ಮೇ 3 ರಿಂದ ಮೇ 10 ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ

ಉಡುಪಿ : ಕಣ್ವ ಋಷಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಸುಮಾರು ಇತಿಹಾಸದಲ್ಲಿ 7ನೇ ಶತಮಾನದ ಉಡುಪಿಯ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನವು ಸಂಪೂರ್ಣ ಜೀರ್ಣೋದ್ಧಾರಗೊಂಡು2022 ರ ಮೇ 3 ರಿಂದ ಪ್ರಾರಂಭಗೊಂಡು ಮೇ 10 ರತನಕ ಬ್ರಹ್ಮಕಲಶೋತ್ಸವ, ನಾಗಮಂಡಲ ಉತ್ಸವಾದಿ ನಡೆಯಲಿದೆ ಎಂದು ವ್ಯವಸ್ಥಾಪನ ಮಂಡಳಿಯ ಅಧ್ಯಕ್ಷರಾದ ಡಾ. ರವಿರಾಜ. ವಿ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಕ್ರಿಯೆ ದಿನಾಂಕ  24/01/2018 ರಂದು ಹಿಂದಿನ ಜೀರ್ಣೋದ್ಧಾರ ಸಮಿತಿಯಿಂದ ಪ್ರಾರಂಭಗೊಂಡು ದೇವಸ್ಥಾನ ಸುತ್ತುಪೌಳಿ, ಹೊರಾಂಗಣ, ಸುಬ್ರಹ್ಮಣ್ಯ ಗುಡಿ,  ನಾಗಬನ ಮತ್ತು ನಂದಿಗೋಣ ಗುಡಿಯನ್ನು ಸಂಪೂರ್ಣ ಕೆಡವಲಾಗಿತ್ತು. ಇದರಲ್ಲಿ ನಂದಿ ಕೋಣ ಗುಡಿಯ ನವೀಕರಣಮಾಡಲಾಗಿತ್ತು. ಆದರೆ ಅತೀ ಪ್ರಮುಖವಾದ ಸುತ್ತುಪೌಳಿ, ಸುಬ್ರಹ್ಮಣ್ಯ ಗುಡಿ ಮತ್ತು ಪ್ರಾಂಗಣದ ಕಾಮಗಾರಿಯು ಪ್ರಾರಂಭವಾಗದೆ ಭಕ್ತರಿಗೆ ಭಾರಿ ತೊಂದರೆಗಳು ಆಗುತ್ತಿತ್ತು. ಹೀಗಾಗಿ ನೂತನ ದೇವಸ್ಥಾನ ಸಮಿತಿಯ ಕೋರಿಕೆಯಂತೆ ಸಮಸ್ತ ಗ್ರಾಮಸ್ಥರ ಸಭೆ ನಡೆಸಿ ದಿನಾಂಕ 22/11/2020 ರಂದು ಆದಿತ್ಯವಾರ ಉಡುಪಿಯ ಶಾಸಕ ಶ್ರೀ ಕೆ. ರಘುಪತಿ ಭಟ್ ರನ್ನುಗೌರವಾಧ್ಯಕ್ಷರಾಗಿ, ಶ್ರೀ ನಾಗೇಶ್ ಹೆಗ್ಡೆ ಇವರನ್ನು ಅಧ್ಯಕ್ಷರಾಗಿ,  ಕೆ ರಾಘವೇಂದ್ರ ಕಿಣಿ ಪ್ರಧಾನ ಕಾರ್ಯದರ್ಶಿಯಾಗಿ 17 ಮಂದಿ ಸಮಿತಿ ಸದಸ್ಯರಿರುವ ನೂತನ ಜೀರ್ಣೋದ್ಧಾರ ಸಮಿತಿಯನ್ನು ಸರ್ವಾನುಮತದಿಂದ ಆರಿಸಲಾಯಿತು.  ಇದರಂತೆ ಮಾನ್ಯ ಕರ್ನಾಟಕ ಸರಕಾರ  25/02/2021 ರಂದು ಈ ಜೀರ್ಣೋದ್ದಾರ ಸಮಿತಿಯನ್ನು ರಚನೆ ಮಾಡಿ ಆದೇಶ ಹೊರಡಿಸಿದೆ.

