ಉಡುಪಿ ಜಿಲ್ಲೆಯ ಎಲ್ಲಾ ಮೀನು ಮಾರುಕಟ್ಟೆಗಳು ಹೈಟೆಕ್ – ಶಾಸಕ ಯಶ್ ಪಾಲ್ ಸುವರ್ಣ

ಉಡುಪಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರುವ ಎಲ್ಲಾ ಮೀನುಮಾರುಕಟ್ಟೆಗಳನ್ನು ಆಧುನಿಕ ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿ ಗೊಳಿಸಿ, ಜಿಲ್ಲೆಯ ಸಾವಿರಾರು ಮಹಿಳಾ ಮೀನುಮಾರಾಟಗಾರರ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಎ.ಸುವರ್ಣ ತಿಳಿಸಿದ್ದಾರೆ. ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ನಡೆದ ಉಡುಪಿ ಮೀನುಮಾರಾಟಗಾರರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 13ನೇ ವಾರ್ಷಿಕ ಮಹಾಸಭೆಯಲ್ಲಿ ಸಮಸ್ತ ಮಹಿಳಾ ಮೀನುಮಾರಾಟಗಾರರ ವತಿಯಿಂದ ನೀಡಲಾದ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು. ಕರಾವಳಿಯಲ್ಲಿ ಮೀನುಗಾರಿಕೆ ಉದ್ಯಮ ಅಭಿವೃದ್ಧಿ ಮತ್ತು ಮೀನುಗಾರ ಸಮುದಾಯದ ಕಲ್ಯಾಣಕ್ಕಾಗಿ ವಿಶೇಷ ಅನುದಾನಗಳನ್ನು ಮೀಸಲಿಡುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಮೀನುಮಾರಾಟಗಾರರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಾದ ಬೇಬಿ ಎಚ್.ಸಾಲ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸತತ ವಾಗಿ ಲಾಭಗಳಿಸುತ್ತಾ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಮೀನುಮಾರಾಟಗಾರರ ಸಹಕಾರಿ ಸಂಘವು ಮುಂದಿನ ದಿನಗಳಲ್ಲಿ ಕಡಿಮೆ ಬಡ್ಡಿಯಲ್ಲಿ ಸ್ವಸಹಾಯ ಗುಂಪು ಸಾಲ‌ ನೀಡಲಿದೆ ಎಂದರು. ಇದೇ ಸಂದರ್ಭ ಸಂಘದ ಸದಸ್ಯರ ಮಕ್ಕಳಿಗೆ ಸುಮಾರು 1ಲಕ್ಷ ರೂ.ಮೌಲ್ಯದ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಜಯಂತಿ ಗುರುದಾಸ್ ಬಂಗೇರ, ನಿರ್ದೇಶಕರುಗಳಾದ ಸುರೇಶ್ ಬಿ.ಕುಂದರ್, ನಾರಾಯಣ ಪಿ.ಕುಂದರ್,ಹರೀಶ್ ಜಿ.ಕರ್ಕೇರ, ಲಕ್ಷ್ಮೀ ಆನಂದ್,ಸರೋಜ ಕಾಂಚನ್,ಭಾನುಮತಿ ಮೆಂಡನ್,ಇಂದಿರಾ ವಿ.ಕಾಂಚನ್ ಉಪಸ್ಥಿತರಿದ್ದರು. ನಿರ್ದೇಶಕ ರಾದ ಸುನೀತ ಜೆ.ಬಂಗೇರ ಸ್ವಾಗತಿಸಿದರು. ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.

Leave a Reply