ಮೀನುಗಾರಿಕೆ ದೋಣಿಗಳಿಗೆ ಪರಿಹಾರಕ್ಕೆ ಮುಖ್ಯಮಂತ್ರಿಗಳಿಗೆ ಮನವಿ:ಯಶ್‌ಪಾಲ್ ಸುವರ್ಣ

​​ಹವಾಮಾನ ವೈಪರಿತ್ಯದಿಂದ ಹಾನಿಗೊಳಗಾದ ಮೀನುಗಾರಿಕೆ ದೋಣಿಗಳಿಗೆ ಪರಿಹಾರಕ್ಕೆ ಮುಖ್ಯಮಂತ್ರಿಗಳಿಗೆ ಮನವಿ 
ಹವಾಮಾನ ವೈಪರಿತ್ಯ ಪರಿಣಾಮದಿಂದ ಸಂಪೂರ್ಣ ಹಾನಿಗೊಳಗಾದ ಮೀನುಗಾರಿಕೆಗೆ ತೆರಳಿದ ಬೋಟ್ ಹಾಗೂ ನಾಡದೋಣಿ, ಪಂಜರ ಕೃಷಿಗಳಿಗೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಲ್ಲಿ ಹಾಗೂ ವಿಶೇಷ ಪ್ರಕರಣದಡಿ ಮುಖ್ಯಮಂತ್ರಿಗಳು ಗರಿಷ್ಟ ಪರಿಹಾರ ಮಂಜೂರು ಮಾಡುವಂತೆ ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪ ಹಾಗೂ ಮೀನುಗಾರಿಕೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ  ಯಶ್ಪಾಲ್ ಸುವರ್ಣ ಮನವಿ ಸಲ್ಲಿಸಿದರು.
ಕೊರೋನಾ ಮಾರ್ಗಸೂಚಿಯಂತೆ ಸರಕಾರದ ಅನುಮತಿ ಪಡೆದು ಈ ಬಾರಿಯ ಮೀನುಗಾರಿಕೆ ಸೆಪ್ಟೆಂಬರ್ ೧ ರಿಂದ ಅಧಿಕೃತವಾಗಿ ಆರಂಭಗೊಂಡಿದ್ದು, ಕಳೆದ ಹಲವು ದಿನಗಳ ಹವಾಮಾನ ವೈಪರಿತ್ಯ ಮತ್ತು ಪ್ರಾಕೃತಿಕ ವಿಕೋಪಗಳ ಪರಿಣಾಮದಿಂದ ಕರಾವಳಿ ಜಿಲ್ಲೆಯ ವಿವಿಧೆಡೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗಳು, ಲಂಗರು ಹಾಕಿದ್ದ ನಾಡದೋಣಿಗಳು ಅವಘಡಕ್ಕೆ ತುತ್ತಾಗಿ ಹಾಗೂ ಪ್ರವಾಹದಿಂದ ಹಲವು ಪಂಜರ ಕೃಷಿ ಚಟುವಟಿಕೆ ಹಾನಿಯಾಗಿ ಸುಮಾರು 5 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.

ಈಗಾಗಲೇ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಸುಮಾರು 6 ತಿಂಗಳ ಕಾಲ ಮೀನುಗಾರಿಕೆ ಸ್ಥಗಿತಗೊಂಡು ಮೀನುಗಾರರು ತೀರ ತೊಂದರೆಗೆ ಸಿಲುಕಿ ಸಂಕಷ್ಟದಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಡಿಸೇಲ್ ಬೆಲೆ ಏರಿಕೆ. ಮೀನುಗಾರಿಕೆ ಪರಿಕರಗಳ ದುಬಾರಿ ಬೆಲೆ, ಕಾರ್ಮಿಕರ ಸಮಸ್ಯೆ, ದುಬಾರಿ ನಿರ್ವಹಣಾ ವೆಚ್ಚ ಸಹಿತ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಮೀನುಗಾರರು, ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಬೋಟ್ ಹಾಗೂ ನಾಡದೋಣಿಗಳ ಕೋಟ್ಯಾಂತರ  ರೂಪಾಯಿಗಳ ನಷ್ಟ ಮೀನುಗಾರರನ್ನು ಕಂಗೆಡಿಸಿದೆ.

ಈ ಎಲ್ಲಾ ಸಮಸ್ಯೆಗಳ ಗಂಭೀರತೆಯನ್ನು ಪರಿಗಣಿಸಿ ಮೀನುಗಾರರಿಗೆ ವಿಶೇಷ ಪ್ರಕರಣದಡಿ ಗರಿಷ್ಟ ಪ್ರಮಾಣದ ಪರಿಹಾರವನ್ನು ಮಂಜೂರು ಮಾಡಿ ಆತಂಕಕ್ಕೀಡಾಗಿರುವ ಮೀನುಗಾರರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯಕ್ಕೆ ಮುಂದಾಗುವಂತೆ ಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಶಾಸಕರಾದ ಕೆ ರಘುಪತಿ ಭಟ್, ಶ್ರಸುನೀಲ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತಿಯಲ್ಲಿ ನೀಡಿದ ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸೂಕ್ತ ಪರಿಹಾರ ಮಂಜೂರು ಮಾಡಲು ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದ್ದಾರೆ.

 
 
 
 
 
 
 
 
 
 
 

Leave a Reply