ಆರಾಧನೆ-ಮನೋರಂಜನೆ-ನವರಾತ್ರಿ‌-9: ಕುಂಡಂತಾಯ

ಜಗಜ್ಜನನಿಯ ಆರಾಧನೆಯಲ್ಲಿ ಅವರ್ಣನೀಯ ಆನಂದವಿದೆ. ಎಲ್ಲಿ ಆನಂದವಿರುತ್ತದೋ ಅಲ್ಲಿ ನೈಜವಾದ ಸಂಭ್ರಮ ,ವೈಭವಗಳಿರುತ್ತವೆ .ಇದೇ ಮಂಗಲಕರವಾದುದು. ಇದು ಸೌಮಾಂಗಲ್ಯದ ಪರಿಣಾಮವಾದುದರಿಂದ ಮನಸ್ಸು ,ಭಾವ ಗಳು ಅರಳುವ ಅನಿರ್ವಚನೀಯ ಅನುಭವದ ಕ್ಷಣಗಳು. ಈ ಸಂದರ್ಭದ ಸಂತೋಷದ ‌ಅಭಿವ್ಯಕ್ತಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಾಧನಾ ಶ್ರದ್ಧೆಗೆ ಸಹಜವಾಗಿ ಜೋಡಿಸಲ್ಪಟ್ಟುವು. ಆದುದರಿಂದಲೇ ವಿವಿಧ ಧಾರ್ಮಿಕ -ಸಾಂಸ್ಕೃ ತಿಕ ಪರ್ವಗಳೊಂದಿಗೆ ನವರಾತ್ರಿ ಸಂಪನ್ನಗೊಳ್ಳುತ್ತದೆ. ಆದರೆ ಈ ಎಲ್ಲ ವ್ರತ ನಿಷ್ಠೆಯಲ್ಲಿ , ಶಿಸ್ತಿನಲ್ಲಿ , ಗೌಜಿಯಲ್ಲಿ‌, ಗದ್ದಲದಲ್ಲಿ, ವೈಭವೀಕರಣದಲ್ಲಿ ಒಂದು ಸಲುಗೆ ಇದೆ .

ಅದು ಮೂಲದಿಂದಲೇ ಸಾಗಿಬಂದ ಅವಿನಾಭಾವ ಸಂಬಂಧ .’ಅಮ್ಮ’ನ ಸನ್ನಿಧಿಯಲ್ಲಿ, ತೋಳತಕ್ಕೆಯಲ್ಲಿ, ಮಡಿಲಲ್ಲಿ ನಕ್ಕು ನಲಿದು ,ಕುಣಿದು ಕುಪ್ಪಳಿಸಿ, ಅತ್ತುಕರೆದು ಆಕೆಯ ಸೆರಗು ಹಿಡಿದು ನಡೆದಾಡುತ್ತಾ ಪ್ರಕೃತಿಯ ವಿಸ್ಮಯವನ್ನು ಕಾಣುತ್ತಾ , ಒಟ್ಟಿನಲ್ಲಿ ಜಗತ್ತನ್ನು ಪರಿಚಯಿಸಿಕೊಂಡ ಭಾವವಿರುತ್ತದೆ, ಶೀತೋಷ್ಣಗಳನ್ಮು , ಸಿಹಿ ಕಹಿಗಳನ್ನು‌, ಬೇಕು – ಬೇಡಗಳನ್ನು ಗುರುತಿಸಿಕೊಂಡಾಗಲೇ ಗಾಯನ, ವಾದನ, ನರ್ತನ, ಬಣ್ಣಗಳು ನಮ್ಮನ್ನು ಆಕರ್ಷಿಸುತ್ತವೆ. ಹಾಗಾಗಿಯೇ ಅಮ್ಮನ ಪರ್ವಾಚರಣೆಯಲ್ಲಿ ಇಂತಹ ಲೀಲಾವಿನೋದಗಳಿಗೆ ವಿಫುಲ ಅವಕಾಶ.

