ಗ್ಯಾರಂಟಿ ಕಾರ್ಡಿನ 10 ಕೆ.ಜಿ. ಉಚಿತ ಅಕ್ಕಿ ಯೋಜನೆ ಜಾರಿಗೆ ಕಾಂಗ್ರೆಸ್ ಕೇಂದ್ರ ಬಿಜೆಪಿ ಸರಕಾರದ ಮೊರೆ ಹೋಗಿರುವುದು ವಿಪರ್ಯಾಸ: ಕುಯಿಲಾಡಿ ಸುರೇಶ್ ನಾಯಕ್

ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸಹಿತ ಕಾಂಗ್ರೆಸ್ ಮುಖಂಡರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆ.ಜಿ. ಉಚಿತ ಅಕ್ಕಿ ವಿತರಣೆ ಸೇರಿದಂತೆ 5 ಉಚಿತ ಗ್ಯಾರಂಟಿಗಳನ್ನು ಭರ್ಜರಿಯಾಗಿ ಘೋಷಿಸಿದ್ದು, ಇದೀಗ ಅಧಿಕಾರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ಉಚಿತ 10 ಕೆ.ಜಿ. ಅಕ್ಕಿ ವಿತರಣೆಯನ್ನು ಜಾರಿಗೊಳಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಮೊರೆ ಹೋಗಿರುವುದು ವಿಪರ್ಯಾಸ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ವಾಸ್ತವಿಕವಾಗಿ ಕೇಂದ್ರ ಸರಕಾರ ನೀಡುವ 5 ಕೆ.ಜಿ. ಉಚಿತ ಅಕ್ಕಿಯನ್ನು ಹೊರತುಪಡಿಸಿ, ರಾಜ್ಯ ಕಾಂಗ್ರೆಸ್ ಸರಕಾರವೇ ಉಚಿತ ಗ್ಯಾರಂಟಿಯನ್ವಯ ಹೆಚ್ಚುವರಿಯಾಗಿ 10 ಕೆ.ಜಿ. ಅಕ್ಕಿಯನ್ನು ನೀಡಬೇಕಾಗಿದೆ. ಈ ವಿಚಾರದಲ್ಲೂ ಕಾಂಗ್ರೆಸ್ ಮೋಸದ ತಂತ್ರವನ್ನು ಅನುಸರಿಸಿ ಜನತೆಯನ್ನು ಯಾಮಾರಿಸಲು ಸನ್ನದ್ಧವಾಗಿದೆ.

ಹೇಗಾದರೂ ಮಾಡಿ ರಾಜ್ಯದಲ್ಲಿ ಅಧಿಕಾರ ಪಡೆಯಲೇಬೇಕೆಂಬ ಒತ್ತಾಸೆಯಿಂದ ಬೇಕಾಬಿಟ್ಟಿ ಉಚಿತಗಳ ಗ್ಯಾರಂಟಿ ಕಾರ್ಡುಗಳನ್ನು ಯಥೇಚ್ಛವಾಗಿ ಮನೆ ಮನೆಗಳಿಗೆ ಹಂಚಿ ಜನತೆಯ ದಾರಿ ತಪ್ಪಿಸಿರುವ ಕಾಂಗ್ರೆಸ್ ಇದೀಗ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿಗಳನ್ನು ಪೂರೈಸಲು ಮೀನ ಮೇಷ ಎಣಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಆಹಾರ ಭದ್ರತಾ ಕಾಯ್ದೆಯಡಿ ಪ್ರತೀ 1 ಕೆ.ಜಿ. ಅಕ್ಕಿಗೆ ರೂ.29ರಂತೆ ವೆಚ್ಚವನ್ನು ಭರಿಸಿ ಕರ್ನಾಟಕ ರಾಜ್ಯದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ಮಾಸಿಕ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಇದೀಗ ಕೇಂದ್ರ ಸರಕಾರ ಪ್ರತೀ ತಿಂಗಳು ಉಚಿತವಾಗಿ ನೀಡುತ್ತಿರುವ 5 ಕೆ.ಜಿ. ಅಕ್ಕಿಯ ಪ್ರಮಾಣವನ್ನು ಹೆಚ್ಚಿಸಿ ಮಾಸಿಕ 10 ಕೆ.ಜಿ. ಯಂತೆ ಪೂರೈಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದಿರುವ ರಾಜ್ಯ ಕಾಂಗ್ರೆಸ್ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ರವರ ಹೇಳಿಕೆ ಹಾಸ್ಯಾಸ್ಪದವೆನಿಸಿದೆ.

