ಮಣಿಪಾಲ ಎಂಡ್ ಪಾಯಿಂಟ್ ​ನಲ್ಲಿ ಚಿರ​ತೆ  

ಉಡುಪಿ: ಮಣಿಪಾಲ ಎಂಡ್ ಪಾಯಿಂಟ್ ಸಮೀಪದ ಕೋಡಿ ಎಂಬಲ್ಲಿ ಹಲವು ದಿನಗಳಿಂದ ಭೀತಿ ಹುಟ್ಟಿಸಿದ್ದ ಚಿರತೆಯು ಬೋನಿನಲ್ಲಿ ಸೆರೆಯಾಗಿದೆ. ಅರಣ್ಯ ಇಲಾಖೆ ಚಿರತೆಯನ್ನು ಸ್ಥಳಾಂತರಿಸುತ್ತಿದೆ.  ಹೆರ್ಗ ಗ್ರಾಮದ ಅರ್ಬಿ, ವಿಜಯನಗರ ಸುತ್ತಮುತ್ತ ಹಲವಾರು ದಿನಗಳಿಂದ ಚಿರತೆ ಸಂಚಾರ ಸ್ಥಳೀಯರಲ್ಲಿ ಭೀತಿ ಹುಟ್ಟಿಸಿತ್ತು. ಈ ಪ್ರದೇಶದ ಮನೆಗಳ ಹಟ್ಟಿಯಲ್ಲಿದ್ದ ಆಕಳ ಕರು, ನಾಯಿ, ಕೋಳಿಗಳನ್ನು ಹಿಡಿದು ​ತಿನ್ನುತಿತ್ತು. ಚಿರತೆಯ ಉಪಟಳ ಹೆಚ್ಚಾಗಿದ್ದರಿಂದ ಜನರು ರಾತ್ರಿ ವೇಳೆ ಮನೆಯಿಂದ ಹೊರಗೆ ಬರುವುದಕ್ಕೆ ಹೆದರುತ್ತಿದ್ದರು. ನಂತರ ಸ್ಥಳೀಯ ನಗರಸಭೆಯ ಚುನಾಯಿತ ಪ್ರತಿನಿಧಿ ವಿಜಯಲಕ್ಷ್ಮೀ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಇಲಾಖೆ ಅರ್ಬಿ ಎಂಬಲ್ಲಿ 15 ದಿನಗಳ ಹಿಂದೆ ಬೋನು ಇರಿಸಿತ್ತು. ಬಳಿಕ ಅದನ್ನು ಕೋಡಿಗೆ ಸ್ಥಳಾಂತರಿಸಲಾಗಿತ್ತು. ಸಂಜೆ ಬೋನಿಗೆ ನಾಯಿ ಮರಿಯನ್ನು ಕಟ್ಟ ಲಾಗುತ್ತಿತ್ತು. ನಾಯಿ ಮರಿಯ ಆಸೆಯಿಂದ ಬಂದ ಚಿರತೆ, ರಾತ್ರಿ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಬೋನಿನೊಳಗೆ ಚಿರತೆ ಬಿದ್ದಿರುವು ದನ್ನು ಇಂದು ನಸುಕಿನ ವೇಳೆ ಸ್ಥಳೀಯರು ಗಮನಿಸಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಚಿರತೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸುಮಾರು ಮೂರುವರೆ ವರ್ಷ ಪ್ರಾಯದ ಹೆಣ್ಣು ಚಿರತೆ ಇದಾಗಿದೆ. ಬೋನಿಗೆ ಬಿದ್ದ ಚಿರತೆಯನ್ನು ಸುರಕ್ಷಿತವಾಗಿ ಸದ್ಯ ಅರಣ್ಯ ಇಲಾಖೆಯ ಉಡುಪಿ ವಲಯ ಕಚೇರಿಗೆ ಸ್ಥಳಾಂತರಿಸಿ, ಬಳಿಕ ವಲಯ ಅರಣ್ಯಾಧಿಕಾರಿ ಅವರ ಸೂಚನೆಯಂತೆ ಸುರಕ್ಷಿತ ಪ್ರದೇಶದಲ್ಲಿ ಬಿಡಲಾಗುವುದು ಎಂದು ಅರಣ್ಯ ಸಿಬ್ಬಂದಿ​ಗಳು  ಮಾಹಿತಿ ನೀಡಿದ್ದಾರೆ. ಸರಳೇಬೆಟ್ಟು ವಾರ್ಡಿನ ನಗರಸಭೆ ಸದಸ್ಯೆ ವಿಜಯಲಕ್ಷ್ಮೀ, ಸ್ಥಳೀಯರಾದ ದಿವಾಕರ್ ನಾಯ್ಕ್, ಉದಯ್, ರಮೇಶ್ ಮೊದ
ಲಾದವರು ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಾರೆ.​
 
 
 
 
 
 
 
 
 
 
 

Leave a Reply