  ದಿನಾಂಕ 23/12/2021 ರಂದು ಆರೂಢ ಪ್ರಶ್ನೆಯನ್ನು ಖ್ಯಾತ ಜ್ಯೋತಿಷ್ಯರಾದ ನಿಟ್ಟೆ ಪ್ರಸನ್ನ ಆಚಾರ್ಯರ ಮಾರ್ಗದರ್ಶನದಂತೆ ನಡೆಸಿ ಕಂಡು ಬಂದ ದೋಷಗಳಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪರಿಹಾರ ಕಂಡುಕೊಳ್ಳಲಾಯಿತು. ದಿನಾಂಕ 12/02/2021  ಶುಕ್ರವಾರ ಜೀರ್ಣೋದ್ಧಾರ ಕಛೇರಿಯನ್ನು ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ದಿನಾಂಕ 13/02/2021 ಬೆಳಿಗ್ಗೆ ಪಲಿಮಾರು ಮಠಾಧೀಶರು ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಜೀರ್ಣೋದ್ಧಾರದ ” ಕಾಣಿಕೆ ಡಬ್ಬಿ” ಬಿಡುಗಡೆಗೊಳಿಸಿದರು.17/02/2021 ರಂದು ದೇವಸ್ಥಾನದ ವಾಯುವ್ಯ ದಿಕ್ಕಿನಲ್ಲಿರುವ ನೂತನ ಶಿಲಾಮಯ ಸುಬ್ರಮಣ್ಯ ಗುಡಿಗೆ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗ ರಿಂದ ಶಿಲಾನ್ಯಾಸ ಗೈಯಲಾಯಿತು.
ದಿನಾಂಕ  26/04/2021  ರಂದು ಶ್ರೀ ದೇವಸ್ಥಾನದ ಸುತ್ತು ಪೌಳಿಯ ಶಿಲಾನ್ಯಾಸವನ್ನು ಪರ್ಯಾಯ ಪೀಠಾಧೀಶರಾದ ಕೃಷ್ಣಾಪುರ ವಿದ್ಯಾಸಾಗರತೀರ್ಥ ಶ್ರೀಪಾದರು ಶಿಲಾನ್ಯಾಸಗೈದರು. ತದನಂತರ  ಪ್ರಾರಂಭಗೊಂಡ ಸಂಪೂರ್ಣ ಜೀರ್ಣೋದ್ಧಾರ ಕಾಮಗಾರಿ ದಿನಾಂಕ ಜೂನ್ 17 ಮತ್ತು18, 2021ರಂದು ಕ್ಷೇತ್ರದ ಸುಬ್ರಮಣ್ಯ ಗುಡಿ,ನಂದಿ ಕೋಣ, ರಕ್ತೇಶ್ವರಿ ಗುಡಿ ಇದನ್ನು ಧಾರ್ಮಿಕ ವಿಧಿವಿಧಾನದ ಪ್ರಕಾರ ಶಾಸ್ತ್ರೋಕ್ತವಾಗಿ ಪುನರ್  ಪ್ರತಿಷ್ಠೆ ಗೊಳಿಸಲಾಗಿದೆ.   ದಿನಾಂಕ  19/09/2021  ರಂದು ಮರದ ಕೆಲಸದ ಮುಹೂರ್ತವನ್ನು ಮಾಂಡವಿ  ಬಿಲ್ಡರ್ಸ್ ಜೆರಿ ವಿನ್ಸೆಂಟ್ ಡಯಾಸ್ ನಡೆಸಿದರು. ಆ ಪ್ರಕಾರವಾಗಿ ಇದೀಗ  ದೇವಸ್ಥಾನದ 65 ಶೇಕಡ ಕಾಮಗಾರಿ ಮುಗಿದಿದೆ. ದೇವಸ್ಥಾನದ ಸುತ್ತು ಪೌಳಿಯ ತಾಮ್ರದ ಹೊದಿಕೆಗೆ ಭಕ್ತಾಭಿಮಾನಿಗಳು ವಿಶೇಷ ಸಹಕಾರ ನೀಡಿದಲ್ಲಿ ದೇವಸ್ಥಾನ ಸಂಪೂರ್ಣ ತಾಮ್ರದ ಹೊದಿಕೆ ಯಾಗಲಿದೆ ಎಂದು ಜೀರ್ಣೋದ್ಧಾರ ಸಮಿತಿಯ  ಅಧ್ಯಕ್ಷರಾದ ಶ್ರೀ ನಾಗೇಶ್ ಹೆಗ್ದೆ ವಿನಂತಿಸಿದರು.

ಗ್ರಾಮಸಭೆ.27/02/2022 ರಂದು ಸಾಯಂಕಾಲ 4.00 ಗಂಟೆಗೆ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಸಮಸ್ತ ಗ್ರಾಮದ, ಮತ್ತು ಶ್ರೀ ದೇವರ ಭಕ್ತರ ಗ್ರಾಮ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಗ್ರಾಮದ ಪ್ರತಿ ಮನೆಯಿಂದ ಕನಿಷ್ಠ ಇಬ್ಬರು ಹಾಜರಿರುವಂತೆ ವಿನಂತಿಸಿಕೊಳ್ಳಲಾಗಿದೆ. ಈ ಸಭೆಯಲ್ಲಿ ಬ್ರಹ್ಮಕಲಶೋತ್ಸವದ ಸಮಿತಿಗಳನ್ನು ರಚಿಸಲಾಗುವುದು.

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರದ ಮೂಲಕ ಸುಮಾರು  12,000 ಚದರ ಅಡಿ ದೇಗುಲದ ಒಳಾಂಗಣ,  ಸುತ್ತುಪೌಳಿ , ಒಳಾಂಗಣ ಗ್ರಾನೈಟ್ ಹೊದಿಕೆ ಹೊರಾಂಗಣ  ರಥಬೀದಿ  ಕಾಂಕ್ರೀಟ್ ಕರಣ ಮತ್ತು ಧ್ವಜಸ್ತಂಭ ಮಹಾಬಲಿ ಪೀಠ ಸೇರಿ ಸುಮಾರು  7 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಶಿಲಾಮಯ ಗೊಳ್ಳಲಿದೆ. ಈ ಮಹಾ ಕಾರ್ಯದಲ್ಲಿ ಭಕ್ತಾಭಿಮಾನಿಗಳು ಕೈಜೋಡಿಸಬೇಕೆಂದು ಜನತೆಯಲ್ಲಿ ವಿನಂತಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ, ದೇವಸ್ಥಾನದ ಪವಿತ್ರಪಾಣಿ ಕುಂಜಿತ್ತಾಯ ಶ್ರೀನಿವಾಸ ಉಪಾಧ್ಯಾಯ,ಅರ್ಚಕರಾದ ರಾಧಾಕೃಷ್ಣ ಉಪಾಧ್ಯಾಯ, ವ್ಯವಸ್ಥಾಪನ ಮಂಡಳಿಯ ಸದಸ್ಯರು ಜೀರ್ಣೋದ್ಧಾರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ವೆಬ್ಸೈಟ್ ಯನ್ನು ಲೋಕಾರ್ಪಣೆ ಮಾಡಲಾಯಿತು. ಉಡುಪಿ ವೆಬ್ ಸಲ್ಯೂಷನ್ಸ ನ ಶ್ರೀಮತಿ ಶ್ರೀನಿಧಿ ಆಚಾರ್ಯ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply