ಮೀನುಗಾರರ ಗ್ರಾಮಾಭಿವೃದ್ಧಿಗೆ 7.5 ಕೋಟಿ : ಸಚಿವ ಡಾ.ಎಲ್‌.ಮುರುಗನ್

ಮೀನುಗಾರರು ವಾಸವಿರುವ ಗ್ರಾಮಗಳನ್ನು ಗುರುತಿಸಿ ಮೂಲ  ಸೌಕರ್ಯ ಅಭಿವೃದ್ಧಿಗೆ ತಲಾ 7.5 ಕೋಟಿ ಅನುದಾನ ನೀಡಲಾಗುವುದು ಎಂದು ಕೇಂದ್ರದ ಮೀನುಗಾರಿಕೆ ಹಾಗೂ ಪಶುಸಂಗೋಪನಾ ರಾಜ್ಯ ಖಾತೆ ಸಚಿವ ಡಾ.ಎಲ್‌.ಮುರುಗನ್ ತಿಳಿಸಿದರು.

ರವಿವಾರ ಮಲ್ಪೆ ಬಂದರಿಗೆ ಭೇಟಿ ನೀಡಿ ಮೀನುಗಾರರೊಂದಿಗೆ ಸಂವಾದ ನಡೆಸಿದರು. ಕೇಂದ್ರ ಸರಕಾರದ ಮೂಲಕ ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳಲ್ಲಿ ಅಗತ್ಯ ಮೂಲ ಸೌಕರ್ಯ, ಮೀನುಗಾರಿಕಾ ಚಟುವಟಿಕೆ ಮತ್ತು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಅಭಿವೃದ್ದಿಗೆ ಅನುಕೂಲವಾಗುವ ಕಾಮಗಾರಿ ಕೈಗೊಳ್ಳಲು ಈ ಅನುದಾನ ಬಳಸಿಕೊಳ್ಳಲಾಗುವುದು. ಶೀಘ್ರದಲ್ಲಿ ಮೀನುಗಾರರ ಗ್ರಾಮಗಳನ್ನು ಗುರುತಿಸುವ ಕಾರ್ಯ ಆರಂಭವಾಗಲಿದೆ ಎಂದರು.

ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕ ಮೀನುಗಾರಿಕಾ ಕ್ಷೇತ್ರದಲ್ಲಿ 725 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುವುದು. ಮೀನುಗಾರಿಕೆಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಹಾಗೂ ಮತ್ಸ್ಯೋದ್ಯಮಕ್ಕೆ ಉತ್ತೇಜನ ನೀಡಲು ರಾಷ್ಟ್ರೀಯ ಕಡಲು ಮೀನುಗಾರಿಕಾ ಮಸೂದೆ ಜಾರಿಗೊಳಿಸಲಾಗುತ್ತಿದೆ ಎಂದರು.

ದೇಶದ 5 ಬಂದರುಗಳನ್ನು ಅಂತಾರಾಷ್ಟ್ರೀಯ ಸೌಲಭ್ಯಗಳೊಂದಿಗೆ ಅಭಿವೃದ್ದಿ ಪಡಿಸಲಾಗುತ್ತಿದೆ. ಈ ಬಂದರಿನಲ್ಲಿ ಮೀನುಗಾರರಿಗೆ ಅಗತ್ಯ ಮೂಲ ಸೌಕರ್ಯ, ಆಸ್ಪತ್ರೆ, ಐಸ್‌ ಪ್ಲಾಂಟ್‌ ಸಹಿತ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

 
 
 
 
 
 
 
 
 
 
 

Leave a Reply