬಳಿಕ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ತಾವು ವಿಶೇಷ ಶೋ ಏರ್ಪಡಿಸಿದ್ದಕ್ಕೆ ಕಾರಣ ನೀಡಿದರು. ʻʻನನ್ನೂರಿನ ಯುವಕ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಚಿತ್ರವನ್ನು ದೈವ ನರ್ತಕರೊಂದಿಗೆ ವೀಕ್ಷಿಸಿದ್ದೇನೆ. ಇವರೆಲ್ಲರೂ ಕೂಡ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು. ನನ್ನ ಇಲಾಖೆಗೆ ಸಂಬಂಧಪಟ್ಟವರಾಗಿರುವ ಹಿನ್ನೆಲೆಯಲ್ಲಿ ಅವರೊಂದಿಗೆ ಚಿತ್ರ ವೀಕ್ಷಿಸಿದ್ದೇನೆʼʼ ಎಂದರು.

ʻʻಅದ್ಭುತವಾದ ಸಿನೆಮಾ, ರಿಷಬ್ ಶೆಟ್ಟಿ ಅವರ ತಂಡ ಮಾಡಿದ ಸಾಧನೆ ನೋಡಿದರೆ ಅಚ್ಚರಿಯಾಗುತ್ತದೆ. ನಮ್ಮೂರಿನ ಕೋಣ, ಕಂಬಳ, ಕೋಳಿ ಅಂಕ, ಕೋಲ ಪರಿಕಲ್ಪನೆಯಲ್ಲಿ ಉತ್ತಮ ಚಿತ್ರ ಮಾಡಿದ್ದಾರೆ. ಕಾಡು ವಾಸಿಗಳ ಬದುಕಿನ ಕುರಿತು ಮಾಡಿದ ಚಿತ್ರದ ಹಂದರಗಳು ಅದ್ಭುತವಾಗಿ ಮೂಡಿಬಂದಿದೆʼʼ ಎಂದರು.

ʻʻನನ್ನೊಂದಿಗೆ ಚಿತ್ರ ವಿಕ್ಷೀಸಿದ 120 ಮಂದಿ ದೈವ ನರ್ತಕರು ಕೂಡಾ ಖುಷಿಪಟ್ಟರು. ನಾನು ರಿಷಬ್ ಶೆಟ್ಟಿ ಅವರನ್ನು ಅಭಿನಂದಿಸುತ್ತೇನೆ, ಎಲ್ಲಾ ದೈವ ನರ್ತಕರನ್ನು ಅಭಿನಂದಿಸುತ್ತೇನೆ. ಕಾಂತಾರ ಸಿನಿಮಾ ಹೊರ ಜಗತ್ತಿನ ಜನರ ಕಣ್ಣನ್ನು ತೆರೆಸಿದೆ ಎಂದು ನನಗೆ ಅನಿಸುತ್ತದೆʼʼ ಎಂದರು.

ʻʻದೈವ ನರ್ತಕರಿಗೆ ಮಾಸಾಶನ ನೀಡಲು ಆದೇಶವಾಗಿದೆ. ಇದರ ಬೆನ್ನಲ್ಲೇ ದೈವದ ಕೆಲಸ ಮಾಡುವವರು ಸೇರಿದಂತೆ ಇತರರಿಗೂ ಮಾಸಾಶನದ ಬೇಡಿಕೆ ಇದೆ. ಇದನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳಿ ಮನವಿ ಮಾಡುತ್ತೇನೆ. ಕಂಬಳವು ಸೇರಿದಂತೆ ಎಲ್ಲಾ ಜನಪದ ಕ್ರೀಡೆ ಆಚರಣೆಗಳಿಗೆ ಬೇಕಾದ ವ್ಯವಸ್ಥೆ ಮಾಡುವ ಚರ್ಚೆ ಮಾಡುತ್ತೇನೆʼʼ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

 
 
 
 
 
 
 
 
 
 
 

Leave a Reply