ಈ ಅಂತಸ್ಥವಾದ ಭಾವಗಳ ಸಂಘರ್ಷಕ್ಕೆ ಅಭಿವ್ಯಕ್ತಿಯಾಗುವುದಕ್ಕೆ ಮಾರ್ಗಗಳು ಹಲವು. ದೇವಿಯ ಆರಾಧನಾಪರ್ವದ ಆನಂದದಲ್ಲಿ‌ ಅಮ್ಮನ ಮಡಿಲಲ್ಲಿ ಆಡಿದ ಆಟ-ಪಾಠ -ವಿನೋದಗಳೇ ಮರುಕಳಿಸುವುದು ನಿಯಮ. ಅದು ಸಾಂಸ್ಕೃತಿಕ ಶಿಸ್ತಿಗೆ ಒಳಪಟ್ಟು ಸುವ್ಯವಸ್ಥಿತವಾಗುವುದರಿಂದ ಅದು ಧಾರ್ಮಿಕದೊಂದಿಗೆ ಸಂಯೋಗಗೊಂಡು‌ ‘ಧಾರ್ಮಿಕ- ಸಾಂಸ್ಕೃತಿಕ’ ಎಂದಾಗುವುದು. ಧಾರ್ಮಿಕವಾದುದು ಅದರ ವ್ಯಾಪ್ತಿಯೊಳಗೆ ವಿಧಿ ಬದ್ಧವಾಗಿ ನಡೆಯುತ್ತದೆ .ಯಾವುದೇ ಕಾರಣಕ್ಕೆ ನಿಯಮಗಳಲ್ಲಿ ಹೊಂದಾಣಿಕೆಗಳಿಲ್ಲ. 

ಆದರೆ ಸಾಂಸ್ಕೃತಿಕವಾದುದು‌ ವಿಸ್ತೃತ ಹರವನ್ನು ಪಡೆದಿರುತ್ತವೆ. ಇಲ್ಲಿ ಮನೋರಂಜನೆಗಳಿರುತ್ತವೆ, ಶಿಸ್ತಿನ ಪೂಜೆಯ ಬಳಿಕ ಒಂದಿನಿತು ಮನೋರಂಜನೆ ಸ್ವಾಗತಾರ್ಹ. ಪೂಜೆಯ ಹದಿನಾರು ಅಂಗಗಳಲ್ಲಿ ನಾಟ್ಯಕ್ಕೆ, ಸಂಗೀತಕ್ಕೆ, ವೇಷ ಧಾರಣೆಗೆ, ಕುಣಿತಗಳೆಲ್ಲ ಪರ್ವಕಾಲದಲ್ಲಿ ಸೇರಿಕೊಂಡವು. ಏಕಾಗ್ರತೆಯ ಆರಾಧನಾ ವಿಧಿಗಳೆಲ್ಲ ಮುಗಿದಾಗ ಆರಂಭ ವಾಗುವ ಗಾಯನ -ವಾದನ – ನರ್ತನ – ಬಣ್ಣಗಳು ಒಮ್ಮೆ ನಮ್ಮನ್ನು ಮಾಯಾಲೋಕಕ್ಕೆ ಕೊಂಡೊಯ್ಯುತ್ತವೆ. ಬಳಿಕ ಸಹಜ ಸ್ಥಿತಿಗೆ ಮರಳುತ್ತೇವೆ. ಆದುದರಿಂದ ಗೀತ, ನೃತ್ಯಾದಿಗಳು ಆರಾಧನೆಯ ಅಂಗವಾಗಿರಬೇಕು .

ದುರ್ಗೆಯನ್ನು ಸ್ಮರಿಸಿದರೆ….  ಸಪ್ತಶತೀಯಲ್ಲಿ : ಮಹಿಷಾದಿಗಳನ್ನು ವಧಿಸಿ ಲೋಕಕ್ಕೆ, ಧರ್ಮಕ್ಕೆ ಒದಗಿದ
ಆಪತ್ತನ್ನು ಪರಿಹರಿಸಿದ ಸಿಂಹವಾಹಿನಿಯಾದ ಮಹಾಮಾತೆಯನ್ನು ಇಂದ್ರಾದಿ ಸುಮನಸರು ಸ್ತುತಿಸುತ್ತಾರೆ .ಆ ಸ್ತುತಿಯ ಒಂದು ಶ್ಲೋಕದ ಅರ್ಥವು ಇಂತಿದೆ: “ಹೇ ದುರ್ಗೆ ,ನಿನ್ನನ್ನು ಸ್ಮರಿಸಿದರೆ ಎಲ್ಲ ಜೀವಿಗಳ ಭಯವನ್ನೂ ಹೋಗಲಾಡಿ ಸುತ್ತಿಯೇ, ಸುಖವಾಗಿರುವವರಿಂದ ಸ್ಮರಿಸಲ್ಪಟ್ಟಾಗ ಅಂತವರಿಗೆ ಅತ್ಯಂತ ಶುಭಬುದ್ಧಿಯನ್ನು ಕೊಡುತ್ತಿಯೇ, ದಾರಿದ್ಯ – ದುಃಖ – ಭಯಗಳನ್ನು ಹೋಗಲಾಡಿಸುವವಳೇ ನೀನಲ್ಲದೆ ಮತ್ತಾರು ಸರ್ವಪ್ರಾಣಿಗಳ ಉಪಕಾರಕ್ಕೋಸ್ಕರ ಯಾವಾಗಲೂ ದಯಾಪೂರಿತ ಚಿತ್ತರಾಗಿರುತ್ತಾರೆ”. ಸಮಷ್ಟಿಯನ್ನು ಉದ್ದೇಶಿಸಿ, ಸಮಷ್ಟಿಯ ಶ್ರೇಯಸ್ಸನ್ನು ಬಯಸಿದ ಹಲವು ಭಾವ ಪೂರ್ಣವಾದ ಶ್ಲೋಕಗಳಿವೆ .

ಹನ್ನೊಂದನೇ ಅಧ್ಯಾಯವೂ ನಾರಾಯಣೀ ಸ್ತುತಿಯಾಗಿದೆ :  ಹೇ ಗೌರಿ ,ಹೇ ನಾರಾಯಣಿ ಸರ್ವ ಮಂಗಲಗಳ ಮಾಂಗಲ್ಯ ಸ್ವರೂಪಳೇ ಶಿವೆಯೇ , ಸರ್ವಾಭೀಷ್ಟಗಳನ್ನೂ ಸಾಧಿಸಿಕೊಡುವವಳೆ, ಶರಣು ಯೋಗ್ಯಳೇ. ತ್ರಿನಯನಳೇ ನಿನಗೆ ನಮಸ್ಕಾರ. ” ಹೇ ನಾರಾಯಣಿ, ಶರಣಾಗತರು ದೀನರು, ಆರ್ತರು, ಮುಂತಾದವರ ರಕ್ಷಣೆಯಲ್ಲಿ ನಿರತಳಾಗಿರು ವವಳೇ ಎಲ್ಲರ ದುಃಖವನ್ನೂ ನಾಶಮಾಡುವವಳೇ ನಿನಗೆ ನಮಸ್ಕಾರ”

ಈಕಾಲಕ್ಕೆ ಪ್ರಸ್ತುತವಾಗಿರುವ ಶ್ಲೋಕಾರ್ಥ ಹೀಗಿದೆ : ನೀನು ಸಂತುಷ್ಟಳಾದರೆ ಸಕಲರೋಗಗಳನ್ನೂ ನಾಶಮಾಡುವೆ .ಕುಪಿತಳಾದರೆ ಸಕಲ ಕಾಮನೆಗಳನ್ನು‌ಮತ್ತು ಅಭೀಷ್ಟಗಳನ್ನೂ ನಾಶಮಾಡುವೆ .ನಿನ್ನನ್ನು‌ ಆಶ್ರಯಿಸಿದ ಮನುಜರಿಗೆ ಯಾವ ವಿಪತ್ತೂ ಒದಗುವುದಿಲ್ಲ .ನಿನ್ನಲ್ಲಿ ಆಶ್ರಯವನ್ನು ಪಡೆದವರಾದರೋ ಇತರರಿಗೆ ಆಶ್ರಯವನ್ನು ನೀಡಬಲ್ಲಳು. ಜಗನ್ಮಾತಾ ….ನಿನ್ನನ್ನು ಹೀಗೆ ಕೊಂಡಾಡುತ್ತಾ, ಸ್ತುತಿಸುತ್ತಾ ಮತ್ತೊಮ್ಮೆ ಪ್ರಾರ್ಥಿಸುತ್ತೇನೆ :

“ಶರನ್ನವರಾತ್ರಿ-ಅಧಿಕ ಮಾಸದಲ್ಲಿ ಸನ್ನಿಹಿತವಾದರೂ ‘ಅಮ್ಮ’ನ ಆರಾಧನೆಗೆ ಒದಗಿದ ಹೆಚ್ಚುವರಿ ಅವಕಾಶ ಎಂದು ತಿಳಿಯೋಣ .ನವರಾತ್ರಿ ಪರ್ವಕಾಲದಲ್ಲಿ‌ ಭವಾನಿಯಾಗಿ ಭದ್ರಮಂಟಪದಲ್ಲಿ ಉಪಸ್ಥಿತಳಾಗಿರುವ , ಲೋಕಮಾತೆಯಾಗಿ ಪೂಜೆಗೊಳ್ಳುವ ‘ಜಗದವ್ವೆ’. ಭವವನ್ನು‌ ಉದ್ಧರಿಸು. ಶಾಂತಿಯನ್ನು ಅನುಗ್ರಹಿಸು. ವ್ಯಗ್ರ ಪ್ರಕೃತಿಯಾಗಿ ಮಹಾವ್ಯಾಧಿ ಗಳಾಗಿ ಮನುಕುಲವನ್ನು ಮುನಿಯಬೇಡ. ಅಪರಾಧ ಮತ್ತು ಅಭಿಯೋಗಗಳು ಸಹಸ್ರವಿದ್ದರೂ .
‘ಅಮ್ಮ’ನಾಗಿ ಕ್ಷಮಿಸಿ ಸಂರಕ್ಷಿಸು .(ಸಂಗ್ರಹ)

 
 
 
 
 
 
 
 
 
 
 

Leave a Reply