ಎಸ್.ಸಿ.ಪಿ/ಟಿ.ಎಸ್.ಪಿ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ

ಉಡುಪಿ : ವಿಶೇಷ ಘಟಕ ಯೋಜನೆಯಡಿ ಪ.ಜಾತಿ ಹಾಗೂ ಪಂಗಡದವರ ಸಮಗ್ರ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನವನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಪ್ರತಿಶತ 100 ರಷ್ಟು ಅನುಷ್ಠಾನಗೊಳಿಸಬೇಕೆಂದು ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಎಸ್.ಸಿ.ಪಿ/ಟಿ.ಎಸ್.ಪಿ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ.ಜಾತಿ ಮತ್ತು ಪಂಗಡದವರ ಕಲ್ಯಾಣಾಭಿವೃದ್ಧಿಗೆ ಸರ್ಕಾರ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದರೊಂದಿಗೆ ಅವರುಗಳಿಗೆ ಮೂಲಭೂತ ಸೌಕರ್ಯಗಳು ಸೇರಿದಂತೆ ವೈಯಕ್ತಿಕ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯವಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ತಲುಪಿಸಲು ಅನುಕೂಲವಾಗುವ ರೀತಿಯಲ್ಲಿ ಜಿಲ್ಲೆಯ ಪ.ಜಾತಿ, ಪಂಗಡದವರ ನಿಖರ ಮಾಹಿತಿ ಸಂಗ್ರಹಿಸುವುದರೊಂದಿಗೆ ಅವರುಗಳಿಗೆ ಭೂ ಒಡೆತನ, ನಿವೇಶನ, ವಾಸಿಸುವ ಮನೆ, ವಿದ್ಯುಚ್ಛಕ್ತಿ ಸೌಲಭ್ಯ, ಸೇರಿದಂತೆ ಅವರ ಆರ್ಥಿಕ ಮಾಹಿತಿಗಳನ್ನು ಸಂಗ್ರಹಿಸಿದ್ದಲ್ಲಿ ಅವರುಗಳ ಅವಶ್ಯಕತೆಗನುಗುಣವಾಗಿ, ಈ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯಗಳನ್ನು ತಲುಪಿಸಲು ಸಹಕಾರವಾಗುತ್ತದೆ.

ಈ ಕಾರ್ಯವನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇನ್ನೊಂದು ವಾರದೊಳಗೆ ಮಾಹಿತಿ ಸಂಗ್ರಹಿಸಬೇಕೆಂದು ಸೂಚನೆ ನೀಡಿದರು. ಪ.ಜಾತಿ ಪಂಗಡದವರ ಮನೆಗಳಿಗೆ ಸರ್ಕಾರದಿಂದ ಉಚಿತ ವಿದ್ಯುಚ್ಛಕ್ತಿ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಈಗಾಗಲೇ ಅನುಷ್ಠಾನಗೊಳಿಸಲಾಗುತ್ತಿದೆ.

ಆದರೆ ಫಲಾನುಭವಿಗಳಿಗೆ ಕೆಲವೊಮ್ಮೆ ಈ ಯೋಜನೆಯ ಮಾಹಿತಿಗಳು ಲಭ್ಯವಿಲ್ಲದೇ ಅರ್ಜಿಯನ್ನು ಸಲ್ಲಿಸಿರುವುದಿಲ್ಲ. ಇವರುಗಳನ್ನು ಗ್ರಾಮ ಪಂಚಾಯತ್‌ವಾರು ಗುರುತಿಸುವುದರೊಂದಿಗೆ ಫಲಾನುಭವಿಗಳನ್ನಾಗಿಸಬೇಕು ಎಂದರು. ವಸತಿ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಿ ಅವರುಗಳಿಗೆ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮವನ್ನು ಸರಳಗೊಳಿಸಲಾಗಿದೆ.

ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ಸ್ಥಳೀಯ ಸಂಸ್ಥೆಗಳಿಂದ ವಸತಿ ಯೋಜನೆಯಡಿ, ಗೃಹ ನಿರ್ಮಾಣ ಮಾಡಲು ಆರ್ಥಿಕ ನೆರವು ಒದಗಿಸಲು ಪ್ರಸ್ತಾವನೆಗಳನ್ನು ಬ್ಯಾಂಕ್‌ಗಳಿಗೆ ಕಳುಹಿಸಿದಾಗ, ರಾಷ್ಟ್ರೀಕೃತ ಬ್ಯಾಂಕುಗಳು ನಿಯಮಾನುಸಾರ ಶೀಘ್ರದಲ್ಲಿಯೇ ಅವರುಗಳಿಗೆ ಆರ್ಥಿಕ ನೆರವು ಒದಗಿಸುವುದರೊಂದಿಗೆ ಸರ್ಕಾರದ ಯೋಜನೆಯನ್ನು ಅನುಷ್ಠಾನಗೊಳಿಸಲು ಸಹಭಾಗಿತ್ವರಾಗಬೇಕು ಎಂದರು.
ಜಿಲ್ಲೆಯ ಎಲ್ಲಾ ಇಲಾಖೆ ಅಧಿಕಾರಿಗಳಿಂದ ಸರ್ಕಾರಿ ನಿಗಧಿಪಡಿಸಿದ ಗುರಿ, ಇಲ್ಲಿಯವರೆಗೆ ಸಾಧಿಸದ ಭೌತಿಕ ಮತ್ತು ಆರ್ಥಿಕ ಸಾಧನೆಯ ಬಗ್ಗೆ ಮಾಹಿತಿ ಪಡೆದ ಸಚಿವರು ಎಲ್ಲಾ ಇಲಾಖೆಗಳು ಮಾರ್ಚ್ ಅಂತ್ಯದೊಳಗೆ ಸಂಪೂರ್ಣ ಗುರಿ ಸಾಧಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ವಿದ್ಯಾರ್ಥಿವೇತನಕೆ ಅರ್ಜಿ ಸಲ್ಲಿಸಿದ ಈ ಸಮುದಾಯದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸೌಲಭ್ಯ ಒದಗಿಸಬೇಕು. ಒಂದೊಮ್ಮೆ ತಾಂತ್ರಿಕ ಕಾರಣಗಳಿಂದ ಅವರುಗಳ ಅರ್ಜಿಗಳು ವಿಲೇವಾರಿಯಲ್ಲಿ ಗೊಂದಲ ಉಂಟಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿಖರತೆಯನ್ನು ಆಧರಿಸಿ ಮಂಜೂರು ಮಾಡಬೇಕು ಎಂದರು.

ಸಭೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ರಾಜ್ಯ ಎಸ್.ಸಿ.ಪಿ -ಟಿ.ಎಸ್.ಪಿ ಕೋಶದ ನಿರ್ದೇಶಕಿ ಊರ್ಮಿಳಾ, ಹಿಂದುಳಿದ ವರ್ಗಗಳ ಇಲಾಖೆಯ ಅಪರ ನಿರ್ದೇಶಕ ಪ್ರದೀಪ್, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಅನಿತಾ ಮಡ್ಲೂರು ಹಾಗೂ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply