ಪಂಕ್ಚರ್ ದೋಖಾ : 400 ಗ್ರಾಂ ಮೊಳೆ ಸಂಗ್ರಹಿಸಿದ ಪಿಎಸ್‌ಐ

ಬೆಂಗಳೂರು: ನಗರದಲ್ಲಿ ಹೆಚ್ಚಾಗಿರುವ ಪಂಕ್ಚರ್ ಮಾಫಿಯಾ ಕೃತ್ಯ ಪತ್ತೆಗಾಗಿ ರಸ್ತೆಗೆ ಇಳಿದಿದ್ದ ಅಶೋಕನಗರ ಸಂಚಾರ ಠಾಣೆಯ ಪಿಎಸ್‌ಐ ಮಹಮ್ಮದ್ ಅಲಿ ಇಮ್ರಾನ್, ರಸ್ತೆಯಲ್ಲಿ ಎರಚಿದ್ದ 400 ಗ್ರಾಂ ಮೊಳೆ ಸಂಗ್ರಹಿಸಿದ್ದಾರೆ. ರಸ್ತೆಯಲ್ಲಿ ಮೊಳೆ ಎಸೆದು ವಾಹನಗಳ ಚಕ್ರ ಪಂಕ್ಚರ್ ಮಾಡುವ ಜಾಲ ನಗರದಲ್ಲಿ ಸಕ್ರಿಯವಾಗಿದೆ. 

ಪಿಎಸ್‌ಐ ಮಹಮ್ಮದ್ ಅಲಿ ಇಮ್ರಾನ್, ಹೆಣ್ಣೂರು, ಎಚ್‌ಬಿಆರ್ ಬಡಾವಣೆ, ಆನೆಪಾಳ್ಯ, ನಂಜಪ್ಪ ವೃತ್ತ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ಸುತ್ತಾಡಿ ಮೊಳೆಗಳನ್ನು ಪತ್ತೆ ಮಾಡಿದ್ದಾರೆ. ಜೊತಗೆ, ರಸ್ತೆಯ ಅಕ್ಕ–ಪಕ್ಕದಲ್ಲಿರುವ ಪಂಕ್ಚರ್ ಹಾಕುವ ಕೆಲ ಅಂಗಡಿಗಳ ಕೆಲಸಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

‘ನನ್ನ ದ್ವಿಚಕ್ರ ವಾಹನದ ಚಕ್ರ ಮೂರು ಬಾರಿ ಪಂಕ್ಚರ್ ಆಗಿತ್ತು. ಪ್ರತಿ ಬಾರಿ ಪಂಕ್ಚರ್ ತಿದ್ದಿಸಿದಾಗಲೂ ಮೊಳೆ ಸಿಕ್ಕಿತ್ತು. ಹೀಗಾಗಿ, ದ್ವಿಚಕ್ರ ವಾಹನದಲ್ಲಿ ಓಡಾಡಿದ್ದ ರಸ್ತೆಯಲ್ಲಿ ಪರಿಶೀಲನೆ ನಡೆಸಿದೆ. ಅವಾಗಲೇ ಮೊಳೆ ಹಾಗೂ ತಂತಿಗಳು ಪತ್ತೆಯಾಗಿವೆ. 

ಪಂಕ್ಚರ್ ಅಂಗಡಿಯವರು ಗ್ರಾಹಕರು ತಮ್ಮತ್ತ ಬರುವಂತೆ ಮಾಡಲು ಎಸಗುತ್ತಿರುವ ಕೃತ್ಯವೋ ? ಅಥವಾ ಸಂಚಾರ ವ್ಯವಸ್ಥೆಗೆ ಅನಾನುಕೂಲ ಮಾಡುವ ಕೆಲಸವೋ ? ಎಂಬುದನ್ನು ದೇವರೇ ಬಲ್ಲ‘ ಎಂದು ಪಿಎಸ್‌ಐ ಮಹಮ್ಮದ್ ಅಲಿ ಇಮ್ರಾನ್ ತಿಳಿಸಿದರು.

‘ನಮ್ಮ ಸಂಚಾರ ಪೊಲೀಸರು, ಮಳೆ–ಗಾಳಿ–ಚಳಿ ಎನ್ನದೇ ರಸ್ತೆಗಳಲ್ಲಿ ನಿಂತು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಆದರೆ, ಕೆಲವರು ರಸ್ತೆಯಲ್ಲಿ ಮೊಳೆ ಎಸೆದು ಸಂಚಾರಕ್ಕೆ ಹಾಗೂ ಜನರಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ’ ಎಂದರು.

 
 
 
 
 
 
 
 
 
 
 

Leave a Reply