ಆರೂರು ನೀರಿಗಾಗಿ ಪರದಾಟ​ದೊಂದಿಗೆ ಪ್ರತಿಭಟನೆ

ವಾರಾಹಿ ಯೋಜನೆಯಡಿ ಉಡುಪಿ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಕಾಮಗಾರಿಯಿಂದ ಕುಡಿಯುವ ನೀರಿನ ಪೈಪ್‌ಗಳಿಗೆ ಹಾನಿಯಾಗಿ ನೀರಿಗೆ ಪರದಾಡುವ ಪ್ರಸಂಗ ಆರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೂರು ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಆಕ್ರೋಶಗೊಂಡ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

​ ​
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಮೂಲಕ ಸುಮಾರು ರೂ.​340ಕೋಟಿ ಅಂದಾಜಿನಲ್ಲಿ ವಾರಾಹಿ ಯೋಜನೆಯಡಿ ಈ ಕಾಮಗಾರಿ ಪ್ರಸ್ತುತ ಆರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಅಸಡ್ಡೆಯ ಕಾಮಗಾರಿಯಿಂದ ಪಂಚಾಯಿತಿ​ಯಿಂದ ಮನೆ ಮನೆಗೆ ಪೂರೈಕೆ ಆಗುವ ನೀರಿನ ಪೈಪ್‌ಗಳು ಒಡೆದು ಹೋಗಿ ಕಳೆದ ಒಂದು ವಾರದಿಂದ ನೀರು ಪೂರೈಕೆ ಆಗುತ್ತಿಲ್ಲ.
ಇದಲ್ಲದೇ ಟೆಲಿಫೋನ್ ಕೇಬಲ್ ಸಹ ತುಂಡಾಗಿ ಹಲವಾರು ದೂರವಾಣಿ ಸ್ತಬ್ದಗೊಂಡಿದೆ. ಕಳಪೆ ಕಾಮಗಾರಿ ಮತ್ತು ಮಂದಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಎರಡೂ ಬದಿಯಲ್ಲಿ ಮಣ್ಣಿನ ರಾಶಿ ಇರುವುದರಿಂದ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ. ರಸ್ತೆ ಸಂಪೂರ್ಣ ಧೂಳಿನಿಂದ ಕೂಡಿದೆ.
ಕಾಮಗಾರಿಯಿಂದ ರಸ್ತೆಯ ಬದಿಯಲ್ಲಿರುವ ಸಾರ್ವಜನಿಕರ ​ಕಂಪೌನ್ಡ  ಮತ್ತು ತಡೆಬೇಲಿ ಕೂಡಾ ಹಾಳಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ತನಕ ಕಾಮಗಾರಿ ನಡೆಸಬಾರದು ಎಂದು ಗ್ರಾಮಸ್ಥರು ಈ ಸಂದರ್ಭ ಹೇಳಿದರು. 
​​
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆರೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ರಾಜೀವ ಕುಲಾಲ ಕಾಮಗಾರಿಯಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ. ನೀರಿನ ವ್ಯವಸ್ಥೆ ಮತ್ತು ಸಾರ್ವಜನಿಕರಿಗೆ ಆದ ಹಾನಿಯನ್ನು ಸರಿ ಪಡಿಸುವ ತನಕ ಶಾಸಕ ರಘುಪತಿ ಭಟ್ ಅವರು ಕಾಮಗಾರಿ ನಡೆಸುವಂತಿಲ್ಲ ಎಂದು ಸೂಚಿಸಿದ್ದು, ತಕ್ಷಣ ಒಡೆದ ಪೈಪ್‌ಗಳನ್ನು ದುರಸ್ತಿ ಮಾಡಿ ಗ್ರಾಮಸ್ಥರಿಗೆ ನೀರಿನ ಸೌಲಭ್ಯ ಸಿಗುವಂತಾಗಬೇಕು ಎಂದು ತಿಳಿಸಿದರು.

ಇದಕ್ಕೆ ಸ್ಪಂದಿಸಿದ ಡಿ.ಆರ್.ಎಸ್ ಯೋಜನಾ ವ್ಯವಸ್ಥಾಪಕ ರಮೇಶ್ ಮರ‍್ನಾಲ್ಕು ದಿನದೊಳಗೆ ಹಾಳಾಗಿರುವ ಪೈಪ್‌ಗಳನ್ನು ದುರಸ್ತಿ ಮಾಡಿಕೊಡಲಾಗುವುದು. ಅಲ್ಲಿಯ ತನಕ ಟ್ಯಾಂಕರ್‌ಗಳಲ್ಲಿ ಮನೆ ಮನೆಗೆ ನೀರು ಒದಗಿಸಲಾಗುವುದು ಎಂದರು.
 
 
 
 
 
 
 
 
 
 
 

Leave a Reply