ಕೂಚುಪುಡಿ ನೃತ್ಯಾರಾಧನಾ

ಉಡುಪಿ: ಪರ್ಯಾಯ ಶ್ರೀ ಕೃಷ್ಣಾಪುರ ಮಠ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ರಾಧಾಕೃಷ್ಣ ನೃತ್ಯ ನಿಕೇತನ(ರಿ.) ಉಡುಪಿ ಇವರಿಂದ ಕೂಚುಪುಡಿ ನೃತ್ಯಾರಾಧನಾ ಕಾರ್ಯಕ್ರಮ ನಡೆಯಿತು. ಇದೊಂದು ಅಪ್ಪಟ ಕೂಚುಪುಡಿ ಸಂಪ್ರದಾಯದ ನೃತ್ಯ
ಕಾರ್ಯಕ್ರಮವಾಗಿತ್ತು.

ಮೊದಲನೆಯದಾಗಿ ಕೂಚುಪುಡಿ ಸಂಪ್ರದಾಯದಂತೆ “ಅಂಬಾ ಪರಾಕು” ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ, ನೃತ್ಯದಲ್ಲಿ ಪ್ರಥಮವಾಗಿ ‘ಪೂರ್ವರಂಗ’ ತಾಳಮಾಲಿಕೆ, ಹಂಸಧ್ವನಿ ರಾಗದೊಂದಿಗೆ ಪಂಚ ಜಾತಿಯ ಜತಿಗಳನ್ನು ಕೂಡಿಕೊಂಡು
ಕಲಾವಿದರು ನೃತ್ಯ ಕಲಶದೊಂದಿಗೆ ಮಾವಿನ ಕೊಡಿಯಿಂದ ರಂಗವೇದಿಕೆಯನ್ನು ಪುಣ್ಯಾರ್ಚನೆಗೈದು , ರಂಗವಲ್ಲಿ ಹಾಕಿ ಕೂಚುಪುಡಿ ಧ್ವಜ ತಂದು, ಧೂಪಾರತಿಯಿಂದ ರಂಗವನ್ನು ಪೂಜಿಸಿ, ಹೂಗಳನ್ನು ಅರ್ಪಿಸಿ ಗಣಪತಿ ಸ್ತುತಿಯಾದ “ತಾಂಡವ ನೃತ್ಯ
ಕರೇ ಗಜಾನನ” ಪ್ರಸ್ತುತ ಪಡಿಸಿದರು . ನಂತರ “ಬ್ರಹ್ಮಾಂಜಲಿ”ರಾಗಮಾಲಿಕೆ ಆದಿತಾಳದೊಂದಿಗೆ ‘ಅಂಗಿಕಂ ಭುವನಮ್’, ‘ಗುರುಬ್ರಹ್ಮ’ ಹಾಗೂ ‘ಸಭಾಕಲ್ಪತರು ಬಾತಿಹಿ’ ಶ್ಲೋಕಗಳೊಂದಿಗೆ ಕೂಚುಪುಡಿ ಶೈಲಿಯ ವಿವಿಧ ಅಡವುಗಳನ್ನು
ಪ್ರಸ್ತುತಪಡಿಸಿದರು.ನಂತರ ಕೂಚುಪುಡಿಯ ಅಠಾಣ ರಾಗ ಜತಿಸ್ವರ ಪ್ರಸ್ತುತಿ, ಶೃಂಗಾರ ರಸ ಪ್ರಧಾನವಾದ ‘ಕೃಷ್ಣ ಶಬ್ದ’, ಮೋಹನ ರಾಗ ಆದಿತಾಳದಲ್ಲಿ ಶ್ರೀ ಕೃಷ್ಣನನ್ನು ‘ರಾರಾ ಯದುವಂಶ ಸುಧಾ’ ಎಂಬುದಾಗಿ ಶೃಂಗಾರ ಭಾವದಿಂದ ನರ್ತಿಸಿದರು.

ಕೂಚುಪುಡಿ ಮುಕುಟಪ್ರಾಯವಾದ ‘ತರಂಗ’ ಮಿಶ್ರಛಾಪು ತಾಳ ಹಾಗೂ ಮೋಹನ ರಾಗದ ನಾರಾಯಣ ತೀರ್ಥರ ವಿರಚಿತ ‘ಬಾಲಗೋಪಾಲ ತರಂಗ’ ವನ್ನು ತಲೆಯ ಮೇಲೆ ನೀರು ತುಂಬಿದ ಹಿತ್ತಾಳೆ ಚೊಂಬನ್ನು ಹಾಗೂ ಕಾಲಿನ ಪಾದದ ಕೆಳಗೆ ಹರಿವಾಣ
ಇಟ್ಟು , ಕೈಯಲ್ಲಿ ದೀಪವನ್ನು ಇಟ್ಟು ಲೀಲಾಜಾಲವಾಗಿ ನರ್ತಿಸಿದರು.

ನಂತರ ಕೂಚುಪುಡಿ ಸಂಪ್ರದಾಯದಂತೆ ಕೂಚುಪುಡಿ ನೃತ್ಯ ಶೈಲಿಯಲ್ಲಿ ಅಗ್ರಗಣ್ಯವಾದ ‘ ಭಾಮಕಲಾಪ’ ನೃತ್ಯವನ್ನು ನೃತ್ಯ ವಿದುಷಿ ವೀಣಾ ಎಂ ಸಾಮಗರ ಪುತ್ರ, ಬಿ.ಎಂ.ಪವನ್ ರಾಜ ಸಾಮಗರವರು ಸ್ತ್ರೀವೇಷಧಾರಿಯಾಗಿ ಲಾಲಿತ್ಯದಿಂದ ಭಾಮೆಯ ವೈಯ್ಯರ
ಗತ್ತುಗಳನ್ನು ಪ್ರಸ್ತುತಪಡಿಸಿದರು.

ಅಂದಿನ ನೃತ್ಯ ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟುವಾಂಗ,ಹಾಡುಗಾರಿಕೆ,ನೃತ್ಯ ನಿರ್ದೇಶನದಲ್ಲಿ ಸಂಸ್ಥೆಯ ಗುರು ನೃತ್ಯ ವಿದುಷಿ ವೀಣಾ ಎಂ ಸಾಮಗ, ಮೃದಂಗದಲ್ಲಿ ಬಿ ಎಂ ಪೃಥ್ವಿರಾಜ್ ಸಾಮಗ, ಪಿಟೀಲಿನಲ್ಲಿ ವಿದ್ವಾನ್ ಶ್ರೀಧರ್ ಆಚಾರ್ಯ,ವರ್ಣಾಲಂಕರದಲ್ಲಿ ಶ್ರೀ ರಮೇಶ್ ಮತ್ತು ಶ್ರೀ ವಿಶ್ವರೂಪ ಮಧ್ಯಸ್ಥ ಹಾಗೂ ಕಾರ್ಯಕ್ರಮದ ನಿರೂಪಣೆಯಲ್ಲಿ ವಿದುಷಿ ಅಮೃತ ಪ್ರಸಾದ್ ಸಹಕರಿಸಿದರು.

 
 
 
 
 
 
 

Leave a Reply