ಈ ಹಿಂದೆ ಅನ್ನಭಾಗ್ಯ ಯೋಜನೆ ನಮ್ಮ ಸಾಧನೆ ಎಂದು ಬೀಗುತ್ತಿದ್ದ ರಾಜ್ಯ ಕಾಂಗ್ರೆಸ್ ಸರಕಾರ, ಕೊನೆಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ 5 ಕೆ.ಜಿ. ಅಕ್ಕಿಯನ್ನು ಪ್ರತೀ ತಿಂಗಳು ರಾಜ್ಯದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ಉಚಿತವಾಗಿ ವಿತರಿಸುತ್ತಿರುವುದನ್ನು ಒಪ್ಪಿಕೊಂಡಿದೆಯಾದರೂ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ನೀಡುವ ಉಚಿತ ಅಕ್ಕಿ ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡಿನ ಅಕ್ಕಿ ಹೇಗಾಗುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು 2014ರ ಚುನಾವಣಾ ಪ್ರಚಾರ ಭಾಷಣದಲ್ಲಿ, ಪ್ರತಿಯೊಬ್ಬ ಭಾರತೀಯನ ಖಾತೆಗೆ ರೂಪಾಯಿ 15 ಲಕ್ಷ ಹಾಕುತ್ತೇನೆ ಎಂದಿದ್ದಾರೆ ಎಂಬ ಹಸಿ ಸುಳ್ಳನ್ನು ಪದೇ ಪದೇ ಹೇಳುತ್ತಿರುವ ಕಾಂಗ್ರೆಸ್ ನಾಯಕರು ಸಾಧ್ಯವಿದ್ದರೆ ಈ ಬಗ್ಗೆ ಸೂಕ್ತ ಪುರಾವೆಯನ್ನು ನೀಡಲಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿ.ಕೆ. ಶಿವಕುಮಾರ್ ರವರಿಗೂ ಈ ರೀತಿಯ ವರ್ತನೆ ಶೋಭೆ ತರಲಾರದು.

ಒಂದು ಸುಳ್ಳನ್ನು ನೂರು ಬಾರಿ ಹೇಳುತ್ತಾ ಸತ್ಯವನ್ನಾಗಿಸಲು ಹೊರಟಿರುವ ಕಾಂಗ್ರೆಸಿಗರ ಯತ್ನ ಎಂದೂ ಫಲಿಸದು. ಎಲ್ಲಾ ಸಮಯದಲ್ಲಿ ಎಲ್ಲರನ್ನೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂಬುದನ್ನು ಕಾಂಗ್ರೆಸಿಗರು ಅರಿತುಕೊಳ್ಳಬೇಕಾಗಿದೆ.

ದೇಶದೆಲ್ಲೆಡೆ ಅಧಿಕಾರವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಹತಾಶ ಮನೋಭಾವದಲ್ಲಿ ರಾಜ್ಯದಲ್ಲಿ 5 ಉಚಿತಗಳ ಗ್ಯಾರಂಟಿಗಳನ್ನು ಷರತ್ತು ರಹಿತವಾಗಿ ಘೋಷಿಸಿದ್ದರೂ, ಇದೀಗ ವಾಸ್ತವಿಕತೆಯ ಅರಿವಾಗುತ್ತಿದ್ದಂತೆ ದಿನಕ್ಕೊಂದು ಷರತ್ತು, ಮಾರ್ಗಸೂಚಿಗಳನ್ನು ಅಳವಡಿಸುತ್ತಾ ಕಾಲಹರಣ ಮಾಡುತ್ತಿದೆ. ಇತರ ಕೆಲವು ರಾಜ್ಯಗಳಲ್ಲಿ ಗ್ಯಾರಂಟಿಗಳನ್ನು ಘೋಷಿಸಿ ಕೈ ಕೊಟ್ಟಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ 5 ಉಚಿತಗಳ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ ಎಂದಿರುವ ಮಾತನ್ನು ತಪ್ಪಿದಂತಾಗಿದೆ. ಈ ಪ್ರಕ್ರಿಯೆ ರಾಜ್ಯದ ಜನತೆ ಕಾಂಗ್ರೆಸ್ಸಿನ ಮೇಲೆ ನಂಬಿಕೆ ಕಳೆದುಕೊಳ್ಳಲು ನಾಂದಿ ಹಾಡಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply