ಉಡುಪಿ ಜಿಲ್ಲಾ ಕಸಾಪ ಚುನಾವಣೆ~ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುಬ್ರಹ್ಮಣ್ಯ ಬಾಸ್ರಿ ಕೆ.ಎಸ್ ನಾಮಪತ್ರ ಸಲ್ಲಿಕೆ

ಉಡುಪಿ, ಮಾ.30: ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ 2021ರ ಉಡುಪಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸಂಘಟಕ ಸುಬ್ರಹ್ಮಣ್ಯ ಬಾಸ್ರಿ ಕೆ.ಎಸ್. ಮಂಗಳವಾರ ಉಡುಪಿ ಮಿನಿವಿಧಾನ ಸೌಧದಲ್ಲಿ ಚುನಾವಣಾಧಿಕಾರಿ ಪ್ರದೀಪ್ ಕುರ್ಡೆಕರ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಅಂಬಾತನಯ ಮುದ್ರಾಡಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ  ಬಾಸ್ರಿ , ಕೇಂದ್ರ ಪರಿಷತ್ತಿನಲ್ಲಿರುವಂತೆ ಜಿಲ್ಲೆಯಲ್ಲಿಯೂ ಒಂದು ವ್ಯಕ್ತಿಗೆ ಒಂದು ಅವಧಿಗೆ ಮಾತ್ರ ಅಧ್ಯಕ್ಷರಾಗುವ ಬಗ್ಗೆ ಚಿಂತನೆ ನಡೆಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಸಾಹಿತಿಗಳು, ಕನ್ನಡ ಭಾಷಾ ಪಂಡಿತರು, ಕಲಾವಿದರು, ಸಂಘಟಕರನ್ನೊಳಗೊಂಡ ವಿದ್ವತ್ ಕೂಟ ರಚಿಸಲಾಗುವುದು. ಏಳು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕನ್ನಡ ಭವನವನ್ನು ನಿರ್ಮಿಸಲಾಗುವುದು ಎಂದರು.
ಜಿಲ್ಲೆಯ ಕೇಂದ್ರ ಭಾಗದಲ್ಲಿ ಸುಸಜ್ಜಿತ ಕಚೇರಿ ನಿರ್ಮಾಣ, ಉದಯೋನ್ಮುಖ ಲೇಖಕರು, ಕವಿಗಳು, ಕಲಾವಿದರ ಗುರುತಿಸಿ ಉತ್ತೇಜಿಸಲಾಗುವುದು. ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ನಿರಂತರ  ಪ್ರಯತ್ನ ಮಾಡಲಾಗುವುದು. ಜಿಲ್ಲಾ, ತಾಲೂಕು, ಹೋಬಳಿ ಮಟ್ಟದಲ್ಲಿ ಸಮರ್ಥ ಕಾರ್ಯಪಡೆ ರಚಿಸಿ, ಪರಿಷತ್ತಿನ ಚಟುವಟಿಕೆಗಳು ನಿತ್ಯ ನೂತನವಾಗಿ ರುವಂತೆ ಶ್ರಮಿಸಲಾಗುವುದು. ಸಮಾನ ಮನಸ್ಕ ಇತರ ಸಂಘಟನೆಗಳೊಂದಿಗೆ ಸೇರಿ  ಅರ್ಥ ಪೂರ್ಣ ಕಾರ್ಯಕ್ರಮ ಗಳನ್ನು ಆಯೋಜಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ  ಸಾಹಿತಿ ಕುಗೋ, ಲೇಖಕರಾದ ಕೆ.ಎಸ್. ಕಾರಂತ್, ಎಸ್.ವಿ.ಭಟ್, ನಾರಾಯಣ ಖಾರ್ವಿ, ನಿತ್ಯಾನಂದ ಶೆಟ್ಟಿ, ವಿಜಯ ಕುಮಾರ್ ಮುದ್ರಾಡಿ, ಮುರಳಿ ಕಡೆಕಾರ್, ಭಾಸ್ಕರ್ ರಾವ್ ಕಿದಿಯೂರ್  ಮೊದಲಾದವರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply