ಕೃಷಿ ಕಾಯಿದೆ ವಾಪಾಸ್ ಇದು ಪ್ರಜಾಪ್ರಭುತ್ವದ ಗೆಲುವು – ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ

ಉಡುಪಿ: ಕೇಂದ್ರ ಸರ್ಕಾರ ಜಾರಿಗೆ ತಂದ ರೈತ ವಿರೋಧಿ ಮೂರು ಕೃಷಿ ಕಾಯಿದೆಯನ್ನು ವಿರೋಧಿಸಿ ರೈತರು ಕಳೆದ ಒಂದು ವರ್ಷದಿಂದ ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಕೊನೆಗೂ ಕೇಂದ್ರ ಸರಕಾರ ರೈತ ಹೋರಾಟಕ್ಕೆ ಮಣಿದು ಬೇಷರತ್ ಆಗಿ ಮೂರು ಕೃಷಿ ಕಾಯಿದೆಯನ್ನು ಹಿಂಪಡೆದಿದೆ. ಇದು ಪ್ರಜಾಪ್ರಭುತ್ವದ ಗೆಲುವಾಗಿದೆಯೆಂದು ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲಾ ಸಂಚಾಲಕ ಯಾಸೀನ್ ಕೋಡಿಬೆಂಗ್ರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ರೈತರ ಸುದೀರ್ಘ ಹೋರಾಟಕ್ಕೆ ಮಣಿದು ಕೃಷಿ ಕಾಯಿದೆಗಳನ್ನು ವಾಪಸು ಪಡೆದಿರುವುದು ಸರ್ವಾಧಿಕಾರಿ ಧೋರಣೆ ತೋರಲು ಯತ್ನಿಸುವ ಎಲ್ಲರಿಗೂ ಒಂದು ನಿದರ್ಶನ.ಇದನ್ನು ಇತಿಹಾಸ ನೆನಪಿಟ್ಟುಕೊಳ್ಳಲಿದೆ. ಜನರ ನ್ಯಾಯೋಚಿತ ಹೋರಾಟದ ಎದುರು ಸರಕಾರಗಳ ಸರ್ವಾಧಿಕಾರ ಧೋರಣೆ ಒಂದಲ್ಲ ಒಂದು ದಿನ ಖಂಡಿತ ಮಂಡಿಯೂರುತ್ತದೆ ಎಂಬುವುದಕ್ಕೆ ಈ ಹೋರಾಟ ಸಾಕ್ಷಿಯಾಗಿದೆ.

ಯಾವುದೇ ಸರಕಾರ ಜನ ವಿರೋಧಿ ಧೋರಣೆ ತೋರಿ ಹೆಚ್ಚು ದಿನ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂಬುವುದನ್ನು ಸರಕಾರ ಅರಿತುಕೊಂಡಿದೆ. ಉಪ ಚುನಾವಣೆಯಲ್ಲಿನ ಸೋಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಪಾಠ ಕಲಿಸಿದೆ. ಆ ಕಾರಣಕ್ಕೆ ಮೊದಲು ಪೆಟ್ರೋಲ್, ಡಿಸೇಲ್ ಬೆಲೆ ಇಳಿಸಿತು. ಇದೀಗ ಕೃಷಿ ಕಾಯಿದೆ ವಾಪಸು ಪಡೆದಿದೆ. ಮುಂಬರುವ ಉತ್ತರ ಪ್ರದೇಶ ಚುನಾವಣೆಯ ಭೀತಿ ಬಿಜೆಪಿಯ ಎದುರಿಗಿರುವುದು ಸ್ಪಷ್ಟ. ಅದಕ್ಕಾಗಿ ನಾನಾ ಕಸರತ್ತು ಮಾಡುತ್ತಿದೆ. ಕಳೆದ ಏಳು ವರ್ಷದಿಂದ ಭಾರತೀಯರು ಸರಕಾರದ ಜನ ವಿರೋಧಿ ನೀತಿಗಳಿಂದ ರೋಸಿ ಹೋಗಿದ್ದಾರೆ. ಸರಕಾರ ಜನಪರ ನಿಲುವುಗಳನ್ನು ತಾಳದೆ ಕೇವಲ ಧಾರ್ಮಿಕ ವಿಭಜನೆಯಿಂದ ವೋಟ್ ಕೇಳಲು ಮುಂದಡಿಯಿಟ್ಟರೆ ಈ ದೇಶದ ಪ್ರಜ್ಞಾವಂತ ನಾಗರಿಕರು ಬಿಜೆಪಿಯನ್ನು ಮತ್ತೆ ಮತ್ತೆ ಸೋಲಿಸಲಿದ್ದಾರೆ ಎಂಬುವುದಕ್ಕೆ ಇವತ್ತು ಮೋದಿ ಸರಕಾರ ಹಿಂಪಡೆದ ಕೃಷಿ ಕಾಯಿಯಾಸೀನ್ದೆಯೇ ಸಾಕ್ಷಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply