ಸಂಪನ್ಮೂಲಗಳ ಸದ್ಬಳಕೆ ರೋಟರಿ ಗುರಿ: ಎಂಜಿಆರ್ ಮೂರ್ತಿ

 ಉಡುಪಿ : ಮಾನವ ಸಂಪನ್ಮೂಲ ಸಹಿತವಾಗಿ ಪ್ರಕೃತಿಯ ಸದ್ಬಳಕೆ ಮತ್ತು ಅದನ್ನು ಕಾಪಾಡುವತ್ತ ರೋಟರಿ ಅಂತರಾಷ್ಟ್ರೀಯ ಸಂಸ್ಥೆ ವಿಶ್ವದಾದ್ಯಂತ ತನ್ನ ಸದಸ್ಯರು ಮತ್ತು ಅದರ ಸಂಘಟನೆಗಳಿಂದ ದುಡಿಯುತ್ತಿದೆ. 

ಜಗತ್ತಿನಲ್ಲಿರುವ – ಮತ, ರಾಷ್ಟ್ರ, ಜನಾಂಗ, ವರ್ಣ ಮತ್ತು ಇತರ ವಿಚಾರಗಳ ಗಡಿಗಳನ್ನು ದಾಟಿ ವಿಶ್ವದ ಜನತೆಯ ಸಮೃದ್ಧಿ, ಆರೋಗ್ಯ ಮತ್ತು ಶಾಂತಿಗಾಗಿ ಸಂಸ್ಥೆ ಸುಸಂಘಟಿತವಾಗಿ ಬೆಳೆದು ನಿಂತಿದೆ ಎಂದು ರೋಟರಿ ಜಿಲ್ಲಾ 3182 ಗವರ್ನರ್ ರೋ. ಎಮ್.ಜಿ. ರಾಮಚಂದ್ರ ಮೂರ್ತಿ ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ ಗವರ್ನರ್ ಭೇಟಿಯ ಸಮಾರಂಭದಲ್ಲಿ ನುಡಿದರು. 

ರೋಟರಿ ಚಳುವಳಿ ತಮ್ಮ ಸದಸ್ಯರನ್ನು ಸೇವೆ ಮತ್ತು ಸಮಾಜಮುಖೀ ವ್ಯಕ್ತಿಗಳಾಗಿ ಸಿದ್ಧಪಡಿಸುತ್ತಿದೆ. ಕೊರೋನಾ ವ್ಯಾಧಿಯ ಸಂದರ್ಭದಲ್ಲಿ, ಪೋಲಿಯೋ ನಿವಾರಣೆಯ ಕಾರ್ಯದಲ್ಲಿ, ವಿದ್ಯಾಕ್ಷೇತ್ರದಲ್ಲಿ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ರೋಟರಿ ಸೇವೆ ನಾಗರಿಕರಿಂದ ಪರಿಗಣಿತವಾಗಿದೆ ಎಂದು ನುಡಿದರು. 

ಉಡುಪಿಯ ಪ್ರಸಿದ್ಧ ಹೋಟೇಲ್ ಮಣಿಪಾಲ್ ಇನ್ ಇದರ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ರೋ. ಸುರೇಶ್ ಶೆಣೈ ಕ್ಲಬ್ ನ ಕಾರ್ಯಕ್ರಮಗಳನ್ನು ಶ್ಲಾಘಿಸುತ್ತಾ “ಅಂತರಾಷ್ಟ್ರೀಯ ನಿಧಿ ಮತ್ತು ಮಾಹೆಯವರ ಸಹಕಾರದಿಂದ ಪ್ರಾರಂಭವಾಗಿರುವ ಸ್ಕಿನ್ ಬ್ಯಾಂಕ್ ಯಶಸ್ವಿಗೆ ಹೆಚ್ಚಿನ ಸಂಖ್ಯೆಯಲ್ಲಿ ಚರ್ಮದಾನಿಗಳನ್ನು ಗುರುತಿಸಿ ನೋಂದಾಯಿಸುವ ಅಗತ್ಯವಿದೆ” ಎಂದು ಕರೆನೀಡಿದರು.

ವಲಯ ಸೇನಾನಿ ರೋ. ಸಚ್ಚಿದಾನಂದ ನಾಯಕ್ ಸದಸ್ಯರ ಪ್ರತಿಭೆಗಳ ಸದುಪಯೋಗವಾದಾಗ ಸಂಘಟನೆಗಳು ಬೆಳೆಯುತ್ತವೆ. ‌ಸಂಸ್ಥೆಯು ಉತ್ತಮ ಸದಸ್ಯರ ತಂಡವನ್ನು ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭಾಧ್ಯಕ್ಷತೆಯನ್ನು ರೋ. ಗಣೇಶ್ ನಾಯಕ್ ವಹಿಸಿದ್ದರು. ಕಾರ್ಯದರ್ಶಿ ನಡೆಸಿದ ಕಾರ್ಯಕ್ರಮಗಳ ವರದಿಯನ್ನು ನೀಡಿದರು. ರೋ. ದೇವಪ್ಪ ನಾಯಕ್ ವಂದಿಸಿ, ರೊ. ಗುರುಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply