ಮಂಗಳೂರು: ಪೊಲೀಸ್ ಅಧಿಕಾರಿಗಳಿಗೆ ತುಳು ಮಮಕಾರ 

ಮಂಗಳೂರು: ಇಲ್ಲಿನ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು, ಅವರ ಸಾಮೀಪ್ಯದಲ್ಲಿ ಕೆಲಸ ಮಾಡಬೇಕಾದರೆ ತುಳು ಕಲಿಯುವುದು ಅಗತ್ಯ. ಅಧಿಕಾರಿಗಳು ಮತ್ತು ಸಿಬ್ಬಂದಿ ಕನಿಷ್ಠ ತುಳುವಿನಲ್ಲಿ ಮಾತನಾಡಲು ಕಲಿಯಬೇಕು ಎಂದು ನಗರ ಪೊಲೀಸ್ ಕಮಿಷನರ್‌ ಎನ್‌. ಶಶಿಕುಮಾರ್‌ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಕಾರದಲ್ಲಿ ನಗರದ ಪೊಲೀಸ್ ಕಮಿಷನರ್ ಕಚೇರಿ ಸಭಾಂಗಣದಲ್ಲಿ ಆರಂಭವಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತುಳು ಭಾಷೆ ಕಲಿಸುವ ಒಂದು ತಿಂಗಳ ತುಳು ಕಲಿಕಾ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಕೆಲಸಕ್ಕೆ ಸೇರಿದ 50 ಮಂದಿ ಪೊಲೀಸರಿಗೆ ಮೊದಲ ಹಂತದಲ್ಲಿ ಆ. 5 ರಿಂದ ಸೆ. 4 ರ ವರೆಗಿನ ತುಳು ಭಾಷೆಯನ್ನು ಕಲಿಸಲಾಗುತ್ತಿದೆ. ಅಗತ್ಯ ಬಿದ್ದರೆ ಮುಂದೆ ಇನ್ನೊಂದು ತಂಡಕ್ಕೂ ಇದನ್ನು ವಿಸ್ತರಿಸುವ ಉದ್ದೇಶವಿದೆ ಎಂದು ತಿಳಿಸಿದರು.

ತುಳು ಭಾಷೆಗೆ ಸ್ವತಂತ್ರ ಲಿಪಿ ಇದೆ. ತುಳು ಭಾಷೆಗೆ 2ಸಾವಿರ ವರ್ಷಗಳ ಹಾಗೂ ತುಳು ಲಿಪಿಗೆ 1200 ವರ್ಷಗಳ ಇತಿಹಾಸವಿದೆ. ಸಂಸ್ಕೃತಕ್ಕೆ ಲಿಪಿ ಕೊಟ್ಟಿದ್ದು ತುಳು. ಮಲಯಾಳ ಲಿಪಿಯ ಮೂಲ ಕೂಡಾ ತುಳು. ತುಳು ಭಾಷೆಗೆ ರಾಜ್ಯ ಮತ್ತು ರಾಷ್ಟ್ರ ಭಾಷೆ ಎಂಬ ಮಾನ್ಯತೆ ಸಿಕ್ಕಿದೆ.

ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡುವ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಹೇಳಿದರು.

ಸರ್ಕಾರಿ ಉದ್ಯೋಗದಲ್ಲಿ ಇರುವವರು ಪ್ರಾದೇಶಿಕ ಭಾಷೆ ಕಲಿಯುವ ಅಗತ್ಯವಿದ್ದು, ಈ ದಿಸೆಯಲ್ಲಿ ಎಲ್ಲ ಸರ್ಕಾರಿ ಇಲಾಖೆಗಳ ಸಿಬ್ಬಂದಿಗೆ ತುಳು ಕಲಿಸುವ ಯೋಜನೆ ಇದೆ. ಪೊಲೀಸ್ ಕಮಿಷನರ್‌ ಇಚ್ಛಾಶಕ್ತಿ ತೋರಿ ಮುಂದೆ ಬಂದಿರುವ ಕಾರಣ ಮೊದಲ ಹಂತದಲ್ಲಿ ಪೊಲೀಸರಿಗೆ ತುಳು ಕಲಿಕಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ತುಳು ಕಲಿಸಲು ಪಠ್ಯವನ್ನು ತಯಾರಿಸಲಾಗಿದೆ ಎಂದರು. ತುಳು ಲಿಪಿ ಬಳಕೆಗೆ ಉತ್ತೇಜನ ನೀಡಬೇಕು. ಅದೇ ರೀತಿ ಎಲ್ಲ ಪೊಲೀಸ್ ಠಾಣೆಗಳಲ್ಲಿ ತುಳು ಲಿಪಿಯಲ್ಲಿ ನಾಮ ಫಲಕ ಹಾಕಬೇಕು ಎಂದು ಸಲಹೆ ಮಾಡಿದರು.

 
 
 
 
 
 
 
 
 
 
 

Leave a Reply