ಅಜೆಕಾರು-14ನೆ‌ ಶತಮಾನದ ಶಾಸನ‌ ಪತ್ತೆ

ಅಜೆಕಾರು, ಗಾಣದಬೆಟ್ಟು ಪ್ರದೇಶದ ಅಮ್ಮು ಶೆಟ್ಟಿಯವರ ಜಾಗದಲ್ಲಿ 14ನೆ‌ ಶತಮಾನಕ್ಕೆ ಸೇರಿದ ಶಾಸನವನ್ನು ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ (ಅಂಗಸಂಸ್ಥೆ NTC-AOM) ಇದರ ಅಧ್ಯಯನ ನಿರ್ದೇಶಕರಾದ ಪ್ರೊ.‌ ಎಸ್.ಎ.ಕೃಷ್ಣಯ್ಯ ಮತ್ತು ಯು.ಕಮಲಬಾಯಿ ಪ್ರೌಢಶಾಲೆ, ಕಡಿಯಾಳಿ-ಉಡುಪಿ‌ಯ ನಿವೃತ್ತ ಶಿಕ್ಷಕರಾದ ಕೆ. ಶ್ರೀಧರ ಭಟ್ ಇವರ ನೇತೃತ್ವದಲ್ಲಿ ‌ಪ್ಲೀಚ್ ಇಂಡಿಯಾ ಫೌಂಡೇಶನ್- ಹೈದರಾಬಾದ್ ಇಲ್ಲಿನ ಸಹಾಯಕ ಸಂಶೋಧಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿರುತ್ತಾರೆ.

ಕನ್ನಡ ಲಿಪಿ ಮತ್ತು ಭಾಷೆಯ 10 ಸಾಲುಗಳನ್ನು ಒಳಗೊಂಡಿರುವ ಈ ದಾನ‌ ಶಾಸನವು 3 ಅಡಿ‌ ಎತ್ತರ‌ ಹಾಗೂ 2 ಅಡಿ ಅಗಲವನ್ನು ಹೊಂದಿದ್ದು, ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ-ಚಂದ್ರ ಮತ್ತು ಶಂಖ-ಚಕ್ರದ‌ ಕೆತ್ತನೆಯನ್ನು ಮಾಡಲಾಗಿದ್ದು, ಶಕವರುಷ 1331ನೆಯ ಮಾರ್ಗಶಿರ ಶುದ್ಧ 1 ಗುರುವಾರ ಅಂದರೆ‌ ಸಾಮಾನ್ಯ ವರ್ಷ 1409 ವಿರೋಧಿ ಸಂವತ್ಸರ ನವಂಬರ್ 07 ಗುರುವಾರಕ್ಕೆ ಸರಿ‌ಹೊಂದುತ್ತದೆ. 

ಮಂಣೆ (ಪ್ರಸ್ತುತ ‌ಮರ್ಣೆ)ಯ ವಿಷ್ಣು ದೇವರ ದೀವಿಗೆಗೆ ಆಜಕಾರ (ಪ್ರಸ್ತುತ ಅಜೆಕಾರು) ಕಾತು ಮೂಲಿಗೆ ಎಂಬ ವ್ಯಕ್ತಿಯು ಬೆಟ್ಟಿಂ (ಪ್ರಸ್ತುತ ಗಾಣದಬೆಟ್ಟು) ಪ್ರದೇಶದಿಂದ ಎಣ್ಣೆಯನ್ನು ಮತ್ತು 11 ತೆಂಗಿನಕಾಯಿಯನ್ನು (ಅಥವಾ 11 ತೆಂಗಿನಕಾಯಿಯ‌ ಎಣ್ಣೆ) ದಾನವಾಗಿ ಬಿಟ್ಟಿರುವುದರ‌ ಬಗ್ಗೆ ಶಾಸನವು ಉಲ್ಲೇಖಿಸುತ್ತದೆ.

ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಪ್ರಕಾಶ್ ಶೆಟ್ಟಿ ಮರ್ಣೆ, ಸುರೇಶ್ ಶೆಟ್ಟಿ ಗಾಣದಬೆಟ್ಟು‌ ಮನೆ, ರವಿ ಸಂತೋಷ್ ಆಳ್ವ ಮತ್ತು ಸುಶಂತ್ ಶೆಟ್ಟಿ ಸಹಕಾರ ನೀಡಿರುತ್ತಾರೆ.

 
 
 
 
 
 
 
 
 
 
 

Leave a Reply